Advertisement

Tennis: ರೋಹನ್‌ ಬೋಪಣ್ಣ ಮಹತ್ಸಾಧನೆ

11:47 PM Feb 06, 2024 | Team Udayavani |

ಕೊಡಗು ಮೂಲದ ಕರ್ನಾಟಕದ ರೋಹನ್‌ ಬೋಪಣ್ಣ ಭಾರತೀಯ ಟೆನಿಸ್‌ ರಂಗದ ಅಪ್ರತಿಮ ಸಾಧಕ. ಲಿಯಾಂಡರ್‌ ಪೇಸ್‌, ಮಹೇಶ್‌ ಭೂಪತಿ ಬಳಿಕ ಟೆನಿಸ್‌ ಕ್ಷೇತ್ರದಲ್ಲಿ ವಿಶ್ವಖ್ಯಾತಿಯ ಪ್ರಸಿದ್ಧಿ ಪಡೆದ ಬೋಪಣ್ಣ ತನ್ನ 35ರ ಹರೆಯದ ಬಳಿಕವೇ ಹಲವಾರು ದಾಖಲೆಗಳೊಂದಿಗೆ ಇತಿಹಾಸ ನಿರ್ಮಿಸಿ ಟೆನಿಸ್‌ ಅಭಿಮಾನಿಗಳನ್ನು ಅಚ್ಚರಿಯಲ್ಲಿ ಮುಳುಗಿಸಿದ್ದಾರೆ. ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿ ಗೆದ್ದ ಹಾಗೂ ಡಬಲ್ಸ್‌ನಲ್ಲಿ ವಿಶ್ವದ ನಂಬರ್‌ ವನ್‌ ಸ್ಥಾನಕ್ಕೇರಿದ ಅತೀ ಹಿರಿಯ ಆಟಗಾರರೆಂಬ ಖ್ಯಾತಿಗೆ ಪಾತ್ರರಾದ ಬೋಪಣ್ಣ ಈ ಸಾಲಿನ ಪದ್ಮಶ್ರೀ ಪ್ರಶಸ್ತಿಗೂ ಭಾಜನರಾಗಿದ್ದಾರೆ. 44ರ ಸನಿಹದಲ್ಲಿದ್ದರೂ ಅವರಲ್ಲಿ ಇನ್ನೂ ಶ್ರೇಷ್ಠಮಟ್ಟದ ಆಟ ಪ್ರದರ್ಶಿಸುವ ಉತ್ಸಾಹ ಸ್ವಲ್ಪವೂ ಕಡಿಮೆಯಾಗಿಲ್ಲ. ಟೆನಿಸ್‌ ಕ್ರೀಡೆಯಲ್ಲಿ ಅವರ ಸಾಧನೆಯ ಹಿನ್ನೋಟ ಇಲ್ಲಿದೆ.

Advertisement

1980ರಲ್ಲಿ ಜನನ
1980ರ ಮಾರ್ಚ್‌ ನಾಲ್ಕರಂದು ಬೆಂಗಳೂರಿನಲ್ಲಿ ಜನಿಸಿದ ರೋಹನ್‌ ಬೋಪಣ್ಣ ಕೊಡಗಿನಲ್ಲಿ ತನ್ನ ಬಾಲ್ಯವನ್ನು ಕಳೆದರು. ಅಪ್ರತಿಮ ಕ್ರೀಡಾಪ್ರೇಮಿಯಾಗಿದ್ದ ಅವರು ಹಾಕಿ, ಫ‌ುಟ್‌ಬಾಲ್‌ ಆಟದತ್ತ ಗಮನ ಹರಿಸಿದರು. 11ರ ಹರೆಯದ ವೇಳೆ ಟೆನಿಸ್‌ನತ್ತ ಒಲವು ಮೂಡಿ ಅಭ್ಯಾಸ ಆರಂಭಿಸಿದರು. ಆದರೂ 19ರ ಹರೆಯದ ಬಳಿಕವೇ ಅವರು ಪೂರ್ಣ ಪ್ರಮಾಣದಲ್ಲಿ ಟೆನಿಸ್‌ ಆಡಲು ನಿರ್ಧರಿಸಿದರು.

