Advertisement

ಹೆದ್ದಾರಿಯಲ್ಲಿ ದರೋಡೆ: ಮೂವರ ಸೆರೆ

08:15 AM Feb 17, 2018 | |

ಮಂಗಳೂರು: ಪಣಂಬೂರಿನ ಕುದುರೆಮುಖ ಜಂಕ್ಷನ್‌ ಬಳಿ ತಣ್ಣೀರುಬಾವಿ ಕಡೆಗೆ ಹಾದು ಹೋಗುವಲ್ಲಿ ಹೆದ್ದಾರಿಯಲ್ಲಿ ಸಾಗುವ ವಾಹನಗಳನ್ನು ತಡೆದು ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿ, ಹಣ ಹಾಗೂ ಚಿನ್ನಾಭರಣ ದರೋಡೆ ಮಾಡುತ್ತಿದ್ದ ತಂಡದ ಮೂವರ‌ನ್ನು ಪಣಂಬೂರು ಪೊಲೀಸರು ಶುಕ್ರವಾರ ಬೆಳಗ್ಗಿನ ಜಾವ ಬಂಧಿಸಿದ್ದಾರೆ.

Advertisement

ಉಡುಪಿ ಅಂಬಲಪಾಡಿಯ ಪ್ರದೀಪ್‌ ಕುಮಾರ್‌ ಯಾನೆ ಪ್ರದೀಪ್‌ ಮೆಂಡನ್‌ (47), ಕುದ್ರೋಳಿ ಬೆಂಗ್ರೆಯ ಸುನಿಲ್‌ (20) ಮತ್ತು ಬೋಳಾರದ ಚರಣ್‌ ಶೇಟ್‌ ಬಂಧಿತರು. ಭರತ್‌ ಮತ್ತು ನವೀನ್‌ ಕಾರ್ಯಾಚರಣೆ ವೇಳೆ ಓಡಿ ತಪ್ಪಿಸಿಕೊಂಡಿದ್ದಾರೆ. ಬಂಧಿತರಿಂದ ತಲವಾರು, ಮೆಣಸಿನ ಹುಡಿ, ಹಗ್ಗವನ್ನು  ವಶಪಡಿಸಿಕೊಳ್ಳಲಾಗಿದೆ. 

ಕೊಲೆಗೆ ಸಂಚು
 ತಣ್ಣೀರುಬಾವಿಯಲ್ಲಿ ಇತ್ತೀಚೆಗೆ ನಡೆದ ಭರತೇಶ್‌ನ ಅಣ್ಣ ಶಿವರಾಜ್‌ನನ್ನು ಅನೀಶ್‌ ಹಾಗೂ ಸಹಚರರು ಕೊಲೆ ಮಾಡಿದ್ದರು. ಇದಕ್ಕೆ ಪ್ರತೀಕಾರವಾಗಿ ಅನೀಶ್‌ ಕಡೆಯವರನ್ನು ಕೊಲೆ ಮಾಡಿದ ಬಳಿಕ ಹೊರ ರಾಜ್ಯಕ್ಕೆ ಪರಾರಿಯಾಗಲು ಸಂಚು ರೂಪಿಸಿದ್ದು, ಅದಕ್ಕಾಗಿ ಹಣದ ಅವಶ್ಯಕತೆ ಇದ್ದುದರಿಂದ ಹೆದ್ದಾರಿ ದರೋಡೆ ನಡೆಸಲು ನಿಂತಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು  ಬಾಯ್ಬಿಟ್ಟಿದ್ದಾರೆ. 

ಆರೋಪಿ ಪ್ರದೀಪ್‌ ಮೇಲೆ ಮಂಗಳೂರು ನಗರ ಮತ್ತು ಹೊರ ಭಾಗದಲ್ಲಿ 14 ವಿವಿಧ ಪ್ರಕರಣಗಳಿವೆ. ಚರಣ್‌ ಶೇಟ್‌ ಮೇಲೆ 4 ಪ್ರಕರಣಗಳಿವೆ. ಬೆಳಗ್ಗಿನ ಜಾವ 3.30ಕ್ಕೆ ಲಭಿಸಿದ ಖಚಿತ ಮಾಹಿತಿ ಮೇರೆಗೆ 4.10ಕ್ಕೆ ಪಿಎಸ್‌ಐ ಉಮೇಶ್‌ ಕುಮಾರ್‌ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದಾಗ ಐದು ಮಂದಿ ಆರೋಪಿಗಳು ದ್ವಿಚಕ್ರ ವಾಹನದೊಂದಿಗೆ ಯಾವುದೋ ದುಷ್ಕೃತ್ಯ ನಡೆಸಲು ನಿಂತಿರುವುದು ಗಮನಕ್ಕೆ ಬಂದಿತ್ತು. 

ಪೊಲೀಸರನ್ನು ಕಂಡಾಗ ಆರೋಪಿಗಳು ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಈ ಸಂದರ್ಭ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next