ನವದೆಹಲಿ: ಒಡಿಶಾದ ಪುರಿಯಲ್ಲಿ ಜು.1ರಿಂದ ವಿಶ್ವವಿಖ್ಯಾತ ಜಗನ್ನಾಥ ರಥಯಾತ್ರೆ ಶುರುವಾಗಿದೆ.ಲಕ್ಷಾಂತರ ಮಂದಿ ಭಾಗವಹಿಸಿದ್ದಾರೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ವಿಷಯ ಇದಲ್ಲ. ಜೈ ಮಕ್ವಾನ ಎಂಬ ವ್ಯಕ್ತಿಯೊಬ್ಬರು ಗುಜರಾತ್‌ನ ವಡೋದರಾದಲ್ಲಿ ಪುಟ್ಟ ರೊಬೊಟ್ ಒಂದನ್ನೇ ಜಗನ್ನಾಥನ ರಥದಂತೆ ಮಾಡಿ ರಸ್ತೆಯಲ್ಲಿ ಯಾತ್ರೆ ಮಾಡಿದ್ದಾರೆ. ಇದನ್ನು ಬ್ಲ್ಯೂಟೂತ್ ಮೂಲಕ ನಿಯಂತ್ರಿಸಲಾಗಿದೆ. ಈ ವಿಡಿಯೊ ಟ್ವಿಟರ್‌ನಲ್ಲಿ ಭಾರೀ ಸದ್ದು ಮಾಡಿದೆ. ಲಕ್ಷಕ್ಕೂ ಅಧಿಕ ಮಂದಿ ಅದನ್ನು ವೀಕ್ಷಿಸಿದ್ದಾರೆ.
ರೊಬೋಟ್ ರಥದ ಪಕ್ಕ ಕೆಲವರು ನಡೆದುಕೊಂಡು ಹೋಗುತ್ತಿರುವುದನ್ನು ನೀವು ಕಾಣಬಹುದು. ಕೆಲವರು ಹೂವುಗಳನ್ನು ಹಾಕಿದರೆ, ಕೆಲವರು ಚಾಮರಗಳನ್ನು ಬೀಸುತ್ತಿದ್ದಾರೆ. ಇದನ್ನು ಜೈ ಮಕ್ವಾನ, ವಿಜ್ಞಾನ ಮತ್ತು ಸಂಪ್ರದಾಯ ಸಂಯೋಜನೆ ಎಂದು ವರ್ಣಿಸಿದ್ದಾರೆ. ಆದರೆ ರೊಬೋಟಿಕ್ ರಥದ ಕುರಿತು ಹೆಚ್ಚಿನ ಮಾಹಿತಿಗಳೇನು ತಿಳಿದುಬಂದಿಲ್ಲ.
ಸಾಂಪ್ರದಾಯಿಕವಾಗಿ ನೋಡುವುದಾದರೆ ದೇವರ ಉತ್ಸವಮೂರ್ತಿಗಳನ್ನು ಮರದ ರಥಗಳಲ್ಲಿರುವ ಸಿಂಹಾಸನದ ಮೇಲೆ ಇರಿಸಲಾಗುತ್ತದೆ. ರಥಕ್ಕೆ ಹಗ್ಗ ಕಟ್ಟಿ ಸಾವಿರಾರು ಮಂದಿ ಅದನ್ನು ಎಳೆಯುತ್ತಾರೆ. ಜಗನ್ನಾಥ ರಥಯಾತ್ರೆ ಇಡೀ ದೇಶದಲ್ಲಿ ಇದೇ ಕಾರಣಕ್ಕೆ ವಿಶೇಷ ಸ್ಥಾನ ಪಡೆದಿದೆ. ಭಾರತದಾದ್ಯಂತ ದೇವಸ್ಥಾನಗಳಲ್ಲಿ ಇದೇ ರೀತಿಯ ರಥಯಾತ್ರೆಗಳು ಮಾಮೂಲಿ.