ಜೂನಿಯರ್‌ ಹಂತದಲ್ಲಿ ಯಶಸ್ಸು ಸಾಧಿಸಿದ ಬಳಿಕ 1999ರಲ್ಲಿ ಸೀನಿಯರ್‌ ಹಂತದಲ್ಲಿ ಆಟವಾಡಲು ತೊಡಗಿದರು. ಆರಂಭದಲ್ಲಿ ಸಿಂಗಲ್ಸ್‌ ಆಟದತ್ತ ಗಮನ ಹರಿಸಿದ್ದ ಅವರು ಆ ಬಳಿಕ ಡಬಲ್ಸ್‌ನತ್ತ ಆಕರ್ಷಿತರಾದರು. ತಜ್ಞ ಡಬಲ್ಸ್‌ ಆಟಗಾರರಾಗಿ ಪಳಗಿದ ಬಳಿಕ ಹಲವಾರು ಪ್ರಶಸ್ತಿ ಗೆದ್ದು ಮಿಂಚು ಹರಿಸಿದರು.

2008ರಲ್ಲಿ ಲಾಸ್‌ ಏಂಜಲಿಸ್‌ ಓಪನ್‌ನಲ್ಲಿ ಅಮೆರಿಕದ ಜತೆಗಾರ ಎರಿಕ್‌ ಬುಟೊರ್ಯಾಕ್‌ ಜತೆಗೂಡಿ ಪ್ರಶಸ್ತಿ ಗೆದ್ದಿರುವುದು ಬೋಪಣ್ಣ ಅವರ ಎಟಿಪಿ ಹಂತದ ಮೊದಲ ಪ್ರಶಸ್ತಿಯಾಗಿದೆ. ಆ ಬಳಿಕ ಎಟಿಪಿ ಟೂರ್‌ನಲ್ಲಿ ಅಮೋಘ ಸಾಧನೆಗೈದ ಅವರು ಇಷ್ಟರವರೆಗೆ 24 ಎಟಿಪಿ ಡಬಲ್ಸ್‌ ಪ್ರಶಸ್ತಿ ಗೆದ್ದು ಸಂಭ್ರಮಿಸಿದ್ದಾರೆ. ಇದರಲ್ಲಿ ಐದು ಎಟಿಪಿ 1000 ಮಾಸ್ಟರ್ ಕೂಟದ ಪ್ರಶಸ್ತಿ ಸೇರಿದೆ. ಇಷ್ಟು ಮಾತ್ರವಲ್ಲದೇ ಎಂಟು ಬಾರಿ ರನ್ನರ್‌ ಅಪ್‌ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

Advertisement

ಇಂಡೋಪಾಕ್‌ ಎಕ್ಸ್‌ಪ್ರೆಸ್‌
ಬೋಪಣ್ಣ ಪಾಕಿಸ್ಥಾನದ ಟೆನಿಸ್‌ ತಾರೆ ಐಸಮ್‌ ಉಲ್‌ ಹಕ್‌ ಕುರೇಶಿ ಜತೆಗೂಡಿ ಅಮೋಘ ಸಾಧನೆ ಮಾಡಿದ್ದಾರೆ. “ಇಂಡೋಪಾಕ್‌ ಎಕ್ಸ್‌ಪ್ರೆಸ್‌’ ಎಂದೇ ಖ್ಯಾತರಾಗಿದ್ದ ಅವರಿಬ್ಬರು ಟೆನಿಸ್‌ ಅಂಕಣದಲ್ಲಿ ಭಾರತ-ಪಾಕಿಸ್ಥಾನ ಸ್ನೇಹತ್ವದ ಸಂದೇಶ ಪಸರಿಸುತ್ತ ಸಾಧನೆಯ ಉತ್ತುಂಗ ಶಿಖರಕ್ಕೇರಿದರು. 2010ರಿಂದ 2014ರ ನಡುವೆ ಪ್ಯಾರಿಸ್‌ ಮಾಸ್ಟರ್‌ ಪ್ರಶಸ್ತಿ (2011) ಸಹಿತ ಐದು ಪ್ರಮುಖ ಕೂಟದ ಪ್ರಶಸ್ತಿ ಗೆದ್ದ ಅವರಿಬ್ಬರು 2010ರ ಯುಎಸ್‌ ಓಪನ್‌ ಗ್ರ್ಯಾನ್‌ ಸ್ಲಾಮ್‌ನ ಡಬಲ್ಸ್‌ನಲ್ಲಿ ಫೈನಲ್‌ ಹಂತಕ್ಕೇರಿದ ಸಾಧನೆ ಮಾಡಿದ್ದರು. ಪ್ಯಾರಿಸ್‌ ಪ್ರಶಸ್ತಿಯು ಬೋಪಣ್ಣ ಅವರ ಚೊಚ್ಚಲ ಎಟಿಪಿ ಮಾಸ್ಟರ್ ಪ್ರಶಸ್ತಿಯೂ ಆಗಿದೆ.

