ಕುಂದಾಪುರ: ಕೊಲ್ಲೂರು ಗ್ರಾಮದ ಅವಲಕ್ಕಿ ಪಾರೆ ಎಂಬಲ್ಲಿ 19 ವಿಶಿಷ್ಟ ರಾಕ್ ಆರ್ಟ್ (ಶಿಲಾ ಕಲೆ) ಪತ್ತೆಯಾಗಿದೆ. ಈ ಶಿಲಾ ಕಲೆಗಳು ಸುಮಾರು ಕ್ರಿಸ್ತಪೂರ್ವ 10,000 ವರ್ಷಗಳಷ್ಟು ಹಿಂದಿನದ್ದಾಗಿರಬಹುದು ಎಂಬ ಅಂಶವನ್ನು ಇದನ್ನು ಪತ್ತೆ ಹಚ್ಚಿರುವ ಶಿರ್ವದ ಎಂ.ಎಸ್.ಆರ್.ಎಸ್. ಕಾಲೇಜಿನ ಪ್ರಾಚ್ಯಶಾಸ್ತ್ರ ವಿಭಾಗದ ತಂಡವು ಅಭಿಪ್ರಾಯಪಟ್ಟಿದೆ. ಪ್ರೊಫೆಸರ್ ಟಿ. ಮುರುಗೇಶಿ ಅವರು ಈ ತಂಡದ ನೇತೃತ್ವವನ್ನು ವಹಿಸಿದ್ದರು.
ಪ್ರಾಥಮಿಕ ಪರಿವೀಕ್ಷಣೆಯ ಬಳಿಕ ಈ ಶಿಲಾ ಕಲೆಗಳು 12,000 ವರ್ಷಗಳಷ್ಟು ಹಳೆಯದೆಂದು ತಿಳಿದುಬಂದಿದ್ದು, ಅಂದರೆ ಸುಮಾರು ಕ್ರಿಶ್ತಪೂರ್ವ 10,000 ವರ್ಷಗಳಷ್ಟು ಹಳೆಯದಾಗಿದೆ ಎಂದು ಅಭಿಪ್ರಾಯಿಸಲಾಗಿದೆ. ಮತ್ತು ಈ ಚಿತ್ರಗಳನ್ನು ಮೆಸೊಲಿಥಿಕ್ ಕಾಲಘಟ್ಟದಲ್ಲಿ ಇದ್ದರೆಂದು ನಂಬಲಾಗುತ್ತಿರುವ ಬೇಟೆಗಾರ ಜನಾಂಗಕ್ಕೆ ಸೇರಿದ ಜನರು ಕೆತ್ತಿರಬಹುದೆಂಬ ಸಂಶಯವನ್ನು ಸಂಶೋಧಕರು ವ್ಯಕ್ತಪಡಿಸಿದ್ದಾರೆ.
ಮನುಷ್ಯರು, ಕಾಡುಕೋಣ ಮತ್ತು ಇನ್ನಿತರ ಪ್ರಾಣಿಗಳ ಚಿತ್ರಗಳನ್ನು ಇಲ್ಲಿ ಶಿಲೆಯ ಮೇಲೆ ಕೆತ್ತಲಾಗಿದೆ. ಒಂದು ಚಿತ್ರದಲ್ಲಂತೂ ವ್ಯಕ್ತಿಯೊಬ್ಬನು ಪ್ರಾಣಿಯೊಂದನ್ನು ಬೇಟೆಯಾಡುತ್ತಿರುವ ಸನ್ನಿವೇಶದ ಚಿತ್ರ ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಇದರಿಂದ ಈ ಚಿತ್ರಗಳನ್ನು ಬೇಟೆಗಾರ ಸಮುದಾಯದವರೇ ಕೆತ್ತಿರಬಹುದೆಂಬ ಊಹೆಗೆ ಇನ್ನಷ್ಟು ಪುಷ್ಟಿ ದೊರೆಯುತ್ತದೆ.
ಕರ್ನಾಟಕ ಕರಾವಳಿ ಬಾಗದಲ್ಲಿ ಇದುವರೆಗೂ ದೊರಕಿರುವ ಶಿಲಾ ಕಲೆಗಳಲ್ಲಿ ಇದೇ ಅತ್ಯಂತ ಪ್ರಾಚೀನದ್ದಾಗಿದ್ದು ಇದುವರೆವಿಗೂ ನಮಗೆ 19 ಶಿಲಾ ಕಲೆಗಳು ಲಭ್ಯವಾಗಿದ್ದು ಸಮೀಪದಲ್ಲಿರುವ ಇನ್ನಷ್ಟು ಶಿಲೆಗಳನ್ನು ಪರಿಶೀಲನೆಗೊಳಪಡಿಸಿದಾಗ ಇನ್ನಷ್ಟು ಶಿಲಾ ಕಲೆಗಳು ಲಭಿಸುವ ಸಾಧ್ಯತೆಗಳಿವೆ ಎಂದು ಸಂಶೋಧನಾ ತಂಡದ ನೇತೃತ್ವ ವಹಿಸಿರುವ ಪ್ರೊ. ಮುರುಗೇಶಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೆ ಕೊಲ್ಲೂರು ಆಸುಪಾಸಿನಲ್ಲಿ 12,000 ವರ್ಷಗಳಷ್ಟು ಹಿಂದೆಯೇ ಜನಜೀವನ ಇದ್ದಿರಬೇಕೆಂಬ ಊಹೆಯನ್ನು ಮುರುಗೇಶಿ ಅವರು ವ್ಯಕ್ತಪಡಿಸಿದ್ದಾರೆ.