Advertisement
ಜೂ.26 ರ ಮಧ್ಯ ರಾತ್ರಿ ಜೋರಾಗಿ ಮಳೆ ಸುರಿದ ಪರಿಣಾಮ ವಾರ್ಡ್ ಸಂಖ್ಯೆ 3 ರ ನಿವಾಸಿ ಜಾನಕಿ ಎಂಬುವವರ ಶೀಟ್ ಮನೆಯ ಮೇಲೆ ಬಂಡೆ ಕಲ್ಲೊಂದು ಉರುಳಿ ಬಿದ್ದಿದೆ. ಮನೆಯ ಮೇಲ್ಚಾಣಿ ಮತ್ತು ಅಡುಗೆ ಕೋಣೆ ಸಂಪೂರ್ಣವಾಗಿ ಹಾನಿಗೀಡಾಗಿದೆ. ಬಂಡೆಕಲ್ಲು ಅಡುಗೆ ಮನೆಗೆ ಬಿದ್ದ ಪರಿಣಾಮ ವಸ್ತುಗಳೆಲ್ಲವೂ ನಾಶವಾಗಿದೆ. ಅದೃಷ್ಟವಶಾತ್ ಪಕ್ಕದ ಕೋಣೆಯಲ್ಲೇ ನಿದ್ರಿಸುತ್ತಿದ್ದ ಜಾನಕಿ ಹಾಗೂ ಅವರ ಪುತ್ರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Related Articles
Advertisement
ವಾರ್ಡ್ ಸಂಖ್ಯೆ 3 ರ ಗ್ರಾ.ಪಂ ಸದಸ್ಯೆ ಜಯಶ್ರೀ ಸ್ಥಳ ಪರಿಶೀಲನೆ ನಡೆಸಿದರು.
ಹಿಂದಿನ ದಿನ ಭೂಮಿ ಕಂಪಿಸಿತ್ತು :
ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಗಡಿ ಪ್ರದೇಶದಲ್ಲಿ ಜೂ.25 ರಂದು ಬೆಳಗ್ಗೆ ಭೂಮಿ ಕಂಪಿಸಿತ್ತು. ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 2.3 ರಷ್ಟಿತ್ತು. ಕೊಡಗಿನ ಗಡಿ ಭಾಗವಾದ ಕರಿಕೆ, ಸಂಪಾಜೆ, ಚೆಂಬು ವಿಭಾಗದಲ್ಲಿ ಬೆಳಗ್ಗೆ 9 ಮತ್ತು 9.10 ಗಂಟೆಯ ನಡುವೆ ಕೆಲವು ಸೆಕೆಂಡ್‌ಗಳ ಕಾಲ ಭೂಮಿ ಕಂಪಿಸಿತ್ತು. ಕೆಲವು ಮನೆಗಳಲ್ಲಿ ಪಾತ್ರೆಗಳು ಅಲುಗಾಡಿದ ಅನುಭವವಾಗಿದ್ದರೆ, ಮತ್ತೆ ಕೆಲವು ಕಡೆ ಭೂಮಿಯೊಳಗೆ ದೊಡ್ಡ ಪ್ರಮಾಣದ ಶಬ್ಧವಾಗಿದೆ.
ಮಡಿಕೇರಿ ತಾಲ್ಲೂಕಿನ ಕರಿಕೆ ಗ್ರಾಮದಿಂದ ವಾಯುವ್ಯ ದಿಕ್ಕಿನಲ್ಲಿ 4.7 ಕಿಮೀ ದೂರದ ಪ್ರದೇಶದ ಭೂಮಿಯ 10 ಕಿ.ಮೀ. ಆಳದಲ್ಲಿ ಭೂಕಂಪನವಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿತ್ತು.
ಈ ಭೂಕಂಪನದ ಪರಿಣಾಮದಿಂದ ಬಂಡೆ ಉರುಳಿರಬಹುದೆಂದು ಕರಿಕೆ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡಿದ ನಂತರವಷ್ಟೇ ಸತ್ಯಾಂಶ ಹೊರ ಬೀಳಲಿದೆ.
ಹಿರಿಯ ಭೂವಿಜ್ಞಾನಿಗಳು ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರ ಆತಂಕ ದೂರ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.