43ರ ಹರೆಯದ ಬೋಪಣ್ಣ ಆಸ್ಟೇಲಿಯದ ಮ್ಯಾಥ್ಯೂ ಎಬೆxನ್‌ ಜತೆಗೂಡಿ 2023ರ ಇಂಡಿಯನ್ಸ್‌ ವೆಲ್ಸ್‌ ಮಾಸ್ಟರ್ ಪ್ರಶಸ್ತಿ ಗೆದ್ದಿರುವುದು ಅವರ ಇತ್ತೀಚೆಗಿನ ಎಟಿಪಿ ಮಾಸ್ಟರ್ ಪ್ರಶಸ್ತಿಯಾಗಿದೆ. ಬೋಪಣ್ಣ ಈ ಪ್ರಶಸ್ತಿ ಗೆದ್ದ ಅತೀ ಹಿರಿಯ ಆಟಗಾರರೆಂಬ ಗೌರವ ಪಡೆದಿದ್ದು ಕೆನಡಾದ ಡೇನಿಯಲ್‌ ನೆಸ್ಟರ್‌ (42) ಹೆಸರಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದರು.

ಗ್ರ್ಯಾನ್‌ ಸ್ಲಾಮ್‌ನಲ್ಲಿ ಬೋಪಣ್ಣ
2006ರಲ್ಲಿ ಗ್ರ್ಯಾನ್‌ ಸ್ಲಾಮ್‌ಗೆ ಪದಾರ್ಪಣೆಗೈದಿದ್ದ ಬೋಪಣ್ಣ 2 ಬಾರಿ ಪ್ರಶಸ್ತಿ ಗೆದ್ದು ಸಂಭ್ರಮಿಸಿದ್ದಾರೆ. 2017ರಲ್ಲಿ ಕೆನಡಾದ ಗ್ಯಾಬ್ರಿಯೆಲಾ ಡಬ್ರೂವಿಸ್ಕಿ ಜತೆಗೂಡಿ ಫ್ರೆಂಚ್‌ ಓಪನ್‌ನ ಮಿಕ್ಸೆಡ್‌ ಡಬಲ್ಸ್‌ ಪ್ರಶಸ್ತಿ ಗೆದ್ದು. ಇದು ಅವರ ಚೊಚ್ಚಲ ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿ ಆಗಿದ್ದು ಈ ಸಾಧನೆಗೈದ ಭಾರತದ ನಾಲ್ಕನೇ ಆಟಗಾರರಾಗಿ ಮೂಡಿ ಬಂದರು. ಪೇಸ್‌, ಮಹೇಶ್‌ ಭೂಪತಿ, ಸಾನಿಯಾ ಮಿರ್ಜಾ ಇನ್ನುಳಿದ ಮೂವರು ಆಟಗಾರರು.

ಬೋಪಣ್ಣ ಅವರು 2018 ಮತ್ತು 2023ರ ಆಸ್ಟ್ರೇಲಿಯನ್‌ ಓಪನ್‌ನ ಮಿಕ್ಸೆಡ್‌ ಡಬಲ್ಸ್‌, 2010 ಮತ್ತು ಹಾಗೂ 2023ರ ಯುಎಸ್‌ ಓಪನ್‌ನ ಡಬಲ್ಸ್‌ ಫೈನಲಿಗೇರಿದ್ದ ಸಾಧನೆ ಮಾಡಿದ್ದರು. ಈ ವರ್ಷ (2024) 43 ವರ್ಷ 9 ತಿಂಗಳ ಪ್ರಾಯದಲ್ಲಿ ಎಬೆxನ್‌ ಜತೆಗೂಡಿ ಆಸ್ಟ್ರೇಲಿಯನ್‌ ಓಪನ್‌ ಡಬಲ್ಸ್‌ ಪ್ರಶಸ್ತಿ ಗೆದ್ದು ಈ ಸಾಧನೆಗೈದ ಅತೀ ಹಿರಿಯ ಆಟಗಾರರಾಗಿ ಇತಿಹಾಸ ನಿರ್ಮಿಸಿದರು.

