Advertisement

Mudhol: ಪ್ರವಾಹ ಬಂದರೆ ಜಲಾವೃತವಾಗುವ ರಸ್ತೆಗಳು

01:03 PM Aug 13, 2024 | Team Udayavani |

ಮುಧೋಳ: ಪ್ರವಾಹ ಸಂದರ್ಭದಲ್ಲಿ ಜಲಾವೃತಗೊಳ್ಳುವ ರಸ್ತೆಗಳಿಂದ ಸಾರ್ವಜನಿಕರಿಗೆ ತೊಂದರೆಯುಂಟಾಗಬಾರದು ಎಂಬ ಉದ್ದೇಶದಿಂದ ಕೋಟ್ಯಂತರ ರೂ. ಖರ್ಚು ಮಾಡಿ ನಿರ್ಮಿಸಿದ್ದ ಸೇತುವೆಗಳು ಇದ್ದೂ ಇಲ್ಲಂದತಾಗಿವೆ.

Advertisement

ಪ್ರವಾಹ ಸಂದರ್ಭದಲ್ಲಿ ಸೇತುವೆಗಳನ್ನು ಮೇಲ್ಮಟ್ಟಕೇರಿಸಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲ‌ ಕಲ್ಪಿಸಲಾಗಿದೆ‌. ಆದರೆ ಅವೈಜ್ಞಾನಿಕ ಸೇತುವೆ ನಿರ್ಮಾಣದಿಂದ ಸೇತುವೆ ಕೆಳಭಾಗದ ರಸ್ತೆಯಲ್ಲಿ ನೀರು ಸಂಗ್ರಹವಾಗುವುದರಿಂದ ಅಲ್ಲಿನ ರಸ್ತೆಗಳು ಮತ್ತೆ ಸಂಪರ್ಕ ಕಡಿದುಕೊಳ್ಳುತ್ತಿವೆ.

ಕೆಲಸಕ್ಕೆ ಬಾರದ ಚೆನ್ನಾಳ-ಒಂಟಗೋಡಿ ಸೇತುವೆ: ತಾಲೂಕಿನ ಚೆನ್ನಾಳ ಹಾಗೂ ಒಂಟಗೋಡಿ ಮಧ್ಯೆ ಪ್ರತಿಸಾರಿ ಪ್ರವಾಹ ಬಂದಾಗ ಕೆಳಮಟ್ಟದಲ್ಲಿದ್ದ ಸೇತುವೆ ಜಲಾವೃತಗೊಂಡು ಸಂಚಾರ ಸಂಪರ್ಕ‌ ಸ್ಥಗಿತಗೊಳ್ಳುತ್ತಿತ್ತು. ಈ ಸಮಸ್ಯೆ ಅರಿತ ಜನಪ್ರತಿನಿಧಿಗಳು ಹಲವು ವರ್ಷಗಳ ಹಿಂದೆ 12.5ಕೋಟಿ‌ ರೂ. ಖರ್ಚು ಮಾಡಿ ಸೇತುವೆಯನ್ನು‌ ಮೇಲ್ಮಟ್ಟಕ್ಕೇರಿಸಲು‌ ಕ್ರಮ ಕೈಗೊಂಡಿದ್ದರು. ಆದರೆ ಸೇತುವೆ ಕೆಳಭಾಗದಲ್ಲಿ ರಸ್ತೆ ತೀರಾ ಇಳಿಜಾರಿನಲ್ಲಿದ್ದು ಹೆಚ್ಚಿನ ನೀರು ಬಂದರೆ ಆ ಜಾಗದಲ್ಲಿ ನೀರು ನಿಂತು ಪ್ರವಾಹ ಸ್ಥಗಿತಗೊಳ್ಳುತ್ತದೆ. ಸೇತುವೆಯನ್ನು‌ ನಿರ್ಮಿಸಿ‌ ಕೈತೊಳೆದುಕೊಂಡಿರುವ ಅಧಿಕಾರಿಗಳು ಸೇತುವೆ ಕೆಳಭಾಗದ ರಸ್ತೆಯನ್ನು ಮೇಲ್ಮಟ್ಟಕ್ಕೇರಿಸುವುದನ್ನೆ ಮರೆತಂತಿದೆ. ಇದರಿಂದ ಪ್ರವಾಹ ಸಂದರ್ಭದಲ್ಲಿ ಈ ರಸ್ತೆಯಲ್ಲಿ‌‌ ಮೊಣಕಾಲುದ್ದ ನೀರು ನಿಂತಿತ್ತು. ಸಾರ್ವಜನಿಕರು ಅನಿವಾರ್ಯವಾಗಿ ಅದೇ ನೀರಿನಲ್ಲಿ ಸಂಚರಿಸುವಂತಾಗಿತ್ತು. ಕೋಟ್ಯಂತರ ರೂಗಳನ್ನು ವ್ಯಯಿಸಿ ಸೇತುವೆ ನಿರ್ಮಿಸಿದ್ದಾರೆ. ಆದರೆ ಕೆಳಭಾಗದ ರಸ್ತೆಯನ್ನು ಉನ್ನತೀಕರಿಸದ ಕಾರಣ ಪ್ರವಾಹ ಬಂದಾಗೊಮ್ಮೆ ನಮ್ಮ ಭಾಗದ ರಸ್ತೆ ಸಂಚಾರ ಸ್ಥಗಿತಗೊಳ್ಳುತ್ತದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ರಸ್ತೆ ಉನ್ನತೀಕರಣಗೊಳಿಸಬೇಕು ಎಂದು ಈ‌ ಭಾಗದ ಸಾರ್ವಜನಿಕರ ಒತ್ತಾಯವಾಗಿದೆ.

