Advertisement

Madikeri: ವಾಹನ ಅಡ್ಡಗಟ್ಟಿ 50 ಲಕ್ಷ ರೂ. ದರೋಡೆ; 6 ಮಂದಿ ಆರೋಪಿಗಳ ಬಂಧನ

12:49 PM Dec 20, 2023 | Team Udayavani |

ಮಡಿಕೇರಿ: ಗೋಣಿಕೊಪ್ಪ ಸಮೀಪದ ದೇವರಪುರದಲ್ಲಿ ಡಿ.9ರ ರಾತ್ರಿ ವಾಹನ ಅಡ್ಡಗಟ್ಟಿ  ನಡೆಸಲಾಗಿದ್ದ 50 ಲಕ್ಷ ರೂ.ಗಳ ದರೋಡೆ ಪ್ರಕರಣದ 6 ಮಂದಿ ಆರೋಪಿಗಳನ್ನು ಕೊಡಗು ಪೊಲೀಸರು ಬಂಧಿಸಿದ್ದಾರೆ.

Advertisement

ವಿರಾಜಪೇಟೆಯ ಆರ್ಜಿ ಗ್ರಾಮದ ನಾಗೇಶ್, ಬಿಟ್ಟಂಗಾಲದ ಪ್ರಶಾಂತ್, ಗಾಂಜಾ ರಮೇಶ್ ಮತ್ತು ಕ್ಲೀನರ್ ರಮೇಶ್ ಹಾಗೂ ಇಬ್ಬರು ಕೇರಳ ರಾಜ್ಯದ ತಲಚೇರಿಯ ಹಾರುನ್ ಹಾಗೂ ಜಂಶದ್ ಎಂಬವರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳಿಂದ 3 ಲಕ್ಷ ರೂ. ನಗದು ಕೃತ್ಯಕ್ಕೆ ಬಳಸಿದ್ದ 1 ಕಾರು ಮತ್ತು ಒಂದು ಪಿಕ್‌ಅಪ್ ವಾಹನವನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಹೇಳಿದ್ದಾರೆ.

ಈ ಪೈಕಿ ವಿರಾಜಪೇಟೆ ತಾಲೂಕಿನ ಮಲೆತಿರಿಕೆ ಬೆಟ್ಟದ ನಿವಾಸಿ ಪೆರೋಲ್ ದಿನೇಶ್ ಕೂಡ ಪ್ರಮುಖ ಆರೋಪಿಯಾಗಿದ್ದು, ಪ್ರಸ್ತುತ ಕೊಲೆ ಪ್ರಕರಣ ಒಂದರಲ್ಲಿ ಶಿಕ್ಷೆ ಅನುಭವಿಸುತ್ತಾ ತ್ರಿಶೂರ್ ಜೈಲಿನಲ್ಲಿದ್ದಾನೆ. ಸ್ಥಳೀಯರೆಲ್ಲರೂ ಪರಸ್ಪರ ಪರಿಚಯ ಹೊಂದಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾಹಿತಿ ನೀಡಿದ್ದಾರೆ.

ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಎಸ್.ಪಿ. ರಾಮರಾಜನ್, ಡಿ.9ರಂದು ಕೇರಳ ಮೂಲದ ಗುತ್ತಿಗೆದಾರ ಶಂಜದ್ ಎಂಬವರು  50 ಲಕ್ಷ ರೂ. ದರೋಡೆಯಾಗಿರುವ ಕುರಿತು ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮೈಸೂರಿನಲ್ಲಿ ಚಿನ್ನವನ್ನು ಮಾರಿ ಕೇರಳಕ್ಕೆ ಮರಳುತ್ತಿದ್ದ ಸಂದರ್ಭ 4 ವಾಹನಗಳಲ್ಲಿ ಆಗಮಿಸಿದ 10ರಿಂದ 15 ಮಂದಿ ತಂಡ ನಮ್ಮ ಮೇಲೆ ಹಲ್ಲೆ ನಡೆಸಿ ಕಾರು ಸಹಿತ ಹಣವನ್ನು ದರೋಡೆ ಮಾಡಿದ್ದಾರೆ ಎಂದು ಪೊಲೀಸರಿಗೆ ವಿಚಾರಣೆ ವೇಳೆ ತಿಳಿಸಿದ್ದರು ಎಂದು ಎಸ್.ಪಿ. ರಾಮರಾಜನ್ ವಿವರಿಸಿದರು.