ಒಲಿಂಪಿಕ್ಸ್‌ನಲ್ಲಿ ಬೋಪಣ್ಣ
2012 ಮತ್ತು 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಬೋಪಣ್ಣ ದೇಶವನ್ನು ಪ್ರತಿನಿಧಿಸಿದ್ದರು. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಸಾನಿಯಾ ಮಿರ್ಜಾ ಜತೆಗೂಡಿ ಕಂಚಿನ ಪದಕಕ್ಕಾಗಿ ತೀವ್ರ ಹೋರಾಟ ನೀಡಿ ಸೋತು ನಿರಾಶೆ ಅನುಭವಿಸಿದರು. ಮುಂಬರುವ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲೂ ಆಡುವ ನಿರೀಕ್ಷೆಯಿದೆ.

ಇನ್ನಿತರ ಸಾಧನೆ
2002ರಲ್ಲಿ ಡೇವಿಸ್‌ ಕಪ್‌ಗೆ ಪದಾರ್ಪಣೆಗೈದಿದ್ದ ಬೋಪಣ್ಣ ಅವರು ಭಾರತೀಯ ತಂಡವನ್ನು ಹಲವು ಬಾರಿ ಪ್ರತಿನಿಧಿಸಿ ಉನ್ನತ ಸಾಧನೆ ನೀಡಿದ್ದಾರೆ. 2006ರಲ್ಲಿ ಏಷ್ಯನ್‌ ಹಾಪ್‌ಮನ್‌ ಕಪ್‌ ಜಯಿಸಿದ್ದ ಅವರು 2018ರ ಜಕಾರ್ತಾ ಏಷ್ಯನ್‌ ಗೇಮ್ಸ್‌ನಲ್ಲಿ ದಿವಿಜ್‌ ಶರಣ್‌ ಜತೆಗೂಡಿ ಡಬಲ್ಸ್‌ ಚಿನ್ನ ದೊರಕಿಸಿಕೊಟ್ಟಿದ್ದರು.

ಸಹಾಯಹಸ್ತ
ಮಿಲಿಯನೇರ್‌ ಆಗಿದ್ದರೂ ಬೋಪಣ್ಣ ಅಶಕ್ತ ಮಕ್ಕಳ ನೆರವಿಗೆ ಕೈಜೋಡಿಸಿದ್ದಾರೆ. ತಮ್ಮ ಸ್ಟಾಪ್‌ ವಾರ್‌ ಸ್ಟಾರ್ಟ್‌ ಟೆನಿಸ್‌ ಸರಕುಗಳ ಮಾರಾಟದಿಂದ ಬರುವ ಲಾಭದ ಒಂದು ಅಂಶವನ್ನು ಅವರು ಗೋ ನ್ಪೋರ್ಟ್ಸ್ ಫೌಂಡೇಶನ್‌ ಮೂಲಕ ಭಾರತದ ಕಿರಿಯ ಒಲಿಂಪಿಕ್ಸ್‌ ಮತ್ತು ಪ್ಯಾರಾಲಿಂಪಿಕ್ಸ್‌ ಆ್ಯತ್ಲೀಟ್‌ಗಳಿಗೆ ವೃತ್ತಿಪರ ಪರಿಣತಿ ಮತ್ತು ಹಣಕಾಸಿನ ನೆರವು ನೀಡುತ್ತಿದ್ದಾರೆ. ಇಷ್ಟು ಮಾತ್ರವಲ್ಲದೇ ಕೊಡಗಿನಲ್ಲಿ ದೈಹಿಕವಾಗಿ ಅಂಗವಿಕಲ ಮಕ್ಕಳ ಶೈಕ್ಷಣಿಕ ಅಗತ್ಯವನ್ನು ಪೂರೈಸುವ ಶಾಲೆಗೆ ಹಣಕಾಸಿನ ನೆರವು ನೀಡುವುದಲ್ಲದೇ ಕೂರ್ಗ್‌ ಇನ್‌ಸ್ಟಿಟ್ಯೂಟ್‌ ಆಫ್ ಡೆಂಟಲ್‌ ಸೈನ್ಸಸ್‌ ಮೂಲಕ ಕನಿಷ್ಠ ವೆಚ್ಚದಲ್ಲಿ ದಂತ ಚಿಕಿತ್ಸೆ ನೀಡಲಾಗುತ್ತದೆ.

 ಶಂಕರನಾರಾಯಣ ಪಿ

Advertisement

Udayavani is now on Telegram. Click here to join our channel and stay updated with the latest news.

Next