Advertisement

ಒಲಿಂಪಿಕ್ಸ್‌ 2021ಕ್ಕೆ:  ಈ ಹಿರಿಯ ತಾರೆಯರ “ಚಿನ್ನ”ದ ಬೇಟೆಗೆ ಹೊಡೆತ

09:08 AM Apr 04, 2020 | keerthan |

ಟೋಕಿಯೋ ಒಲಿಂಪಿಕ್ಸ್‌ 2021ಕ್ಕೆ ಮುಂದೂಡಲ್ಪಟ್ಟ ಕಾರಣ ಹಲವು ಹಿರಿಯ ಆಟಗಾರರ “ಚಿನ್ನ’ದ ಪದಕ ಬೇಟೆಗೆ ದೊಡ್ಡ ಹೊಡೆತ ಬೀಳುವ ಸಾಧ್ಯತೆಯಿದೆ. ಇವರಲ್ಲಿ ಟೆನಿಸ್‌ ದಿಗ್ಗಜರಾದ ರೋಜರ್‌ ಫೆಡರರ್‌, ಸೆರೆನಾ ವಿಲಿಯಮ್ಸ್‌, ಬ್ಯಾಡ್ಮಿಂಟನ್‌ ಆಟಗಾರ ಲಿನ್‌ ಡ್ಯಾನ್‌, ಓಟಗಾರ್ತಿ ಅಲಿಸನ್‌ ಫೆಲಿಕ್ಸ್‌ ಪ್ರಮುಖರು.

Advertisement

ರೋಜರ್‌ ಫೆಡರರ್‌
20 ಬಾರಿಯ ಗ್ರ್ಯಾನ್‌ ಸ್ಲಾಮ್‌ ಚಾಂಪಿಯನ್‌ ಆಗಿರುವ ರೋಜರ್‌ ಫೆಡರರ್‌ ಅವರಿಗೆ 2021ರ ಆಗಸ್ಟ್‌ ಗೆ 40 ವರ್ಷ ಆಗಲಿದೆ. 2008ರ ಬೀಜಿಂಗ್‌ ಗೇಮ್ಸ್‌ನಲ್ಲಿ ಸ್ಟಾನ್‌ ವಾವ್ರಿಂಕ ಜತೆಗೂಡಿ ಡಬಲ್ಸ್‌ನಲ್ಲಿ ಒಲಿಂಪಿಕ್‌ ಚಿನ್ನ ಗೆದ್ದಿದ್ದ ಅವರು ಸಿಂಗಲ್ಸ್‌ ನಲ್ಲಿ ಕ್ವಾರ್ಟರ್‌ ಫೈನಲ್‌ ತಲುಪಿದ್ದರು. 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಜಯಿಸಿದ್ದ ಅವರು, ಗಾಯದ ಸಮಸ್ಯೆಯಿಂದ 2016ರ ಗೇಮ್ಸ್‌ ನಿಂದ ದೂರ ಉಳಿದಿದ್ದರು. ಮುಂದಿನ ವರ್ಷ ಆಡುತ್ತಾರಾ ಎನ್ನುವುದು ಪ್ರಶ್ನೆ.

ಸೆರೆನಾ ವಿಲಿಯಮ್ಸ್‌
ಟೆನಿಸ್‌ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಆಟಗಾರ್ತಿಯರಲ್ಲಿ ಒಬ್ಬರಾದ, ಅಮೆರಿಕದ ಸೆರೆನಾ ವಿಲಿಯಮ್ಸ್‌ ಅವರಿಗೆ ಮುಂದಿನ ವರ್ಷದ ಸೆಪ್ಟೆಂಬರ್‌ಗೆ 40 ವರ್ಷ ತುಂಬಲಿದೆ. ನಾಲ್ಕು ಒಲಿಂಪಿಕ್‌ ಚಿನ್ನದ ಪದಕ ಗೆದ್ದಿರುವ ಸೆರೆನಾ, ತಾಯಿಯಾದ ಬಳಿಕ ತಮ್ಮ ಹಿಂದಿನ ಫಾರ್ಮ್ಅನ್ನು ಕಳೆದು ಕೊಂಡಿದ್ದಾರೆ. ಮುಂದಿನ ವರ್ಷದವರೆಗೆ ಅವರ ಲಯ ಉಳಿದಿರುತ್ತಾ? ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಾರಾ?

ಲಿನ್‌ ಡ್ಯಾನ್‌
ಚೀನಾ ಹಾಗೂ ಜಗತ್ತಿನ ಅತ್ಯಂತ ಯಶಸ್ವಿ ಮತ್ತು ವಿವಾದಾತ್ಮಕ ಬ್ಯಾಡ್ಮಿಂಟನ್‌ ಆಟಗಾರರಾಗಿರುವ ಲಿನ್‌ ಡ್ಯಾನ್‌ ಮುಂದಿನ ವರ್ಷ 37ರ ಹರೆಯಕ್ಕೆ ಕಾಲಿಡಲಿದ್ದಾರೆ. ಬೀಜಿಂಗ್‌ (2008) ಮತ್ತು ಲಂಡನ್‌ (2012) ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿರುವ ಅವರು, ವಿಶ್ವ ಚಾಂಪಿಯನ್‌ ಶಿಪ್‌ನಲ್ಲಿ 5, ವಿಶ್ವಕಪ್‌ನಲ್ಲಿ 2 ಚಿನ್ನದ ಪದಕ ಗೆದ್ದಿದ್ದಾರೆ. ಮುಂದಿನ ವರ್ಷದವರೆಗೆ ದೈಹಿಕ ದೃಢತೆ ಉಳಿಸಿ ಕೊಳ್ಳುವುದು ಕಷ್ಟವಿದೆ.

ಅಲಿಸನ್‌ ಫೆಲಿಕ್ಸ್
ಆರು ಬಾರಿ ಒಲಿಂಪಿಕ್‌ ಚಿನ್ನದ ಪದಕ ಗೆದ್ದಿರುವ ಏಕೈಕ ಮಹಿಳಾ ಟ್ರ್ಯಾಕ್‌ ಆ್ಯಂಡ್‌ ಫೀಲ್ಡ್‌ ಅಥ್ಲೀಟ್‌ ಆಗಿರುವ ಅಮೆರಿಕದ ಅಲಿಸನ್‌ ಫೆಲಿಕ್ಸ್‌ ಅವರು, ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ವಿದಾಯ ಹಾಡಲು ಕಳೆದ ಎರಡು ವರ್ಷಗಳಿಂದ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. ಈ ವರ್ಷದ ಅಂತ್ಯಕ್ಕೆ 35 ವರ್ಷ ಮುಗಿಸಲಿರುವ ಫೆಲಿಕ್ಸ್‌ ತನ್ನ ಸತತ ಐದನೇ ಒಲಿಂಪಿಕ್ಸ್‌ನಲ್ಲಿ ಪದಕ ಬೇಟೆ ಮುಂದುವರಿಸುವ ಯೋಚನೆ ಹೊಂದಿದ್ದರು.ಇನ್ನೂ ಒಂದು ವರ್ಷ ಮುಂದೂಡಿರುವುದು ಅವರಿಗೆ ಆಘಾತಕಾರಿಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next