Advertisement

ಸೀಟಿಗುಡ್ಡೆ: ಭಾರೀ ಮಳೆಗೆ ರಸ್ತೆ  ಬದಿಯ ಗುಡ್ಡ ಕುಸಿತ 

12:40 PM Jul 18, 2018 | Team Udayavani |

ನೆಹರೂನಗರ : ಎತ್ತರದ ಪ್ರದೇಶದಲ್ಲಿರುವ ಸೀಟಿಗುಡ್ಡೆ ಸಂಪರ್ಕ ರಸ್ತೆಯ ಬದಿಯಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಭಾರೀ ಮಳೆಗೆ ಕುಸಿತ ಉಂಟಾದರೂ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ. ಇದು ವಾರ್ಡ್‌ 2ರ (ಕಬಕ-2) ವ್ಯಾಪ್ತಿಗೆ ಬರುತ್ತದೆ. ನೆಹರೂನಗರದ ಸಮೀಪದಲ್ಲೇ ಇರುವುದರಿಂದ ಇದು ಜನನಿಬಿಡ ಪ್ರದೇಶ. ಹೆದ್ದಾರಿ ಹತ್ತಿರದಲ್ಲೇ ಇದ್ದರೂ, ಇಲ್ಲಿ ಮೂಲಸೌಕರ್ಯ ಕೊರತೆ ಇದೆ. ಸಾಕಷ್ಟು ಅನುದಾನ ಬಳಸಿಕೊಂಡು ಒಂದಷ್ಟು ದೂರ ಕಾಂಕ್ರೀಟ್‌ ರಸ್ತೆ, ಇಂಟರ್‌ಲಾಕ್‌ ಹಾಕುವ ಕೆಲಸ ಆಗಿದೆ. ಆದರೆ ಬಹಳಷ್ಟು ದೂರ ಇನ್ನೂ ಕಚ್ಚಾ ರಸ್ತೆಯಾಗಿಯೇ ಉಳಿದಿದೆ. ಈ ಕಚ್ಚಾ ರಸ್ತೆ ಸಾಗುವಲ್ಲಿ ಗುಡ್ಡ ಕುಸಿತ ಉಂಟಾಗಿದೆ.

Advertisement

ಕೊರತೆಗಳ ಪಟ್ಟಿಯೇ ಇಲ್ಲಿದೆ
ಸೀಟಿಗುಡ್ಡೆ ಹೆಸರಿಗೆ ತಕ್ಕಂತೆ ಗುಡ್ಡ ಪ್ರದೇಶ. ಇಂತಹ ಪ್ರದೇಶಗಳ ಮೂಲಸೌಕರ್ಯಕ್ಕೆ ಮೊದಲ ಆದ್ಯತೆ ನೀಡಬೇಕಾದದ್ದು ನಗರ ಸಭೆಯ ಕರ್ತವ್ಯ. ರಸ್ತೆ, ನೀರು, ಶಿಕ್ಷಣ, ವಿದ್ಯುತ್‌ ತಲುಪಲೇಬೇಕು. ಆದರೆ ಇವೆಲ್ಲವೂ ಇಲ್ಲಿನ ಕೊರತೆಗಳ ಪಟ್ಟಿಯಲ್ಲಿವೆ. ಈ ಗುಡ್ಡದ ತುದಿಯಲ್ಲೇ ಟ್ಯಾಂಕ್‌ ಇದ್ದರೂ ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ. ಬಹಳ ಪ್ರಯಾಸಪಟ್ಟು ರಸ್ತೆಯಲ್ಲಿ ಬಂದರೂ, ವಾಹನ ಸಂಚಾರ ಬಲುಕಷ್ಟ. ಇರುವ ಅಂಗನವಾಡಿ ಬೀಳುವ ಸ್ಥಿತಿಗೆ ತಲುಪಿದ್ದರಿಂದ ಬೇರೆ ಕಡೆಗೆ ಸ್ಥಳಾಂತರ ಮಾಡಲಾಗಿದೆ. ಇದೀಗ ರಸ್ತೆಯೂ ಕುಸಿಯುತ್ತಾ ಬಂದಿರುವುದು ನಿವಾಸಿಗಳಿಗೆ ಹೊಸ ತಲೆನೋವು ಶುರುವಾಗಿದೆ.

