ಹೊಸಪೇಟೆ: ಸತತ ಮಳೆಗೆ ಐತಿಹಾಸಿಕ ಹಂಪಿ ವಿರೂಪಾಕ್ಷೇಶ್ವರ ಸ್ವಾಮಿ ದೇವಾಲಯದ ಹಿಂಭಾಗದಲ್ಲಿರುವ ಲೋಕಪಾವನ ಪುಷ್ಕರಣಿ ಸಮೀಪದ ಶಿಥಿಲ ಲೋಕೇಶ್ವರ (ಶಿವ) ದೇವಾಲಯದ ಪ್ರವೇಶ ದ್ವಾರದ ಮೇಲಿನ ಕಲ್ಲುಬಂಡೆಗಳು ಕುಸಿದು ಬಿದ್ದಿವೆ.
ವಿರೂಪಾಕ್ಷ ದೇವಾಲಯ ಹಾಗೂ ವಿದ್ಯಾರಣ್ಯಮಠದ ಹಿಂಭಾಗದಲ್ಲಿರುವ ಈ ಪುರಾತನ ದೇಗುಲ ನಿರ್ವಹಣೆ ಕೊರತೆಯಿಂದ ಶಿಥಿಲಗೊಂಡಿದೆ. ಇತ್ತೀಚಿಗೆ ಸುರಿದ
ಧಾರಾಕಾರ ಮಳೆಗೆ ದೇಗುಲದ ಪ್ರವೇಶ ದ್ವಾರದ ಮೇಲಿನ ಬೃಹತ್ ಕಲ್ಲು ಕಂಬಗಳು ಧರೆಗುರುಳಿವೆ. ಕಳೆದ ಹತ್ತಾರು ವರ್ಷಗಳ ಹಿಂದೆಯೇ ದೇಗುಲದ
ಹಿಂಭಾಗ ಕೂಡ ಕುಸಿದು ಬಿದ್ದಿದೆ.
ದೇಗುಲ ಶಿಥಿಲಗೊಂಡ ಬಗ್ಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಗಮನಕ್ಕೆ ತಂದರೂ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಪರಿಣಾಮ ಪುರಾತನ ದೇಗುಲ ಅವಸಾನದ ಅಂಚಿನಲ್ಲಿದೆ. ದಕ್ಷಿಣಕಾಶಿ ಖ್ಯಾತಿಯ ಹಂಪಿ ಪುಣ್ಯ ಕ್ಷೇತ್ರವನ್ನು ಪುರಾತತ್ವ ಇಲಾಖೆ ಕೇವಲ ಸ್ಮಾರಕಗಳ ಪಟ್ಟಿಗೆ ಸೇರಿಸುತ್ತಿದೆ ಹೊರತು ಸಂರಕ್ಷಣೆ ಮಾಡುವಲ್ಲಿ ಹಿಂದೆ ಬಿದ್ದಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.