ಬೆಂಗಳೂರು: ಹೊರ ಊರುಗಳಿಂದ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬರುವ ಯುವಕರನ್ನು ಲೈಂಗಿಕ ಕ್ರಿಯೆಗೆ ಆಹ್ವಾನಿಸಿ ಆಟೋದಲ್ಲಿ ಕರೆದೊಯ್ದು, ಮಾರ್ಗ ಮಧ್ಯೆ ದರೋಡೆ ಮಾಡುತ್ತಿದ್ದ ಇಬ್ಬರು ಮಹಿಳೆಯರನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಇನ್ನೂ ಮೂವರು ಮಹಿಳೆಯರು ಮತ್ತು ಆಟೋ ಚಾಲಕ ರಾಜೇಶ್ ಪರಾರಿಯಾಗಿದ್ದು, ಹುಡುಕಾಟ ನಡೆಯುತ್ತಿದೆ.
ಆರೋಪಿಗಳು ಇತ್ತೀಚೆಗೆ ಸಂತೋಷ್ ಶೆಟ್ಟಿ ಎಂಬುವರಿಂದ 3 ಸಾವಿರ ರೂ. ಹಣ ದರೋಡೆ ಮಾಡಿದ್ದರು. ಈ ರೀತಿಯ ಘಟನೆಗಳು ಈ ಭಾಗದಲ್ಲಿ ಪ್ರತಿ ದಿನ ನಡೆಯುತ್ತಿವೆ. ಆದರೆ, ಯಾರೂ ಧೈರ್ಯವಾಗಿ ಬಂದು ದೂರು ನೀಡುವುದಿಲ್ಲ. ಇದೀಗ ಸಂತೋಷ್ ಶೆಟ್ಟಿ ನೀಡಿರುವ ದೂರಿನ ಮೇರೆಗೆ ಮೆಜೆಸ್ಟಿಕ್ ವ್ಯಾಪ್ತಿಯಲ್ಲಿ ಸಕ್ರಿಯವಾಗಿದ್ದ ಮಹಿಳೆಯ ತಂಡವನ್ನು ಪತ್ತೆ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದರು.
ರೇಪ್ ಕೇಸ್ ಹಾಕ್ತಿವಿ: ದರೋಡೆ ಮಾಡುವ ತಂಡ ಮೆಜೆಸ್ಟಿಕ್ ಸುತ್ತಮುತ್ತ ಸಕ್ರಿಯವಾಗಿದ್ದು, ಆಟೋದಲ್ಲಿ ಇಡೀ ನಿಲ್ದಾಣವನ್ನು ಸುತ್ತಾಟ ನಡೆಸುತ್ತಾರೆ. ಬೇರೆ ಊರುಗಳಿಂದ ಬಂದು ಮೆಜೆಸ್ಟಿಕ್ ನಿಲ್ದಾಣದಲ್ಲಿ ಲೈಂಗಿಕ ಕಾರ್ಯಕರ್ತೆಯರಿಗಾಗಿ ಕಾಯುವ ಯುವಕರನ್ನು ಆಟೋಗೆ ಹತ್ತಿಸಿಕೊಳ್ಳುತ್ತಾರೆ. ಬಳಿಕ ಮೆಜೆಸ್ಟಿಕ್‌ನಿಂದ ಸ್ವಲ್ಪ ದೂರ ಹೋಗುತ್ತಿದ್ದಂತೆ ನಾಲ್ಕೈದು ಮಂದಿ ಒಮ್ಮೆಲೆ ತಡೆದು ಆ ಮಹಿಳೆಯರ ಜತೆ ಸೇರಿ ಆ ವ್ಯಕ್ತಿ ಬಳಿಯಿದ್ದ ಹಣ, ಚಿನ್ನಾಭರಣ ದರೋಡೆ ಮಾಡುತ್ತಾರೆ.
