Advertisement

ಕೋವಿಡ್‌-19 ವಿರುದ್ಧ ಸೆಣಸಲು ರೋಬೋಟ್‌ಗಳು

07:44 PM Apr 11, 2020 | mahesh |

ಸ್ಯಾನ್‌ ಫ್ರಾನ್ಸಿಸ್ಕೋ: ಮಾರಣಾಂತಿಕ ಕೋವಿಡ್‌-19 ವಿರುದ್ಧ ಸೆಣಸಾಡಲು ವಿಶ್ವದ ಪ್ರತಿಯೊಂದು ರಾಷ್ಟ್ರಗಳು ಒಂದಲ್ಲ ಒಂದು ಉಪಾಯವನ್ನು ಹುಡುಕುತ್ತಲೇ ಇವೆ. ಒಮ್ಮೆಲೆ ಆಕ್ರಮಿಸುತ್ತಿರುವ ಸೋಂಕಿಗೆ ಎದುರಾಗಿ ಸದ್ಯಕ್ಕೆ ಇರುವ ವ್ಯವಸ್ಥೆಯ ಸಾಕಾಗುತ್ತಿಲ್ಲ. ವಿಚಿತ್ರವೆಂದರೆ, ಆರೋಗ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಹೆಚ್ಚು ಬೇಕಾದದ್ದು ಮಾನವ ಸಂಪನ್ಮೂಲವೇ. ಅದರ ಕೊರತೆಯೇ ಬಹುತೇಕ ದೇಶಗಳನ್ನು ಕಾಡುತ್ತಿದೆ. ಇಂಥ ಕೊರತೆಯನ್ನು ನೀಗಿಸುವುದಲ್ಲದೇ, ತ್ವರತಿಗತಿಯಲ್ಲಿ ಹಾಗೂ ದಕ್ಷತೆಯಿಂದ ಕೆಲಸ ಮಾಡಲು ಜಗತ್ತು ರೋಬೊಟ್‌ಗಳನ್ನು ಬಳಸುತ್ತಿವೆ. ಭಾರತ ಸೇರಿದಂತೆ ಜಗತ್ತಿನ ಪ್ರಮುಖ ರಾಷ್ಟ್ರಗಳಲ್ಲಿ ರೋಬೊಟ್‌ಗಳು ರೋಗಿಗಳಿಗೆ ಔಷಧ ಸೇರಿದಂತೆ ಆಹಾರ ಪೂರೈಕೆಯಲ್ಲೂ ನೆರವಾಗುತ್ತಿರುವುದು ಅಚ್ಚರಿ ಮೂಡಿಸಿದೆ.

Advertisement

ಚೀನದಲ್ಲಿ ರೋಬೊಟ್‌​
ಕೋವಿಡ್‌-19 ಉಲ್ಬಣಿಸಿದ ಚೀನದ ವುಹಾನ್‌ನ ಆಸ್ಪತ್ರೆಗಳಲ್ಲಿ ರೋಬೊಟ್‌ಗಳೇ ಅಲ್ಲಿನ ರೋಗಿಗಳನ್ನು ತಾತ್ಕಾಲಿಕವಾಗಿ ನೋಡಿಕೊಂಡಿದ್ದವು. ಬೀಜಿಂಗ್‌ನ ಆಸ್ಪತ್ರೆಯಲ್ಲೂ ಇದೇ ರೋಬೊಟ್‌ಗಳು ರೋಗಿಗಳಿಗೆ ಊಟ ಬಡಿಸಿ, ತಾಪಮಾನದ ಪರೀಕ್ಷೆಯನ್ನೂ ಮಾಡಿದ್ದವು ಎಂದು ವರದಿಯಾಗಿತ್ತು. ಇದೀಗ ಇದೇ ಮಾದರಿಯನ್ನೇ ಥೈಲ್ಯಾಂಡ್‌, ಇಸ್ರೇಲ್‌ ಮತ್ತು ಇತರ ಕೆಲವು ದೇಶಗಳ ಆಸ್ಪತ್ರೆಗಳಲ್ಲಿನ ರೋಗಿಗಳ ಶುಶ್ರೂಷೆಗೂ ಬಳಸಲಾಗುತ್ತಿದೆ.

