Advertisement

ರೊಹಿಂಗ್ಯಾರಿಂದ ದೇಶಕ್ಕೇ ಆತಂಕ

06:25 AM Sep 19, 2017 | Harsha Rao |

ಹೊಸದಿಲ್ಲಿ: “ದೇಶದಲ್ಲಿರುವ ರೊಹಿಂಗ್ಯಾ ಮುಸ್ಲಿಮರು ಅಕ್ರಮ ವಲಸಿಗರು. ಅವರನ್ನು ದೇಶದಿಂದ ಹೊರಕ್ಕೆ ಹಾಕುವುದು ಆಡಳಿತಾತ್ಮಕ ನಿರ್ಧಾರ. ಅದಕ್ಕೆ ತಡೆ ಯೊಡ್ಡಬೇಡಿ. ಜತೆಗೆ ಅವರಿಗೆ ಉಗ್ರ ಸಂಘ ಟನೆ ಐಸಿಸ್‌ ಹಾಗೂ ಐಎಸ್‌ಐ ಜತೆಗೆ ನಿಕಟ ಸಂಪರ್ಕ ಇದೆ.’ ಹೀಗೆಂದು ಕೇಂದ್ರ ಸರಕಾರ ಸೋಮವಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಅಫಿದವಿತ್‌ನಲ್ಲಿ ಹೇಳಿದೆ.

Advertisement

ಗಡೀಪಾರು ಕ್ರಮದಿಂದ ಅವರ ಮೂಲಭೂತ ಹಕ್ಕುಗಳಿಗೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದೂ ಹೇಳಿದೆ. ದೇಶದ ನಾಗರಿಕರಿಗೆ ಎಲ್ಲಿ ಬೇಕಾದರೂ ವಾಸ್ತವ್ಯ ಮಾಡಲು ಅವಕಾಶವಿದೆ. ಆದರೆ ಅಕ್ರಮ ವಲಸಿಗರಿಗೆ ಅಂಥ ಅವಕಾಶ ನೀಡಲಾಗದು ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ (ಎಎಸ್‌ಜಿ) ತುಷಾರ್‌ ಮೆಹ್ತಾ ಕೇಂದ್ರದ ಪರ ಸಲ್ಲಿಸಿದ ಅಫಿದವಿತ್‌ನಲ್ಲಿ ಹೇಳಿಕೊಂಡಿದ್ದಾರೆ.

ಅವರು ದೇಶ ವಿರೋಧಿ ಕೃತ್ಯ ಮತ್ತು ಅಕ್ರಮ ಹಣ ವರ್ಗಾವಣೆಯಲ್ಲಿ ತೊಡಗಿ ದ್ದಾರೆಂಬುದಕ್ಕೆ ದಾಖಲೆಗಳಿವೆ ಎಂದು ಸರಕಾರ ಪ್ರತಿಪಾದಿಸಿದೆ. ಅವರಿಗೆ ಪಾಕಿಸ್ಥಾನದ ಐಎಸ್‌ಐ, ಲಷ್ಕರ್‌-ಎ-ತಯ್ಯಬಾ ಇತರ ಪ್ರಮುಖ ಉಗ್ರ ಸಂಘಟನೆಗಳಾದ ಐಸಿಸ್‌, ಅಲ್‌-ಕಾಯಿದಾ ಜತೆ ನಿಕಟ ಸಂಪರ್ಕ ಇದೆ. ಈ ಬಗ್ಗೆ ಸರಕಾರದ ಬಳಿ ಸೂಕ್ತ ಆಧಾರಗಳಿವೆ ಎಂದು ಅಫಿದವಿತ್‌ನಲ್ಲಿ ಉಲ್ಲೇಖೀಸಲಾಗಿದೆ. ಅಗತ್ಯ ಬಿದ್ದರೆ ಅವರ ಬಗ್ಗೆ ಭದ್ರತಾ ಸಂಸ್ಥೆಗಳು ನೀಡಿರುವ ವರದಿಗಳನ್ನು ಮೊಹರು ಮಾಡಿದ ಲಕೋಟೆಯಲ್ಲಿ ಕೋರ್ಟ್‌ಗೆ ಸಲ್ಲಿಕೆ ಮಾಡುವುದಾಗಿಯೂ ಎಎಸ್‌ಜಿ ಹೇಳಿದ್ದಾರೆ.