ಕೆಂಪು ಪಟ್ಟಿ ಅಳವಡಿಸಿ
ಸೀಟಿಗುಡ್ಡೆಯಲ್ಲಿ ಹಲವಾರು ಮನೆಗಳಿವೆ. ಕಚೇರಿಗೆ ಹೋಗುವವರು, ಶಾಲಾ – ಕಾಲೇಜು ವಿದ್ಯಾರ್ಥಿಗಳು, ಕೆಲಸಕ್ಕೆಂದು ತೆರಳುವವರ ದೊಡ್ಡ ಸಂಖ್ಯೆಯೇ ಇಲ್ಲಿದೆ. ಕುಸಿದ ರಸ್ತೆಯ ಅಂಚಿನಿಂದಲೇ ತೆರಳಬೇಕಾಗಿದೆ. ಅಪಾಯ ಎದುರಾಗುವ ಮೊದಲು ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯ ಇದೆ. ಕನಿಷ್ಠ ಅಪಾಯ ಸ್ಥಳ ಎನ್ನುವುದನ್ನು ಗಮನಕ್ಕೆ ತರಲು ಕೆಂಪು ಪಟ್ಟಿಯನ್ನಾದರೂ ಹಾಕುವ ಅಗತ್ಯವಿದೆ.

ಹಿಂದೆಯೂ ಗಮನ ಸೆಳೆಯಲಾಗಿತ್ತು 
‘ಉದಯವಾಣಿ’ ಸುದಿನ ವತಿಯಿಂದ ವಾರ್ಡ್‌ ಕನೆಕ್ಟ್ ಸರಣಿ ಯೋಜನೆ ಆರಂಭಿ ಸಿದ ಸಂದರ್ಭ ಈ ರಸ್ತೆ ಕುಸಿಯುವ ಹಂತಕ್ಕೆ ತಲುಪಿರುವ ಬಗ್ಗೆ ಗಮನ ಸೆಳೆಯಲಾಗಿತ್ತು. ಆದರೆ ನಗರಸಭೆ ಯಾವೊಂದು ಕ್ರಮವನ್ನು ತೆಗೆದುಕೊಂಡಿರಲಿಲ್ಲ. ಗುಡ್ಡ ಕುಸಿದು ಬಿದ್ದಾಯಿತು. ಇನ್ನು ಸರಿಪಡಿಸಲು ದೊಡ್ಡಮಟ್ಟದ ಅನುದಾನವೇ ಬೇಕಾಗಬಹುದು. ಮುನ್ನೆಚ್ಚರಿಕೆ ವಹಿಸಿದ್ದರೆ ಕುಸಿತ ತಪ್ಪಿಸಲು ಸಾಧ್ಯವಿತ್ತು.

ನಡೆಯಲೂ ಆತಂಕ
ಮಳೆಗೆ ಗುಡ್ಡ ಜರಿದು ಬಿದ್ದಿದೆ. ಇಂಟರ್‌ಲಾಕ್‌ ಕೂಡ ಸ್ವಲ್ಪ ಕುಸಿದು ಹೋಗಿದೆ. ಮೊದಲೇ ಇದು ಅಪಾಯಕಾರಿ ಸ್ಥಳ. ಆದರೆ ಪೊದೆ ಬೆಳೆದು ನಿಂತಿದ್ದರಿಂದ ಅಪಾಯ ಗಮನಕ್ಕೆ ಬರುತ್ತಿರಲಿಲ್ಲ. ಇದೀಗ ಪೊದೆಯ ಜತೆ ಗುಡ್ಡ ಕುಸಿತ ಉಂಟಾಗಿದ್ದು, ಇಲ್ಲಿ ನಡೆದಾಡುವವರಿಗೆ ಆತಂಕ ತಂದೊಡ್ಡಿದೆ.
 - ರವಿ, ಸೀಟಿಗುಡ್ಡೆ ನಿವಾಸಿ

Advertisement
Advertisement

Udayavani is now on Telegram. Click here to join our channel and stay updated with the latest news.

Next