ಬೆಂಗಳೂರು: ಒಂಟಿ ಮಹಿಳೆಯರ ಹಿಂಬಾಲಿಸಿ ದರೋಡೆ ಮಾಡುತ್ತಿದ್ದ ನಟೋರಿಯಸ್ ಲೂಟಿಕೋರ ಎಚ್‌ಎಸ್‌ಆರ್ ಲೇಔಟ್ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಗುರಪ್ಪನಪಳ್ಯ ನಿವಾಸಿ ಜೋಶ್ವಾ (27) ಬಂಧಿತ ಆರೋಪಿ. ಈತ ಇತ್ತೀಚೆಗೆ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ಮಗುವನ್ನು ಶಾಲೆಗೆ ಬಿಟ್ಟು ಮನೆಗೆ ಹೋದಾಗ ಹಿಂಬಾಲಿಸಿ, ಮನೆಗೆ ನುಗ್ಗಿ ಕೃತ್ಯ ಎಸಗಿದ್ದ. ಇದೇ ವೇಳೆ ಈತನಿಗೆ ಸಹಕರಿಸಿದ ಎಸ್. ಜೆ.ಪಾಳ್ಯ ರೌಡಿಶೀಟರ್ ರವೀಂದ್ರನನ್ನು ಬಂಧಿಸಲಾಗಿದೆ.
ರಾಬರಿ ಮಾಡಿದ ಚಿನ್ನಾಭರಣ ರೌಡಿಗಳಿಗೆ ಹಂಚುತ್ತಿದ್ದ. ಚಿನ್ನ ಮಾರಿದ ಹಣದಲ್ಲಿ ಶೋಕಿ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಪಿಯುಸಿ ಓದಿರುವ ಜೋಶ್ವಾ, ನಗರದ ಐಯರ್ ಲ್ಯಾಬ್ ಕನ್ಸಲ್ಟೆಂಟ್, ವಿಷನ್ ಹೆಲ್ತ್ ಕೇರ್ ಕಂಪನಿಯಲ್ಲಿ ಮಸಾಜ್ ಥೆರಪಿಸ್ಟ್ ಆಗಿ ಕೆಲಸ ಮಾಡಿ, ಬಿಟ್ಟಿದ್ದಾನೆ. ಕಳೆದ ಆರು ತಿಂಗಳಿಂದ ಎಸ್.ಜಿ.ಪಾಳ್ಯದಲ್ಲಿರುವ ಅಪ್‌ಗ್ರೇಡ್ ರೆಕ್ರೂಟ್ ನಲ್ಲಿ ಕೆಲಸ ಮಾಡುತ್ತಿದ್ದ. ಆದರೆ, ಈತನ ದುಶ್ಚಟಗಳ ಕಂಡ ಕಂಪನಿ ಮಾಲೀಕರು ಕೆಲಸದಿಂದ ವಜಾಗೊಳಿಸಿದ್ದರು. ಹೀಗಾಗಿ ಅಪರಾಧ ಕೃತ್ಯದಲ್ಲಿ ಭಾಗಿಯಾಗಲು ನಿರ್ಧರಿಸಿದ್ದ ಎಂದು ಪೊಲೀಸರು ಹೇಳಿದರು.
ಈ ಮಧ್ಯೆ ಎರಡೂವರೆ ವರ್ಷಗಳ ಹಿಂದೆ ಎಚ್‌ಎಸ್‌ಆರ್ ಲೇಔಟ್‌ನ “ಹೆಲ್ತ್ ಕೇರ್ ಸೆಂಟರ್’ನಲ್ಲಿ ಮಸಾಜ್ ಥೆರಪಿಸ್ಟ್ ಆಗಿದ್ದು, ಈ ಏರಿಯಾದಲ್ಲಿ ಐಷಾರಾಮಿ ಜನಗಳಿದ್ದು, ಹಣ, ಚಿನ್ನಾಭರಣ, ಆಸ್ತಿವಂತರಾಗಿದ್ದಾರೆ ಎಂದು ತಿಳಿದುಕೊಂಡಿದ್ದ. ಹೀಗಾಗಿ ಶ್ರೀಮಂತ ಮಹಿಳೆಯರ ಹಾಗೂ ಜನಸಂದಣಿ ಕಡಿಮೆ ಇರುವ ಮನೆಗಳನ್ನು ಗುರುತಿಸಿಕೊಂಡಿದ್ದ.
