Advertisement

ನಗರದಲ್ಲಿ ದಿನಕ್ಕೊಂದು ರಾಬರಿ!

12:49 AM Aug 31, 2019 | Lakshmi GovindaRaj |

ಬೆಂಗಳೂರು: ನಗರದಲ್ಲಿ ದುಷ್ಕರ್ಮಿಗಳು ಅಟ್ಟಹಾಸ ಮೆರೆಯುತ್ತಿದ್ದು, ಮೊಬೈಲ್‌ ಕಳ್ಳರು ಹಾಗೂ ಸರಕಳ್ಳರು ತಲೆನೋವಾಗಿ ಪರಿಣಮಿಸತೊಡಗಿದ್ದಾರೆ. 2019ರ ಜನವರಿಯಿಂದ ನಗರದ ಯಾವುದಾದರೂ ಒಂದು ಭಾಗದಲ್ಲಿ ದುಷ್ಕರ್ಮಿಗಳು ದಿನಕ್ಕೆ ಒಂದು ಅಥವಾ ಎರಡು ಮೊಬೈಲ್‌ ಕಳವು, ಮಹಿಳೆಯರ ಸರ ಕಳವು ಮಾಡಿದ್ದಾರೆ. ಆಗಸ್ಟ್‌ 25ರವರೆಗೆ ನಗರದಲ್ಲಿ ನಡೆದ ರಾಬರಿ ಹಾಗೂ ಸರಗಳವು ಪ್ರಕರಣಗಳು ಇದಕ್ಕೆ ಸಾಕ್ಷ್ಯಾವಾಗಿದೆ.

Advertisement

ಬಹುತೇಕ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವ ದುಷ್ಕರ್ಮಿಗಳು, ರಸ್ತೆಬದಿ ನಡೆದು ಹೋಗುವ ಯುವತಿಯರು, ಮಹಿಳೆಯರು ಸೇರಿದಂತೆ ಸಾರ್ವಜನಿಕರನ್ನು ಅಡ್ಡಗಟ್ಟಿ, ಮೊಬೈಲ್‌, ಹಣ, ಸರ ಕಸಿದುಕೊಂಡು ಪರಾರಿಯಾಗುತ್ತಿದ್ದಾರೆ. ಕೆಲ ಸಂಧರ್ಭಗಳಲ್ಲಿ ಸರ, ಹಣಕ್ಕಾಗಿ ತಳ್ಳುವ, ಹಲ್ಲೆ ನಡೆಸುವ ಘಟನೆಗಳೂ ಜರುಗಿವೆ.

ತಲೆಗೆ ಇರಿದು ಮೊಬೈಲ್‌ ದೋಚಿದರು!: ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಯುವತಿಯನ್ನು ಹಿಂಬಾಲಿಸಿದ ದುಷ್ಕರ್ಮಿಗಳು, ಚಾಕುವಿನಿಂದ ಆಕೆಯ ತಲೆಗೆ ಇರಿದು ಮೊಬೈಲ್‌ ಹಾಗೂ ಬ್ಯಾಗ್‌ ಕಿತ್ತುಕೊಂಡು ಪರಾರಿಯಾದ ಘಟನೆ ಬಾಣಸವಾಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಜೈ ಭಾರತ್‌ ನಗರದ ನಿವಾಸಿ ಲೀಲಾ, ಈ ಕುರಿತು ಬಾಣಸವಾಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಆ.28ರಂದು ಮಧ್ಯಾಹ್ನ 2.30ರ ಸುಮಾರಿಗೆ ಶಿವಾಜಿನಗರಕ್ಕೆ ತೆರಳಲು ಲೀಲಾ, ಬಸ್‌ ನಿಲ್ದಾಣಕ್ಕೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಹಿಂಬಾಲಿಸಿದ ದುಷ್ಕರ್ಮಿಗಳು, ಏಕಾಏಕಿ ಚಾಕುವಿನಿಂದ ಲೀಲಾ ಅವರ ತಲೆಗೆ ಗಾಯವಾಗುವಂತೆ ಇರಿದಿದ್ದಾರೆ.

