ಭಟ್ಕಳ: ರಾಕಿಂಗ್ ಸ್ಟಾರ್ ಯಶ್ ಇಂದು ದೊಡ್ಡ ಸ್ಟಾರ್ ಆಗಿದ್ದರೂ, ಅವರ ಸರಳತೆಯನ್ನು ಮರೆತಿಲ್ಲ. ಎಲ್ಲಿ ಹೋದರೂ ಅವರು ಸಾಮಾನ್ಯರಂತೆ ಇರಲು ಇಷ್ಟಪಡುತ್ತಾರೆ. ಅಭಿಮಾನಿಗಳು ಎದುರಿಗೆ ಸಿಕ್ಕರೆ ಅವರೊಂದಿಗೆ ಸರಳತೆಯಿಂದಲೇ ನಡೆದುಕೊಳ್ಳುತ್ತಾರೆ.
ಇತ್ತೀಚೆಗೆ ಯಶ್ ಹಾಗೂ ಅವರ ಪತ್ನಿ ರಾಧಿಕಾ ಅವರು ಮಠವೊಂದಕ್ಕೆ ಭೇಟಿ ನೀಡುವ ವೇಳೆ ಸಾಮಾನ್ಯರಂತೆ ಅಂಗಡಿಗೆ ಭೇಟಿ ನೀಡಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಶಿರಾಲಿಯಲ್ಲಿರುವ ಚಿತ್ರಾಪುರ ಮಠಕ್ಕೆ ಯಶ್ ದಂಪತಿ ಶುಕ್ರವಾರ(ಫೆ.16 ರಂದು) ಭೇಟಿ ನೀಡಿದ್ದರು. ಈ ವೇಳೆ ಸ್ವಾಮೀಜಿಯ ಆಶೀರ್ವಾದ ಪಡೆದು ಯಶ್ ದಂಪತಿ ಸಾಮಾನ್ಯರಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಓಡಾಡಿದ್ದಾರೆ. ಗೂಡಂಗಡಿವೊಂದರಲ್ಲಿ ರಾಕಿಭಾಯ್ ತನ್ನ ಪತ್ನಿಗೆ ಐಸ್ ಕ್ಯಾಂಡಿ ಕೊಡಿಸಿದ್ದಾರೆ. ರಾಧಿಕಾ ಅಂಗಡಿ ಪಕ್ಕನೇ ಕೂತು ಐಸ್ ಕ್ಯಾಂಡಿ ಸವಿದಿದ್ದಾರೆ. ಇನ್ನು ಮಗಳು ಐರಾಳಿಗೆ ತಿಂಡಿ ತೆಗೆಸಿಕೊಟ್ಟಿದ್ದಾರೆ.
ಆ ಬಳಿಕ ನೆರೆದಿದ್ದ ಅಭಿಮಾನಿಗಳೊಂದಿಗೆ ಯಶ್ ದಂಪತಿ ಫೋಟೋಗೆ ಪೋಸ್ ನೀಡಿದ್ದಾರೆ. ಯಶ್ ಸರಳತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸದ್ಯ ರಾಕಿಂಗ್ ಸ್ಟಾರ್ ಗೀತುಮೋಹನ್ ದಾಸ್ ಅವರ ʼಟಾಕ್ಸಿಕ್ʼ ಸಿನಿಮಾದ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ.