Advertisement

ಪೊಲೀಸರ ಸೋಗಿನಲ್ಲಿ ಅತ್ತೆ ಮನೆ ದರೋಡೆ

11:37 AM Jan 16, 2022 | Team Udayavani |

ಬೆಂಗಳೂರು: ವ್ಯವಹಾರಕ್ಕೆ ಹಣ ಕೊಡಲಿಲ್ಲ ಎಂದು ಪೊಲೀಸರ ಸೋಗಿನಲ್ಲಿ ಅತ್ತೆಯ ಮನೆಗೆ ನುಗ್ಗಿ ದರೋಡೆ ಮಾಡಿದ್ದ ಸೋದರ ಅಳಿಯ ಸೇರಿ ಐವರು ಮಹಾಲಕ್ಷ್ಮೀ ಲೇಔಟ್‌ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ಮಹಾಲಕ್ಷ್ಮೀ ಲೇಔಟ್‌ ನಿವಾಸಿ ಪುನೀತ್‌(24), ಬಾಲಕೃಷ್ಣ(23), ರೋಹನ್‌ (24), ಪೃಥ್ವಿರಾಜ(25), ಚೇತನ್‌ ಕುಮಾರ್‌(22) ಬಂಧಿತರು. ಆರೋಪಿಗಳಿಂದ 16 ಲಕ್ಷ ರೂ. ಮೌಲ್ಯದ 318 ಗ್ರಾಂ ತೂಕದ ಚಿನ್ನಾಭರಣ, 10.30 ಲಕ್ಷ ರೂ. ನಗದು, ಎರಡು ಬೈಕ್‌ಗಳು ಹಾಗೂ ಒಂದು ಮಾರಕಾಸ್ತ್ರ ವಶಕ್ಕೆ ಪಡೆಯಲಾಗಿದೆ.

ಆರೋಪಿಗಳು ಡಿ.31ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಸಿವಿಲ್‌ ಎಂಜಿನಿಯರ್‌ ಸಾಮ್ಯನಾಯ್ಕ ಎಂಬುವರ ಮನೆಗೆ ನುಗ್ಗಿ 19 ಲಕ್ಷ ರೂ. ನಗದು ಮತ್ತು 500 ಗ್ರಾಂಚಿನ್ನಾಭರಣ ದೋಚಿ ಪರಾರಿಯಾಗಿªದರು. ಅಲ್ಲದೆ, ಸಾಮ್ಯನಾಯ್ಕ ಮತ್ತು ಅವರ ಪುತ್ರ ಮನೋಹರ್‌ನನ್ನು ಅಪಹರಿಸಿದ್ದರು ಎಂದು ಪೊಲೀಸರು ಹೇಳಿದರು.

ಆರೋಪಿಗಳ ಪೈಕಿ ರೋಹನ್‌, ದೂರುದಾರ ಸಾಮ್ಯನಾಯ್ಕ ಪತ್ನಿ ವಿನೋದಬಾಯಿ ಅವರ ಅಣ್ಣನ ಮಗನಾಗಿದ್ದು, ಮಹಾಲಕ್ಷ್ಮೀ ಲೇಔಟ್‌ನಲ್ಲಿ ಆರೋಪಿ ಪುನೀತ್‌ ಜತೆ ಛಾಯಾಗ್ರಾಹಕನಾಗಿ ಕೆಲಸ ಮಾಡುತ್ತಿದ್ದ. ಪುನೀತ್‌ ಮತ್ತು ಪೃಥ್ವಿರಾಜ ವಿರುದ್ಧ ಗಂಗಮ್ಮನಗುಡಿ, ಸುಬ್ರಹ್ಮಣ್ಯನಗರ ಠಾಣೆಯಲ್ಲಿ ದ್ವಿಚಕ್ರ ವಾಹನ ಕಳವು ಪ್ರಕರಣಗಳಿವೆ.

ಬಾಲಕೃಷ್ಣ ಬಾಗಲಗುಂಟೆ ಮತ್ತು ಪೀಣ್ಯ ಠಾಣೆ ರೌಡಿಶೀಟರ್‌ ಆಗಿದ್ದು, ಕೊಲೆ, ಕೊಲೆ ಯತ್ನ ಪ್ರಕರಣ ಗಳಿವೆ. ಹಾಗೆಯೇ ಮಂಡ್ಯ ಜಿಲ್ಲೆ ವಿವಿಧ ಠಾಣೆಯಲ್ಲಿ ದರೋಡೆ ಪ್ರಕರಣಗಳು ದಾಖಲಾಗಿವೆ. ಚೇತನ್‌ ಕುಮಾರ್‌ ಯಲಹಂಕ ಠಾಣೆ ರೌಡಿಶೀಟರ್‌ ಆಗಿದ್ದು, ಕೊಲೆ ಪ್ರಕರಣ ದಾಖಲಾಗಿದೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.