ಸ್ಥಗಿತಗೊಳ್ಳುತ್ತೆ ವಜ್ಜರಮಟ್ಟಿ ರಸ್ತೆ: 2019ರಲ್ಲಿ ಉಂಟಾದ ಪ್ರವಾಹದಿಂದ ವಜ್ಜರಮಟ್ಟಿ‌ ರಸ್ತೆಯಲ್ಲಿನ ಹಳೆಯ ಮಡಿಹಳ್ಳ ಜಲಾವೃತಗೊಂಡು ಹಲವಾರು ಅವಾಂತರ ಸೃಷ್ಟಿಸಿತ್ತು. ಅದನ್ನು ಮನಗಂಡು ಕೆಲ ವರ್ಷಗಳ ಹಿಂದೆ ಮಡಿಹಳ್ಳ ಸೇತುವೆಯನ್ನು ಎತ್ತರಕ್ಕೇರಿಸಲಾಗಿತ್ತು. ಆದರೆ ಈ ಸೇತುವೆಯಿಂದ ಕೆಲವೇ ಮೀಟರ್ ಹಿಂದಿನ ರಸ್ತೆ ತಗ್ಗು ಪ್ರದೇಶವಾಗಿರುವುದರಿಂದ ಈ ಭಾಗದಲ್ಲಿ‌ ಪ್ರವಾಹ ನೀರು ನುಗ್ಗುತ್ತದೆ. ಈ ಭಾರಿ ಚಿಂಚಖಂಡಿ ಸೇತುವೆ ಜಲಾವೃತಗೊಂಡ ಬಳಿಕ‌ ಕೆಲದಿನ ವಾಹನಗಳು ವಜ್ಜರಮಟ್ಟಿ‌-ಕಾತರಕಿ‌ ಮಾರ್ಗದಿಂದ ಬಾಗಲಕೋಟೆಗೆ ಸಂಚರಿಸುತ್ತಿದ್ದವು. ಆದರೆ ಹೆಚ್ಚಿನ‌ ಪ್ರಮಾಣದಲ್ಲಿ‌ ನೀರು ಬಂದ ಕಾರಣ ಯಡಹಳ್ಳಿ ಬಳಿಯಲ್ಲಿನ ಪಬ್ಲಿಕ್ ಶಾಲೆಯ ಹತ್ತಿರದ ತಗ್ಗು ಪ್ರದೇಶದ ರಸ್ತೆ ಮೇಲೆ ನೀರು ಆವರಿಸಿ ಈ ರಸ್ತೆಯೂ ಸಂಪರ್ಕ‌ ಕಡಿತಗೊಂಡಿತ್ತು. ಮೊದಲು 10-15 ಕಿ.ಮೀ ದೂರ ಸುತ್ತುವರಿದ ಸಂಚರಿಸುತ್ತಿದ್ದ ವಾಹನಗಳು ವಜ್ಜರಮಟ್ಟಿ‌ ರಸ್ತೆ ಸಂಪರ್ಕ‌ ಕಡಿತಗೊಂಡ ಬಳಿಕ ಮಂಟೂರ,ಕಿಶೋರಿ,ಹಲಗಲಿ‌ ಮಾರ್ಗವಾಗಿ 25-30ಕಿ.ಮೀ‌ ಸುತ್ತಿಬಳಸಿ ಸಂಚರಿಸುವ ಪರಿಸ್ಥಿತಿ‌ ನಿರ್ಮಾಣವಾಯಿತು.