ಒಂಟಿ ಮಹಿಳೆಯರೇ ಟಾರ್ಗೆಟ್: ಎಚ್‌ಎಸ್ ಆರ್ ಲೇಔಟ್‌ನ ಪ್ರತಿಷ್ಠಿತ ಶಾಲೆಗಳ ಬಳಿ ಬೆಳಗ್ಗೆ 9 ಗಂಟೆ ಸುಮಾರಿಗೆ ಬರುತ್ತಿದ್ದ ಆರೋಪಿ, ಮಕ್ಕ ಳನ್ನು ಬಿಟ್ಟು ಕೈಯಲ್ಲಿ ಮನೆಯ ಕೀ ಹಿಡಿದು ಕೊಂಡು ಒಂಟಿಯಾಗಿ ಮನೆಗೆ ಹೋಗುವ ಮಹಿಳೆಯರನ್ನು ಹಿಂಬಾಲಿಸಿ, ಅವರ ಮನೆ ಯಾವುದೆಂದು ಗುರುತಿಸಿಕೊಳ್ಳುತ್ತಿದ್ದ. 10-15 ದಿನಗಳ ಕಾಲ ಅವರ ಮೇಲೆ ನಿಗಾವಹಿಸಿ, ಆ ನಂತರ ನಿರ್ದಿಷ್ಟ ಮಹಿಳೆಯನ್ನು ಹಿಂಬಾಲಿಸಿ ಮನೆವರೆಗೂ ಹೋಗು ತ್ತಿದ್ದು, ಮಹಿಳೆ ಮನೆ ಬಾಗಿಲು ಹಾಕಿಕೊಂಡ ಒಂದೆರಡು ನಿಮಿಷಗಳ ಬಳಿಕ ಬಾಗಿಲು ಬಡಿಯುತ್ತಿದ್ದ. ಮಹಿಳೆ ಬಾಗಿಲು ತೆರೆಯುತ್ತಿದ್ದಂತೆ ಅವರ ಮುಖಕ್ಕೆ ಖಾರದ ಪುಡಿ ಎರಚಿ, ಮಾರಕಾಸ್ತ್ರ ತೋರಿಸಿ ಚಿನ್ನಾಭರಣ, ನಗದು ರಾಬರಿ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದರು.
ರೌಡಿಗಳಿಗೆ ಹಂಚಿಕೆ: ಎಸ್.ಜೆ.ಪಾಳ್ಯಠಾಣೆ ರೌಡಿಶೀಟರ್‌ಗಳಾಗಿರುವ ರವೀಂದ್ರ, ಅಕ್ಷಯ್ ಹಾಗೂ ಅವರ ಸಹಚರರಾದ ಆನಂದ್ ಅಲಿ ಯಾಸ್ ಪುಂಗನ ಜತೆ ಸೇರಿ ದುಶ್ಚಟಗಳನ್ನು ಹೆಚ್ಚಿಸಿಕೊಂಡಿದ್ದ ಜೋಶ್ವಾ, ರಾಬರಿ ಮಾಡಿದ ಚಿನ್ನಾಭರಣಗಳ ಪೈಕಿ ಸರ, ಕಿವಿಯೊಲೆ ಹಾಗೂ ಇತರೆ ಚಿನ್ನಾಭರಣಗಳನ್ನು ರೌಡಿಗಳಿಗೆ ಹಂಚು ತ್ತಿದ್ದ. ಬಾಕಿ ಚಿನ್ನಾಭರಣಗಳನ್ನು ಅವರ ಮೂಲಕ ಮಾರಿ ಬಂದ ಹಣದಲ್ಲಿ ಮೋಜು-ಮಸ್ತಿ ಮಾಡುತ್ತಿದ್ದರು.
ಮನೆ ಬಾಗಿಲು ತೆಗೆಯುತ್ತಿದ್ದಂತೆ ಖಾರದ ಪುಡಿ ಎರಚುತ್ತಿದ್ದ ಆರೋಪಿ!: ಇತ್ತೀಚೆಗೆ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ತಮ್ಮ ಮಗುವನ್ನು ಶಾಲೆಗೆ ಬಿಟ್ಟು ಎರಡನೇ ಮಹಡಿಯಲ್ಲಿರುವ ಮನೆಗೆ ಬಂದಿದ್ದರು. ಕೆಲ ಕ್ಷಣಗಳ ಬಳಿಕ ಆ ಮನೆಗೆ ಹೋದ ಆರೋಪಿ, ಬಾಗಿಲು ಬಡಿದಿದ್ದಾನೆ. ಮಹಿಳೆ ಬಾಗಿಲು ತೆರೆಯುತ್ತಿದ್ದಂತೆ ಆಕೆ ಮುಖಕ್ಕೆ ಖಾರದ ಪುಡಿ ಎರಚಿ, ಕುತ್ತಿಗೆಗೆ ಚಾಕು ಇಟ್ಟು ಬೆದರಿಸಿದ್ದಾನೆ. ನಂತರ “ನಿನ್ನ ಗಂಡ ನನಗೆ 5 ಲಕ್ಷ ರೂ. ಕೊಡಬೇಕು, ಕೂಡಲೇ ಹಣ ಕೊಡು ಎಂದಿದ್ದಾನೆ. ಮಹಿಳೆ ಅಷ್ಟೊಂದು ಹಣ ಇಲ್ಲ ಎಂದಾಗ, ಮೈಮೇಲಿದ್ದ ಚಿನ್ನಾಭರಣ ಬಿಚ್ಚಿಕೊಡು’ ಎಂದು ರಾಬರಿ ಮಾಡಿದ್ದ. ಬಳಿಕ ಆಟೋ ಮೂಲಕ ಹೋಗಿ ಸಿಲ್ಕ್ ಬೋರ್ಡ್ ಬಳಿ ಇಳಿದು ಮನೆಗೆ ತೆರಳಿದ್ದ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆ ಮಾಹಿತಿ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.