ಬೆಳಗಾವಿ: ಮುಸುಕುಧಾರಿ ದರೋಡೆಕೋರ ಗುಂಪೊಂದು ಮನೆ ಕಿಟಕಿ ಮುರಿದು ಒಳ ನುಗ್ಗಿ ಮನೆ ಮಾಲಿಕರನ್ನು ಬೆದರಿಸಿ 25 ಗ್ರಾಂ. ಚಿನ್ನಾಭರಣ ದೋಚಿದ ಘಟನೆ ಗುರುವಾರ ಬೆಳಗಿನ ಜಾವ ನಡೆದಿದೆ.
ನಗರದ ಮೂರನೇ ರೈಲ್ವೇ ಗೇಟ್ ಬಳಿಯ ರಾಣಾ ಪ್ರತಾಪ ರಸ್ತೆಯಲ್ಲಿರುವ ಅಭಿಜೀತ ಸಾವಂತ ಎಂಬವರ ಮನೆಗೆ ನುಗ್ಗಿದ ಏಳು ಜನ ದರೋಡೆಕೋರರು ಚಿನ್ನಾಭರಣ ದೋಚಿದ್ದಾರೆ. ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದ ದರೋಡೆಕೋರರು ಮನೆ ಕಿಟಕಿ ಮುರಿದು ಒಳ ನುಗ್ಗಿದ್ದರು.
ಇದನ್ನೂ ಓದಿ:ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಕ್ಯಾ. ಸತೀಶ್ ಶರ್ಮಾ ನಿಧನ
ಅಭಿಜೀತ ಸಾವಂತ ದಂಪತಿ ಮಾತ್ರ ಮನೆಯಲ್ಲಿದ್ದರು. ಒಳ ನುಗ್ಗುತ್ತಿದ್ದಂತೆ ಎಚ್ಚರವಾದ ದಂಪತಿಯನ್ನು ದರೋಡೆಕೋರರು ಹೆದರಿಸಿದ್ದಾರೆ. ಆಗ ಅಭಿಜೀತ ಅವರು ಓರ್ವ ದರೋಡೆಕೋರಿಗೆ ಕಾಲಿನಿಂದ ಒದ್ದು ತಪ್ಪಿಸಿಕೊಳ್ಳಲು ಯತ್ನಿಸಿ ಅವರೊಂದಿಗೆ ಕಾದಾಟ ನಡೆಸಿದ್ದಾರೆ. ಆದರೆ ಮೂರ‍್ನಾಲ್ಕು ಜನ ದರೋಡೆಕೋರರು ಸೇರಿ ಅಭಿಜಿತ ಅವರಿಗೆ ಚಾಕು ತೋರಿಸಿ ಬೆಡ್ ರೂಮ್‌ನಲ್ಲಿದ್ದ ಕಪಾಟಿನ ಕೀಲಿ ಕಸಿದುಕೊಂಡು ದರೋಡೆ ನಡೆಸಿದ್ದಾರೆ.
ದರೋಡೆಕೋರರು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಸಂಭಾಷಣೆ ನಡೆಸುತ್ತಿದ್ದರು ಎನ್ನಲಾಗಿದೆ. ದರೋಡೆ ನಡೆಸಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ನಂತರ ಅಭಿಜೀತ ಅವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಇದನ್ನೂ ಓದಿ: ಹುಣಸೂರು: ಹೊಟ್ಟೆ ಉಬ್ಬರಿಸಿಕೊಂಡು ವಿಚಿತ್ರವಾಗಿ 16 ಕುರಿಗಳು ಸಾವು!
ಸ್ಥಳಕ್ಕೆ ಎಸಿಪಿ ಚಂದ್ರಪ್ಪ, ಉದ್ಯಮಬಾಗ ಠಾಣೆ ಇನ್ಸಪೆಕ್ಟರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ದರೋಡೆಕೋರರು ಅಲ್ಲಿಂದ ಹೋಗಿರುವ ಮಾರ್ಗದ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸುತ್ತಿದ್ದಾರೆ. ಈಗಾಗಲೇ ಒಂದು ತಂಡ ದರೋಡೆಕೋರರ ಬಂಧನಕ್ಕೆ ಜಾಲ ಬೀಸಿದೆ.