ನೆರವಿಗೆ ಬಂದ ಬೀಮ್‌ಪ್ರೊ
ಕೆಲವು ರೋಬೊಟ್‌ಗಳು ರೋಗಿಗಳ ಸಾಮಾನ್ಯ ಚೆಕಪ್‌ ಕಾರ್ಯವನ್ನೂ ಮಾಡುತ್ತವೆ. ಸಿಂಗಾಪುರದ ಅಲೆಕ್ಸಾಂಡ್ರಾ ಆಸ್ಪತ್ರೆಯಲ್ಲಿ, ಕೊರೊನಾ ರೋಗಿಗಳಿಗೆ ಅಥವಾ ಪ್ರತ್ಯೇಕ ವಾರ್ಡ್‌ಗಳಲ್ಲಿರುವ ಕೊರೊನಾ ಶಂಕಿತರಿಗೆ ಔಷಧಿ ಮತ್ತು ಊಟವನ್ನು ನೀಡಲು ಬೀಮ್‌ಪ್ರೊ ಎಂಬ ರೊಬೊಟ್‌ ಅನ್ನು ಬಳಸಲಾಗುತ್ತಿದೆ. ವೈದ್ಯರು ರೋಗಿಗಳ ವಾರ್ಡ್‌ನ ಹೊರಗಿನಿಂದ ಕಂಪ್ಯೂಟರ್‌ ಮೂಲಕ ರೋಬೊಟ್‌ಗಳನ್ನು ನಿಯಂತ್ರಿಸುತ್ತಿದ್ದು, ರೋಗಿಯೊಂದಿಗೆ ಸ್ಕ್ರೀನ್‌ ಮತ್ತು ಕೆಮರಾ ಮೂಲಕ ಸಂಭಾಷಣೆ ನಡೆಸುತ್ತಿದ್ದಾರೆ. ಇದು ದಾದಿಯರ ಕೊರತೆಯನ್ನು ತುಂಬುವುದರಲ್ಲೂ ಅನುಕೂಲವಾಗಲಿದೆ.

ಎಲ್ಲೆಲ್ಲಿ ರೋಬೊಟ್‌ ಅಳವಡಿಕೆ ?
ರಾಜಸ್ಥಾನದ ಸವಾಯಿ ಮಾನ್‌ ಸಿಂಗ್‌ಆಸ್ಪತ್ರೆಯಲ್ಲಿ ರೋಗಿಗಳಿಗೆ ಅಗತ್ಯ ಔಷಧ ಹಾಗೂ ವಸ್ತುಗಳನ್ನು ನೀಡಲು ರೋಬೊಟ್‌ಗಳನ್ನು ಬಳಸುತ್ತಿದ್ದು, ಅದೇ ರೋಬೊಟ್‌ಗಳು ಸೋಂಕಿತರಿಗೆ ಔಷಧ, ಊಟ ಪೂರೈಕೆಯಂಥ ಸೇವೆಯನ್ನೂ ಮಾಡುವ ಮೂಲಕ ಇತ್ತೀಚೆಗೆ ದೇಶದ ಗಮನ ಸೆಳೆದಿತ್ತು. ಇನ್ನೊಂದೆಡೆ ತಮಿಳುನಾಡಿನ ಕೊಯಮತ್ತೂರು ಮೂಲದ ಯುವಕರು ಕೂಡಾ ಕೋವಿಡ್‌-19 ವಿರುದ್ಧ ಹೋರಾಡಲು ರೋಬೊಟ್‌ ಸಿದ್ಧಪಡಿಸಿದ್ದು, ಈ ರೋಬೊಟ್‌ ಆಸ್ಪತ್ರೆಗಳಲ್ಲಿ ವೈದ್ಯರಿಗೆ ಸಹಕಾರ ನೀಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next