ಇಂಡಿಯನ್ ವೆಲ್ಸ್: ಎಟಿಪಿ ಇಂಡಿಯನ್ ವೆಲ್ಸ್ ಮಾಸ್ಟರ್ ಟೆನಿಸ್ ಪಂದ್ಯಾವಳಿಯಲ್ಲಿ ಸ್ವಿಸ್ ತಾರೆ ರೋಜರ್ ಫೆಡರರ್ ಮತ್ತು ದಕ್ಷಿಣ ಕೊರಿಯಾದ ಅಪಾಯಕಾರಿ ಆಟಗಾರ ಹಿಯಾನ್ ಚುಂಗ್ ಕ್ವಾರ್ಟರ್ ಫೈನಲ್‌ನಲ್ಲಿ ಪರಸ್ಪರ ಎದುರಾಗಲಿದ್ದಾರೆ. ವಿಶ್ವದ ನಂ.1 ಖ್ಯಾತಿಯ ಫೆಡರರ್ ಬುಧವಾರ ರಾತ್ರಿಯ ಪಂದ್ಯದಲ್ಲಿ 7-5, 6-4 ನೇರ ಸೆಟ್‌ಗಳಿಂದ ಫ್ರಾನ್ಸ್‌ನ ಜೆರೆಮಿ ಚಾರ್ಡಿ ಅವರನ್ನು ಮಣಿಸಿದರು. ಇದು ಚಾರ್ಡಿ ವಿರುದ್ಧ ಆಡಿದ 5 ಪಂದ್ಯಗಳಲ್ಲಿ ಫೆಡರರ್ ಸಾಧಿಸಿದ 4ನೇ ಜಯ. ಇದೇ ವರ್ಷ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯೊಂದಿಗೆ 20ನೇ ಗ್ರಾನ್‌ಸ್ಲಾಮ್ ಕಿರೀಟ ಧರಿಸಿಕೊಂಡ ಫೆಡರರ್, ಈ ವರ್ಷದ ಎಲ್ಲ 15 ಪಂದ್ಯಗಳನ್ನು ಗೆದ್ದು ಪ್ರಚಂಡ ಫಾರ್ಮ್ ಪ್ರದರ್ಶಿಸಿದ್ದಾರೆ. ಇಲ್ಲಿ ಮುಂದುವರಿದು ಪ್ರಶಸ್ತಿ ಎತ್ತಿದರೆ ಆಗಲೂ ದಾಖಲೆಯೊಂದು ನಿರ್ಮಾಣವಾಗಲಿದೆ. ಆಗ ಫೆಡರರ್ ಅತೀ ಹೆಚ್ಚು 6 ಸಲ ಇಂಡಿಯನ್ ವೆಲ್ಸ್ ಪ್ರಶಸ್ತಿ ಗೆದ್ದಂತಾಗುತ್ತದೆ.
ಇನ್ನೊಂದು ಪಂದ್ಯದಲ್ಲಿ ಚುಂಗ್ 6-1, 6-3ರಿಂದ ಉರುಗ್ವೆಯ ಪಾಬ್ಲೊ ಕ್ಯುವಾಸ್ ಅವರನ್ನು ಮಣಿಸಿದರು. ಫೆಡರರ್ ಮತ್ತು ಚುಂಗ್ ವರ್ಷಾರಂಭದ ಆಸ್ಟ್ರೇಲಿಯನ್ ಓಪನ್‌ನಲ್ಲಿ ಪರಸ್ಪರ ಎದುರಾಗಿದ್ದರು. ಆಗ ಚುಂಗ್ ಗಾಯಾಳಾಗಿ ಹಿಂದೆ ಸರಿದಿದ್ದರು.
4ನೇ ಸುತ್ತಿನ ಇನ್ನೊಂದು ಪಂದ್ಯದಲ್ಲಿ ಕ್ರೊವೇಶಿಯಾದ ಬೋರ್ನ ಕೊರಿಕ್ ಅಮೆರಿಕದ ಟಯ್ಲರ್ ಫ್ರಿಟ್ಜ್ ಅವರನ್ನು 6-2, 6-7 (6-8), 6-4ರಿಂದ ಸೋಲಿಸಿದರು. ಶ್ರೇಯಾಂಕ ರಹಿತ ಆಟಗಾರನಾಗಿರುವ ಕೊರಿಕ್ ದಕ್ಷಿಣ ಆಫ್ರಿಕಾದ ರೆಡ್ ಹಾಟ್ ಟೆನಿಸಿಗ ಕೆವಿನ್ ಆ್ಯಂಡರ್ಸನ್ ಅವರನ್ನು ಕ್ವಾರ್ಟರ್ ಫೈನಲ್‌ನಲ್ಲಿ ಎದುರಿಸುವರು. ಆ್ಯಂಡರ್ಸನ್ ಸ್ಪೇನಿನ ಪಾಬ್ಲೊ ಕರೆನೊ ಬುಸ್ಟ ಅವರನ್ನು 4-6, 6-3, 7-6 (8-6)ರಿಂದ ಪರಾಭವಗೊಳಿಸಿದರು.