ಕೋಟ್ಯಂತರ ರೂ. ವ್ಯಯಿಸಿ ನಿರ್ಮಿಸಿರುವ ಸೇತುವೆಗಳು‌ ಪ್ರವಾಹದಂತಹ ಆಪತ್ಕಾಲದಲ್ಲಿ‌ ನೆರವಿಗೆ ಬಾರದಿದ್ದರೆ ಯಾವ ಪುರುಷಾರ್ಥಕ್ಕೆ‌ ಸೇತುವೆ ಮೇಲ್ಮಟ್ಟಕ್ಕೇರಿಸಬೇಕು ಎಂಬುದು ಪ್ರಜ್ಞಾವಂತರ ಪ್ರಶ್ನೆಯಾಗಿದೆ.

Advertisement

ಮೊದಲಿದ್ದ ಸೇತುವೆ ಕೆಳಮಟ್ಟದಲ್ಲಿತ್ತು. ಪ್ರವಾಹದಿಂದ ಅನುಕೂಲ ಕಲ್ಪಿಸಲು ಆ ಸೇತುವೆಯನ್ನು ಎತ್ತರಕ್ಕೇರಿಸಲಾಗಿದೆ. ಆದರೆ ಸೇತುವೆ ಹಿಂದಿನ ರಸ್ತೆ ತಗ್ಗು ಪ್ರದೇಶದಲ್ಲಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದರೆ ಮತ್ತೆ ರಸ್ತೆ ಸಂಪರ್ಕ‌‌ ಕಡಿದುಕೊಳ್ಳುತ್ತದೆ. ಹೀಗಾಗಿ‌ ಸೇತುವೆಯಿಂದ ನಮಗೆ ಪ್ರವಾಹ ಸಂದರ್ಭದಲ್ಲಿ ಉಪಯೋಗವಾಗುತ್ತಿಲ್ಲ.
– ಸುರೇಶ ಒಂಟಗೋಡಿ‌ ಪ್ರಜೆ

ಚೆನ್ನಾಳ-ಒಂಟಗೋಡಿ‌ ಮಧ್ಯೆ ನಿರ್ಮಿಸಿರು ಸೇತುವೆ ಹಿಂದಿನ ರಸ್ತೆ ಉನ್ನತೀಕರಣಕ್ಕೆ 3.6ಕೋಟಿ‌ ರೂ. ಟೆಂಡರ್ ಪ್ರಕ್ರಿಯೆ ತಾಂತ್ರಿಕ ಹಂತದಲ್ಲಿದೆ.
-ಚನ್ನಬಸವ ಮಾಚಕನೂರ, ಲೋಕೋಪಯೋಗಿ‌ ಇಲಾಖೆ ಎಇಇ

– ಗೋವಿಂದಪ್ಪ ತಳವಾರ ಮುಧೋಳ

Advertisement

Udayavani is now on Telegram. Click here to join our channel and stay updated with the latest news.

Next