ನೋವಿನಿಂದ ಲೀಲಾ ಅವರು ಕುಳಿತುಕೊಳ್ಳುತ್ತಲೇ, ಬೈಕ್‌ನಿಂದ ಇಳಿದ ದುಷ್ಕರ್ಮಿ, ಅವರ ಕೈಲಿದ್ದ ಮೊಬೈಲ್‌ ಹಾಗೂ ವ್ಯಾನಿಟಿ ಬ್ಯಾಗ್‌ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಸ್ಥಳೀಯರು ಲೀಲಾ ಅವರ ರಕ್ಷಣೆಗೆ ಧಾವಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಾಕು ಇರಿತದಿಂದ ಲೀಲಾ ಅವರ ತಲೆಯಲ್ಲಿ ತೂತು ಬಿದ್ದಿದ್ದು, ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು.

Advertisement

ವೃದ್ಧೆಯರ ಸರಗಳವು: ಮತ್ತೂಂದು ಪ್ರಕರಣದಲ್ಲಿ ಗುರುವಾರ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು, ಬಾಣಸವಾಡಿ ಹಾಗೂ ಬೈಯಪ್ಪನಹಳ್ಳಿಯಲ್ಲಿ ಇಬ್ಬರು ವೃದ್ಧೆಯರ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ರಾಮಯ್ಯ ಲೇಔಟ್‌ನ ತಮ್ಮ ಮನೆಯ ಮುಂಭಾಗ ವಾಯು ವಿಹಾರ ಮಾಡುತ್ತಿದ್ದ ಕಲ್ಯಾಣಿ ದೊರೆಸ್ವಾಮಿ (71) ಅವರನ್ನು ತಳ್ಳಿದ ದುಷ್ಕರ್ಮಿಗಳು, ಅವರ ಕತ್ತಿನಲ್ಲಿದ್ದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಗುರುವಾರ ಸಂಜೆ 5.30ರ ಸುಮಾರಿಗೆ ಈ ಘಟನೆ ನಡೆದಿದೆ. ಈ ಕುರಿತು ಕಲ್ಯಾಣಿ ದೊರೆಸ್ವಾಮಿ ಅವರು ನೀಡಿರುವ ದೂರಿನ ಅನ್ವಯ ಬಾಣಸವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. ಬೈಯಪ್ಪನಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯ ಮಲ್ಲೇಶಪಾಳ್ಯದ 5ನೇ ಮುಖ್ಯರಸ್ತೆಯಲ್ಲಿ ಗುರುವಾರ ಸಂಜೆ 6 ಗಂಟೆ ಸುಮಾರಿಗೆ ವೃದ್ಧೆಯೊಬ್ಬರನ್ನು ಬೈಕ್‌ನಲ್ಲಿ ಹಿಂಬಾಲಿಸಿದ ದುಷ್ಕರ್ಮಿಗಳು ಅವರ ಕತ್ತಿನಲ್ಲಿದ್ದ ಸರ ಕಿತ್ತಿದ್ದಾರೆ. ಈ ಕುರಿತು ಸರ ಕಳೆದುಕೊಂಡ ಸರೋಜಾ (78) ಎಂಬವರು ನೀಡಿರುವ ದೂರಿನ ಅನ್ವಯ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.

ವೃದ್ಧೆಯ ಕಾಲು ಮುರಿದಿತ್ತು: ಕೆಲ ತಿಂಗಳ ಹಿಂದೆ ಸಂಜಯ್‌ನಗರದಲ್ಲಿ ದುಷ್ಕರ್ಮಿಗಳು ವೃದ್ಧೆಯೊಬ್ಬರನ್ನು ತಳ್ಳಿ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಈ ವೇಳೆ ರಸ್ತೆ ಮೇಲೆ ಬಿದ್ದಿದ್ದ ವೃದ್ಧೆಯ ಕಾಲು ಮುರಿದು, ಶಸ್ತ್ರಚಿಕಿತ್ಸೆ ಪಡೆದುಕೊಂಡ ಬಳಿಕ ಗುಣಮುಖರಾಗಿದ್ದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ರಾಬರಿ ಪ್ರಕರಣಗಳು (ಜ.1ರಿಂದ ಆ.25)
2017 2018 2019 (ಆ.25ರವರೆಗೆ)
630 700 360

ಸರಗಳವು ಪ್ರಕರಣಗಳು
2017 2018 2019
355 308 150

Advertisement

Udayavani is now on Telegram. Click here to join our channel and stay updated with the latest news.

Next