ಒಂದು ವೇಳೆ ಹಣ ಕೊಡಲು ನಿರಾಕರಿಸಿದರೆ, ಅತ್ಯಾಚಾರ ಪ್ರಕರಣ ದಾಖಲಿಸುತ್ತೇವೆ. ಸಾರ್ವಜನಿಕರನ್ನು ಕರೆಯುತ್ತೇವೆ ಎಂದು ಹೆದರಿಸುತ್ತಾರೆ. ಇದರಿಂದ ಹೆದರುವ ಬಹಳಷ್ಟು ಮಂದಿ ಹಣ ಹಾಗೂ ಚಿನ್ನಾಭರಣ ಕೊಟ್ಟು ಹೋಗುತ್ತಾರೆ. ಇದನ್ನೇ ದುರುಪಯೋಗ ಪಡಿಸಿಕೊಂಡಿರುವ ತಂಡ ಹಲವಾರು ಮಂದಿಯನ್ನು ವಂಚಿಸಿರುವುದು ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದರು.
ಆಟೋ ಚಾಲಕರಿಗೆ ಕಮಿಷನ್: ಹನಿಟ್ರ್ಯಾಪ್ ಮಾಡುವುದನ್ನೇ ಕಾಯಕ ಮಾಡಿಕೊಂಡಿರುವ ಈ ತಂಡ ತಮ್ಮ ಕೃತ್ಯಕ್ಕೆ ನಾಲ್ಕೈದು ಮಂದಿ ಆಟೋ ಚಾಲಕರಿಗೆ ಕಮಿಷನ್ ರೂಪದಲ್ಲಿ ಹಣ ಕೊಟ್ಟು ನೇಮಿಸಿಕೊಂಡಿದೆ. ಪೊಲೀಸರು ಯಾವ ಸಮಯದಲ್ಲಿ ಗಸ್ತು ತಿರುಗುವುದಿಲ್ಲವೋ ಅದೇ ವೇಳೆ ಕೃತ್ಯವೆಸಗುತ್ತಾರೆ. ಗ್ರಾಹಕರನ್ನು ಆಟೋ ಹತ್ತಿಸಿಕೊಳ್ಳುವ ಮೊದಲು ಆರೋಪಿಗಳು, ನಮ್ಮದೆ ಕೊಠಡಿ ಇದೆ, ಯಾವುದೇ ತೊಂದರೆ ಇಲ್ಲ ಎಂದು ಪ್ರಚೋದಿಸಿ ಕರೆದೊಯ್ಯುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನನಗೇ ಫೋನ್‌ಮಾಡಿ: ಆಟೋ ಹತ್ತಿಸಿಕೊಂಡು ಸುಲಿಗೆ ಮಾಡುವವರ ಬಗ್ಗೆ ಸಾರ್ವಜನಿಕರು ಹೆದರುವ ಅಗತ್ಯವಿಲ್ಲ. ಅಂತಹ ಸಂದರ್ಭದಲ್ಲಿ ನನಗೇ ನೇರವಾಗಿ ಕರೆ ಮಾಡಬಹುದು ಎಂದು ಪಶ್ಚಿಮ ವಿಭಾಗ ಪಶ್ಚಿಮ ವಲಯ ಡಿಸಿಪಿ ರವಿ ಡಿ. ಚೆನ್ನಣ್ಣನವರ್ ಹೇಳ್ದಿದು, 9480801701 ಗೆ ಕರೆ ಮಾಡಿ ದೂರು ನೀಡಬಹುದು ಅಥವಾ ಪಶ್ಚಿಮ ಡಿಸಿಪಿ ವಿಭಾಗದ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 080-22943232 ನಂಬರಿಗೂ ಕರೆ ಮಾಡಬಹುದು. ಸ್ಥಳದಲ್ಲೇ ಇರುವ ಹೊಯ್ಸಳ ಮತ್ತು ಕರ್ತವ್ಯನಿರತ ಸಿಬ್ಬಂದಿ ಕೂಡ ನೆರವು ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.