Advertisement

ಸಾಮ್ಯನಾಯ್ಕ ಆರ್ಥಿಕವಾಗಿ ಸದೃಢರಾಗಿದ್ದಾರೆ. ಹೀಗಾಗಿ ರೋಹನ್‌, ಕಳೆದ ತಿಂಗಳು ಮನೆಗೆ ಬಂದು ವ್ಯವಹಾರ ನಡೆಸಬೇಕು. ಹಣದ ಸಹಾಯ ಮಾಡುವಂತೆ ಕೋರಿದ್ದಾನೆ. ಆದರೆ, ಸಾಮ್ಯನಾಯ್ಕ ತಮ್ಮ ವ್ಯವಹಾರ ಹಾಗೂ ಮಕ್ಕಳ ವಿದ್ಯಾಭ್ಯಾಸ ಮಾಡಿಸ ಬೇಕು. ಈಗ ಹಣವಿಲ್ಲ ಎಂದಿದ್ದರು. ಅದರಿಂದ ಆಕ್ರೋಶಗೊಂಡ ಆರೋಪಿ, ತನ್ನೊಂದಿಗೆ ಫೋಟೋಗ್ರಾಫ‌ರ್‌ ಆಗಿ ಕೆಲಸ ಮಾಡುತ್ತಿದ್ದ ಪುನೀತ್‌ಗೆ ವಿಚಾರ ತಿಳಿಸಿದ್ದಾನೆ.

ಪುನೀತ್‌, ಪೃಥ್ವಿರಾಜ್‌ಗೆ, ಈತ ಬಾಲಕೃಷ್ಣ, ಚೇತನ್‌ ಕುಮಾರ್‌ಗೆ ವಿಷಯ ತಿಳಿಸಿ, ಮಹಾಲಕ್ಷ್ಮೀ  ಲೇಔಟ್‌ನಲ್ಲಿ ಕೆಲಸ ಮಾಡುವ ಸ್ಟುಡಿಯೋ ಮೇಲಿರುವ ಕೊಠಡಿಯಲ್ಲಿ ಪಾರ್ಟಿ ಮಾಡಿ, ಸಾಮ್ಯನಾಯ್ಕ ಮನೆಯಲ್ಲಿ ಕೋಟ್ಯಂತರ ರೂ. ನಗದು, ಚಿನ್ನಾಭರಣವಿದೆ. ಅದನ್ನು ದರೋಡೆ ಮಾಡೋಣ ಎಂದು ಸಂಚು ರೂಪಿಸಿದ್ದರು ಎಂದು ಪೊಲೀಸರು ಹೇಳಿದರು.

ತಿಪಟೂರು ಪೊಲೀಸರ ಸೋಗಿನಲ್ಲಿ ಕೃತ್ಯ: ಡಿ.31ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಸಾಮ್ಯ

ನಾಯ್ಕ ಮನೆಗೆ ನುಗ್ಗಿದ ಆರೋಪಿಗಳು(ರೋಹನ್‌ ಹೊರತು ಪಡಿಸಿ) ತಿಪಟೂರು ಪೊಲೀಸರು ಎಂದು ಪರಿಚಯಿಸಿಕೊಂಡು, ಪೃಥ್ವಿರಾಜನನ್ನು ಕಳ್ಳನೆಂದು

ಹೇಳಿದ್ದಾರೆ. ಕಳವು ಮಾಡಿರುವ ಹಣ, ಚಿನ್ನಾಭರಣಗಳನ್ನು ತಮಗೆ ಕೊಟ್ಟಿದ್ದೇನೆ ಎಂದು ಹೇಳಿದ್ದಾನೆ. ಈತ ಕೊಟ್ಟಿರುವ ಹಣ, ಒಡವೆಗಳು ಹಾಗೂ ಪಿಸ್ತೂಲ್‌ ಕೊಡಿ, ಇಲ್ಲವಾದರೆ “ನಿಮ್ಮನ್ನು ಬಂಧಿಸಲಾಗುವುದು’ ಎಂದು ರಿವಾಲ್ವಾರ್‌ ತೋರಿಸಿಬೆದರಿಸಿದ್ದಾರೆ. ನಂತರ ಮನೆಯಲ್ಲಿ 19 ಲಕ್ಷ ರೂ.ನಗದು, 500 ಗ್ರಾಂ ಚಿನ್ನಾಭರಣ ದೋಚಿದ್ದಾರೆ.

ಬಳಿಕ ಸಾಮ್ಯನಾಯ್ಕ ಮತ್ತು ಪುತ್ರ ಮನೋಹರ್‌ ನನ್ನು ಅವರ ಕಾರಿನಲ್ಲಿಯೇ ಅಪಹರಿಸಿ ಪೀಣ್ಯ ಸಮೀಪದಲ್ಲಿ ಬಿಟ್ಟು ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಸ್ಥಳದಲ್ಲಿ ದೊರೆತ ಬೆರಳಚ್ಚು ಆರೋಪಿ ಪುನೀತ್‌ಗೆ ಹೋಲಿಕೆಯಾಗುತ್ತಿತ್ತು. ನಂತರ ಸಿಸಿ ಕ್ಯಾಮೆರಾ ದೃಶ್ಯಾವಳಿಗಳು ಆರೋಪಿಗಳ ಪತ್ತೆಗೆ ಸಹಕಾರವಾಯಿತು. ಈ ಎಲ್ಲ ಸಾಕ್ಷ್ಯಾಗಳ ಆಧಾರದ ಮೇಲೆ ಮಹಾಲಕ್ಷ್ಮೀ ಲೇಔಟ್‌ಠಾಣೆ ಇನ್‌ಸ್ಪೆಕ್ಟರ್‌ ಆರ್‌.ಜಿ.ಲೇಪಾಕ್ಷಮೂರ್ತಿ, ಪಿಎಸ್‌ಐ ಕೆ.ವಿನಾಯಕ್‌ ಹಾಗೂ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.

ಮತ್ತೆ ಕರೆಸಿಕೊಂಡು ಸಿಕ್ಕಿಬಿದ್ದ ರೋಹನ್‌ :

ಆರೋಪಿಗಳು ಮಾರ್ಗ ಮಧ್ಯೆ ಅಪ್ಪ-ಮಗನನ್ನು ಬಿಟ್ಟು ಪರಾರಿಯಾಗಿದ್ದರು. ಸುಮಾರು ಮೂರು ಗಂಟೆ ಬಳಿಕ ರೋಹನ್‌, ಸಾಮ್ಯ ನಾಯ್ಕ ಪುತ್ರ ಮನೋಹರ್‌ಗೆ ಕರೆ ಮಾಡಿ, ಸ್ಟುಡಿಯೋ ಬಳಿ ಕರೆಸಿಕೊಂಡಿದ್ದಾನೆ. ನಂತರ ಪೊಲೀಸ್‌ ವೇಶದಲ್ಲಿದ್ದ ಪುನೀತ್‌ ಹಾಗೂ ಇತರೆಆರೋಪಿಗಳು, ಮನೋಹರ್‌ ಎದುರು, ರೋಹನ್‌ಗೆ ಥಳಿಸುವಂತೆ ನಾಟಕವಾಡಿ, ಈತನು ಹಣದ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಇಡೀ ಕುಟುಂಬದವರು ಸುಳ್ಳು ಹೇಳುತ್ತಿದ್ದೀರಾ ಎಂದು ಎಚ್ಚರಿಕೆ ನೀಡಿ ಮನೋಹರ್‌ನನ್ನು ವಾಪಸ್‌ ಕಳುಹಿಸಿದ್ದಾರೆ. ಈ ವಿಚಾರ ತಿಳಿದ ಮಹಾಲಕ್ಷ್ಮೀ ಲೇಔಟ್‌ ಪೊಲೀಸರು, ರೋಹನ್‌ಗೆ ಕರೆ ಮಾಡಿದಾಗ, ತಾನೂ ಭಯಗೊಂಡು ಊರಿಗೆ ತೆರಳುತ್ತಿರುವುದಾಗಿ ಹೇಳಿದ್ದ. ಆ ಬಳಿಕ ಆತನ ನಂಬರ್‌ ಸ್ವಿಚ್ಡ್ ಆಫ್ ಆಗಿತ್ತು. ಆಗ ಈತನ ಪಾತ್ರದ ಬಗ್ಗೆ ಖಾತ್ರಿಯಾಗಿತ್ತು ಎಂದು ಪೊಲೀಸರು ಹೇಳಿದರು.

ದೋಚಿದ ಹಣದಲ್ಲಿ ಮೋಜು-ಮಸ್ತಿ :

ಕಳವು ಮಾಡಿದ್ದ ಹಣದಲ್ಲಿ ಐವರು ನೆರೆ ರಾಜ್ಯ ಸೇರಿ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಮೋಜು-ಮಸ್ತಿ ಮಾಡಿ ಹಣ ವ್ಯಯಸಿದ್ದಾರೆ. ಕೃತ್ಯ ಎಸಗಿದ ಬಳಿಕ ಮುಂಬೈ, ಪುನಾ, ಗೋವಾ, ಅಂಕೋಲಾ, ಕಾರವಾರ, ಗೋಕರ್ಣ ಸೇರಿ ಬೀಚ್‌ ಸಮೀಪ ಇರುವ ಪ್ರವಾಸಿ ತಾಣಗಳು, ಐಷಾರಾಮಿ ರೆಸಾರ್ಟ್‌ಗಳ ಸಮಯ ಕಳೆದಿದ್ದಾರೆ. ಅಲ್ಲದೆ, 15 ಸಾವಿರ ರೂ. ಮೌಲ್ಯದ ಐದು ಬಾಟಲಿ ಖರೀದಿಸಿ, ಸುಮಾರು 8 ಲಕ್ಷ ರೂ. ಖರ್ಚು ಮಾಡಿದ್ದಾರೆ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next