ಪುಣೆ: ಪುಣೆಯ ಪಿಂಪ್ರಿ ಚಿಂಚ್ ವಾಡ್ ನಲ್ಲಿ ದರೋಡೆಕೋರರು ಎಟಿಎಂ ಕಿಯೋಸ್ಕ್ ಅನ್ನು ಸ್ಫೋಟಗೊಳಿಸಿ 30 ಲಕ್ಷ ರೂಪಾಯಿ ನಗದನ್ನು ಕದ್ದೊಯ್ದಿದ್ದಾರೆ. ಆದರೆ ದರೋಡೆಕೋರರು ಆತುರದಲ್ಲಿ ಹತ್ತು ಲಕ್ಷ ರೂ. ನಗದನ್ನು ಅಲ್ಲೇ ಬಿಟ್ಟು ಹೋಗಿರುವುದಾಗಿ ವರದಿ ವಿವರಿಸಿದೆ.
ಇದನ್ನೂ ಓದಿ:ಡಿಜಿಲಾಕರ್ ನಲ್ಲಿ ಪಾನ್ ಸ್ಟೋರ್ ಮಾಡುವುದು ಹೇಗೆಂದು ನಿಮಗೆ ತಿಳಿದಿದೆಯೇ.?ಇಲ್ಲಿದೆ ಮಾಹಿತಿ
ಸುಧಾರಿತ ಸ್ಫೋಟಕ ಸಾಧನ (ಐಇಡಿ) ಬಳಸಿ ಎಟಿಎಂ ಅನ್ನು ಸ್ಫೋಟಗೊಳಿಸಿರುವ ಸಾಧ್ಯತೆ ಇದ್ದಿರುವುದಾಗಿ ತನಿಖಾ ಅಧಿಕಾರಿಗಳು ಶಂಕಿಸಿದ್ದಾರೆ. ಈ ಘಟನೆ ಜುಲೈ 18ರಂದು ನಡೆದಿದ್ದು, ಇದು ರಾಜ್ಯದಲ್ಲಿ ನಡೆಯುತ್ತಿರುವ ಕಳ್ಳತನದ ಎಚ್ಚರಿಕೆಯ ಕರೆ ಗಂಟೆಯಾಗಿದೆ. ಈ ಪ್ರಕರಣದ ತನಿಖೆಗೆ ಇದೀಗ ಮಹಾರಾಷ್ಟ್ರದ ಭಯೋತ್ಪಾದಕ ನಿಗ್ರಹ ದಳ ಕೈಜೋಡಿಸಿದೆ ಎಂದು ವರದಿ ವಿವರಿಸಿದೆ.
ಚಾಕನ್ ಪ್ರದೇಶದಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯದಲ್ಲಿ ಎಟಿಎಂ ಯಂತ್ರ ಸ್ಫೋಟದ ತೀವ್ರತೆಗೆ ಎರಡು ಭಾಗವಾಗಿರುವುದು ಪತ್ತೆಯಾಗಿದೆ. ಹೆಚ್ಚಿನ ಸಾಕ್ಷ್ಯಾಧಾರ ಸಂಗ್ರಹಕ್ಕಾಗಿ ಪೊಲೀಸರು ಶ್ವಾನದಳದೊಂದಿಗೆ ಸ್ಥಳವನ್ನು ಪರಿಶೀಲನೆ ನಡೆಸಿರುವುದಾಗಿ ವರದಿ ತಿಳಿಸಿದೆ.
ಕೆಲವು ದಿನಗಳ ಹಿಂದಷ್ಟೇ ಪುಣೆಯ ಗ್ರಾಮೀಣ ಪ್ರದೇಶವಾದ ರಾಜನ್ ಗ್ರಾಮದಲ್ಲಿಯೂ ಇದೇ ರೀತಿ ದರೋಡೆಕೋರರು ಎಟಿಎಂ ಯಂತ್ರವನ್ನು ಸ್ಫೋಟಿಸಲು ಪ್ರಯತ್ನಿಸಿದ್ದರು. ಆದರೆ ಎಟಿಎಂ ಯಂತ್ರಕ್ಕೆ ಹೆಚ್ಚು ಹಾನಿಯಾಗದ ಪರಿಣಾಮ ನಗದು ಹಣ ಸಿಕ್ಕಿರಲಿಲ್ಲವಾಗಿತ್ತು. ಇದೇ ತಂಡ ಇಲ್ಲಿಯೂ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.