ಒಪ್ಪಂದಕ್ಕೆ ಸಹಿ ಹಾಕಿಲ್ಲ: 1950ರಲ್ಲಿ ವಿಶ್ವಸಂಸ್ಥೆ ಅಂಗೀಕರಿಸಿದ ವಲಸಿಗರ ರಕ್ಷಣೆ ಸಂಬಂಧಿ ಒಪ್ಪಂದಕ್ಕೆ ಭಾರತ ಸಹಿ ಹಾಕಿಲ್ಲ. ಏಕೆಂದರೆ, ಅದು ದೇಶದ ಹಿತಾಸಕ್ತಿಗೆ ಮಾರಕವಾಗಿದೆ. ಆ ಒಪ್ಪಂದಕ್ಕೆ ಸಹಿ ಹಾಕಿದ್ದರೆ ವಲಸಿಗರನ್ನು ಅವರ ಮಾತೃದೇಶಕ್ಕೆ ಹಿಂತಿರುಗಬೇಕು ಎಂದು ಹೇಳುವಂತಿಲ್ಲ ಎಂದು ಮೆಹ್ತಾ ನ್ಯಾಯಪೀಠಕ್ಕೆ ಅರಿಕೆ ಮಾಡಿಕೊಂಡರು.
ಹೀಗಾಗಿ ವಲಸಿಗರನ್ನು ಅವರ ದೇಶಕ್ಕೆ ಮರಳಿ ಕಳುಹಿಸಬೇಕು ಎಂಬ ನಿರ್ಧಾರವನ್ನು ರೊಹಿಂಗ್ಯಾ ಮುಸ್ಲಿಮರು ಪ್ರಶ್ನಿಸುವಂತಿಲ್ಲ ಎಂದು ಎಎಸ್‌ಜಿ ನ್ಯಾಯಪೀಠಕ್ಕೆ ಮನದಟ್ಟು ಮಾಡಿ ಕೊಟ್ಟರು. ರೊಹಿಂಗ್ಯಾಗಳಿಂದ ದೇಶದಲ್ಲಿ ಬೌದ್ಧ ಧರ್ಮೀಯರ ವಿರುದ್ಧ ಹಿಂಸಾ ಕೃತ್ಯಗಳು ಸಂಭವಿಸಬಹುದು ಎಂದೂ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ನ್ಯಾಯಪೀಠ ಅದನ್ನು ಅಂಗೀಕರಿಸಿದ್ದು, ಮುಂದಿನ ವಿಚಾರಣೆ ಅ.3ಕ್ಕೆ ನಿಗದಿ ಮಾಡಿತು.     

ಅರ್ಜಿ ಸಲ್ಲಿಸಿದವರು ಯಾರು? ಅವರ ವಾದವೇನು?: ದೇಶದಲ್ಲಿರುವ ರೊಹಿಂಗ್ಯಾ ವಲಸಿಗರಾಗಿರುವ ಮೊಹಮ್ಮದ್‌ ಸಮಿ ಯುಲ್ಲಾ ಮತ್ತು ಮೊಹಮ್ಮದ್‌ ಶಾಕಿರ್‌ ಈ ಅರ್ಜಿ ಸಲ್ಲಿಸಿದ್ದಾರೆ. ಕೇಂದ್ರದ ನಿರ್ಧಾರ ವಿಶ್ವಸಂಸ್ಥೆಯ ವಲಸಿಗರ ಒಪ್ಪಂದಕ್ಕೆ ವಿರುದ್ಧವಾದದ್ದು ಎಂದಿದ್ದಾರೆ.

Advertisement

ಏನಿದು ರೊಹಿಂಗ್ಯಾ ಸಮಸ್ಯೆ?
ರೊಹಿಂಗ್ಯಾ ಎಂದರೆ ಮ್ಯಾನ್ಮಾರ್‌ನ ಮೂಲ ನಿವಾಸಿಗಳು. ಅಲ್ಲಿರುವ ಬೌದ್ಧ ಧರ್ಮೀಯರಿಗೂ ಅವರಿಗೂ ತಿಕ್ಕಾಟ ಆಗಾಗ ನಡೆಯುತ್ತದೆ. ಅವರಿಗೆ ಅಲ್ಲಿ ಪೌರತ್ವವಿಲ್ಲ. ಇತ್ತೀಚಿನ ವರ್ಷಗಳಲ್ಲಿ ಈ ಪಂಗಡದ ಕೆಲವರು ತೀವ್ರವಾದಿಗಳಾಗಿ ಹಿಂಸಾತ್ಮಕ ದಾರಿಯ ಮೂಲಕ ಹಕ್ಕು ಸ್ಥಾಪಿಸಲು ಹೊರಟಿದ್ದಾರೆ. ರಾಖೀನೆ ಪ್ರಾಂತ್ಯದಲ್ಲಿ ಮ್ಯಾನ್ಮಾರ್‌ ಸೇನೆ ಈ ಗುಂಪಿನ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತಿದೆ. 
ಹೀಗಾಗಿ, ಅಲ್ಲಿಂದ 3,70,000 ಮಂದಿ ಬಾಂಗ್ಲಾದೇಶಕ್ಕೆ ವಲಸೆ ಹೋಗಿದ್ದಾರೆ. 

ದಿಲ್ಲಿಯಲ್ಲಿ ಅಲ್‌ಖೈದಾ ಶಂಕಿತನ ಬಂಧನ
ಇತ್ತ ಅಲ್‌-ಖೈದಾ  ಜತೆ ನಿಕಟ ಸಂಪರ್ಕ ಹೊಂದಿದ್ದಾನೆಂದು ಹೇಳ ಲಾಗಿರುವ ಶೌಮನ್‌ ಹಕ್‌ (27) ಎಂಬಾತನನ್ನು ಬಂಧಿಸಿದ್ದಾರೆ. ದೇಶದಲ್ಲಿರುವ ರೊಹಿಂಗ್ಯಾಗಳಿಗೆ ಉಗ್ರ ತರಬೇತಿಗೆ ನಿಯೋಜಿತನಾಗಿದ್ದಾನೆಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next