ಈ ಹಿನ್ನೆಲೆಯಲ್ಲಿ ದೇವರಪುರ ದರೋಡೆ ಪ್ರಕರಣ ಬೇಧಿಸಲು ತಮ್ಮ ನೇತೃತ್ವದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಸುಂದರ್ ರಾಜ್, ವಿರಾಜಪೇಟೆ ಡಿವೈಎಸ್‌ಪಿ ಮತ್ತು ಪೊಲೀಸ್ ವೃತ್ತ ನಿರೀಕ್ಷಕ ಮಂಜಪ್ಪ ಅವರ ಸಹಿತ ಒಟ್ಟು 3 ಮಂದಿ ವೃತ್ತ ನಿರೀಕ್ಷಕರು ಮತ್ತು 7 ಮಂದಿ ಪೊಲೀಸ್ ಅಧಿಕಾರಿಗಳ ಸಹಿತ ಒಟ್ಟು 40 ಮಂದಿಯ ತಂಡವನ್ನು ನೇಮಿಸಲಾಗಿತ್ತು. ಇದರೊಂದಿಗೆ ಜಿಲ್ಲಾ ಪೊಲೀಸ್ ತಾಂತ್ರಿಕ ತಂಡಗಳ ನೆರವನ್ನೂ ಪಡೆಯಲಾಗಿತ್ತು ಎಂದು ಹೇಳಿದರು.

Advertisement

ದರೋಡೆ ಪ್ರಕರಣದಲ್ಲಿ ಈಗ ಬಂಧಿತರಾದವರು ಅಲ್ಲದೆ 10ಕ್ಕೂ ಹೆಚ್ಚು ಮಂದಿ ಆರೋಪಿಗಳು ಪಾಲ್ಗೊಂಡಿರುವ ಶಂಕೆ ಇದ್ದು, ಎಲ್ಲರನ್ನೂ ಬಂಧಿಸಲಾಗುತ್ತದೆ. ಕೊಡಗು ಜಿಲ್ಲೆಯಲ್ಲಿ ಇಂತಹ ಕೃತ್ಯಗಳಿಗೆ ಅವಕಾಶವೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ದೇವರಪುರ ದರೋಡೆ ಪ್ರಕರಣದ ದೂರುದಾರ ಶಂಜದ್ ಮೊದಲಿಗೆ 750 ಗ್ರಾಂ ಚಿನ್ನವನ್ನು ಮಾರಿ ಅದರಿಂದ ಬಂದ 50 ಲಕ್ಷ ರೂ.ಗಳನ್ನು ಕೊಂಡೊಯ್ಯುವ ಸಂದರ್ಭ ದರೋಡೆ ನಡೆಸಿದೆ ಎಂದು ಹೇಳಿಕೆ ನೀಡಿದ್ದಾನೆ. ಪೊಲೀಸರು ತನಿಖೆ ನಡೆಸಿ ಮೈಸೂರಿನ ಅಶೋಕಪುರ ರಸ್ತೆಯ ಚಿನ್ನಾಭರಣ ವ್ಯಾಪಾರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಸಂದರ್ಭ 993 ಗ್ರಾಂ ಚಿನ್ನವನ್ನು 61 ಲಕ್ಷದ 70 ಸಾವಿರ ರೂ.ಗಳಲ್ಲಿ ವ್ಯವಹರಿಸಿರುವುದಾಗಿ ಹೇಳಿದ್ದಾನೆ. ಮಾತ್ರವಲ್ಲದೇ ಈ ವಹಿವಾಟಿಗೆ ಯಾವುದೇ ದಾಖಲಾತಿ ಕೂಡ ನೀಡಿಲ್ಲದಿರುವುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ. ಶಂಜದ್ ತೆರಿಗೆ ವಂಚಿಸುವ ಸಲುವಾಗಿ ಇಂತಹ ಹೇಳಿಕೆ ನೀಡುವ ಮೂಲಕ ಪೊಲೀಸರ ತನಿಖೆಯ ದಿಕ್ಕು ತಪ್ಪಿಸುವ ಕೆಲಸ ಮಾಡಿರುವುದು ಪತ್ತೆಯಾಗಿದೆ ಎಂದು ಹೇಳಿದರು.

ಯಾವುದೇ ದಾಖಲಾತಿಗಳಿಲ್ಲದೇ ಚಿನ್ನ ಮಾರಾಟ ಮಾಡಿರುವುದು, ಲಕ್ಷಾಂತರ ಹಣದಲ್ಲಿ ವ್ಯವಹಾರ ನಡೆಸಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಒಟ್ಟು 993 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಮಾತ್ರವಲ್ಲದೇ ಈ ಕುರಿತು ಆದಾಯ ತೆರಿಗೆ ಇಲಾಖೆ, ಸೇಲ್ ಟ್ಯಾಕ್ಸ್, ಕಸ್ಟಮ್ಸ್, ಜಿಎಸ್‌ಟಿ ಸೇರಿದಂತೆ ಸಂಬಂಧಿಸಿದ ವಿವಿಧ ಇಲಾಖೆಗಳಿಗೆ ಮಾಹಿತಿ ನೀಡಲಾಗಿದೆ. ತೆರಿಗೆ ವಂಚನೆ, ಅಕ್ರಮ ಚಿನ್ನ ಸಾಗಾಟ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳೇ ಇವುಗಳ ಕುರಿತು ತನಿಖೆ ನಡೆಸುತ್ತವೆ ಎಂದು ಎಸ್.ಪಿ. ರಾಮರಾಜನ್ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next