Advertisement

ಕುಂದಾಪುರ: ಸರ್ವಿಸ್‌ ರಸ್ತೆಯಿಂದ ವಾಹನ ಇಳಿಸಿದರೆ ನೇರ ಹೊಂಡಕ್ಕೆ !

07:35 PM Aug 11, 2021 | Team Udayavani |

ಕುಂದಾಪುರ: ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್‌ ರಸ್ತೆಯಿಂದ ಒಳಗಿನ ರಸ್ತೆಗೆ ವಾಹನಗಳು ತಿರುಗಿದರೆ ನೇರ ಹೊಂಡಕ್ಕೆ ಬೀಳುತ್ತವೆ! ಇಂತಹ ಪರಿಸ್ಥಿತಿ ಇರುವುದು ಇಲ್ಲಿನ ಪುರಸಭೆ ವ್ಯಾಪ್ತಿಯ ಶ್ರೀದೇವಿ ನರ್ಸಿಂಗ್‌ ಹೋಂ ಬಳಿ.

Advertisement

ಹೊಂಡ:

ಶಾಸ್ತ್ರಿ ಸರ್ಕಲ್‌ನಿಂದ ಉಡುಪಿ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯೂ ಆದ ಸರ್ವಿಸ್‌ ರಸ್ತೆಯಲ್ಲಿ ಶ್ರೀದೇವಿ ನರ್ಸಿಂಗ್‌ ಹೋಂ ಹಾದು ಹೋಗುವ ರಸ್ತೆಯಿದೆ. ಅನೇಕ ಮನೆಗಳನ್ನು ಸಂಪರ್ಕಿಸುವ ಈ ರಸ್ತೆಗೆ ಸರ್ವಿಸ್‌ ರಸ್ತೆಯಿಂದ ವಾಹನ ಇಳಿಸುವಾಗ ಅಥವಾ ಈ ರಸ್ತೆ ಮೂಲಕ ಬಂದು ಸರ್ವಿಸ್‌ ರಸ್ತೆ ಕೂಡುವಾಗ ದಿನಕ್ಕೆ ಐದಾರು ವಾಹನಗಳು ಬೀಳುತ್ತಿವೆ. ತಡೆಗೋಡೆಯೇ ಇಲ್ಲದ ಈ ರಸ್ತೆಯಲ್ಲಿ ವಾಹನಗಳು ತಂತಿ ಮೇಲಿನ ನಡಿಗೆಯಂತೆ ಚಲಿಸಬೇಕಿದ್ದು ಒಂದಲ್ಲದಿದ್ದರೆ ಒಂದು ನಿಯಂತ್ರಣ ತಪ್ಪುತ್ತಿವೆ.

ಎರಡು ವಾರ್ಡ್‌ಗೆ ಸಂಬಂಧ:

ಈ ರಸ್ತೆ ಎರಡು ವಾರ್ಡ್‌ಗೆ ಸಂಬಂಧಪಡುತ್ತದೆ. ರಸ್ತೆಯ ಒಂದು ಬದಿ ಶಾಂತಿನಿಕೇತನ ವಾರ್ಡ್‌ ಹಾಗೂ ಇನ್ನೊಂದು ಬದಿ ಕಲ್ಲಾಗರ ವಾರ್ಡ್‌ಗೆ ಸಂಬಂಧಪಡುತ್ತದೆ. ಆದ್ದರಿಂದ ಅಭಿವೃದ್ಧಿಯ ಪ್ರಶ್ನೆ ಉದ್ಭವಿಸಿದಾಗ ಎರಡೂ ಸದಸ್ಯರು ಒಮ್ಮತ ಸೂಚಿಸಬೇಕಾಗುತ್ತದೆ. ಆದ್ದರಿಂದ ರಸ್ತೆಗೆ ತಡೆಗೋಡೆ ಕಟ್ಟುವ ಬೇಡಿಕೆ ಬಾಕಿ ಆಗಿದೆ.

Advertisement

ಮನವಿ:

ಸಾರ್ವಜನಿಕರು, ಮಕ್ಕಳು, ಆಸ್ಪತ್ರೆಗೆ ಬರುವವರು ಸಂಚರಿಸುವ ಈ ರಸ್ತೆಯ ಅಪಾಯಕಾರಿ ಸ್ಥಿತಿಯನ್ನು ಸರಿಪಡಿಸುವಂತೆ ಸಾರ್ವಜನಿಕರು ಪುರಸಭೆಗೆ ಮನವಿ ಮಾಡಿದ್ದಾರೆ. ಎಕೆಜಿ ರಸ್ತೆಯ ಎರಡೂ ಬದಿಯ ಚರಂಡಿಯಲ್ಲಿ ತುಂಬಿರುವ ಮಣ್ಣನ್ನು ತೆಗೆದು ಆಳವಾದ ಚರಂಡಿ ನಿರ್ಮಿಸಿ ರಿವಿಟ್‌ಮೆಂಟನ್ನು  ಹಾಕಿ ಅದರ ಮೇಲೆ ಚಪ್ಪಡಿ ಹಾಸಬೇಕು. ಆಗ ಎರಡು ವಾಹನಗಳು ಸರಾಗವಾಗಿ ಹೋಗಲು ಅನುಕೂಲವಾಗುತ್ತದೆ. ಆದ್ದರಿಂದ ಕಾಮಗಾರಿ ಮಾಡಬೇಕು ಎಂದು ಮುಖ್ಯಾಧಿಕಾರಿಗೆ, ಶಾಂತಿನಿಕೇತನ ಹಾಗೂ ಕಲ್ಲಾಗರ ವಾರ್ಡ್‌ಗಳ ಸದಸ್ಯರಿಗೆ ಮನವಿ ನೀಡಿದ್ದಾರೆ.

ಅನುದಾನ ಕೊರತೆ:

ಪುರಸಭೆಗೆ ಅನುದಾನ ಕೊರತೆಯಿದೆ. ಈ ಬಾರಿ ಕೊರೊನಾ ಕಾರಣದಿಂದಲೂ ಅನುದಾನ ಲಭ್ಯ ಇಲ್ಲ. ಅಷ್ಟಲ್ಲದೆ ಬಹಳ ದೊಡ್ಡ ಆದಾಯ ಇಲ್ಲದ ಈ ಪುರಸಭೆಗೆ ವಿಶೇಷ ಅನುದಾನವೇ ಅಭಿವೃದ್ಧಿಗೆ ಮೂಲ ಬಂಡವಾಳ ಆಗಿದೆ. ಆದರೆ ಕೆಲವು ವರ್ಷಗಳಿಂದ ವಿಶೇಷ ಅನುದಾನ ಯುಜಿಡಿ ಯೋಜನೆಗೆ ಮೀಸಲಿಡಲಾಗುತ್ತಿದೆ. ಈಗ ಯುಜಿಡಿ ಯೋಜನೆಯ ಅನುದಾನ ಬಳಕೆಯಲ್ಲೂ ಅಪಸ್ವರ ಕೇಳಿ ಬರುತ್ತಿದೆ. ಒಟ್ಟಿನಲ್ಲಿ ಅದೂ ಇಲ್ಲ ಇದೂ ಇಲ್ಲ ಎಂಬ ಸ್ಥಿತಿ ಬಂದೊದಗಿದೆ.

ತೆರೆದು ಕೊಡಲಿ:

ಸರ್ವಿಸ್‌ ರಸ್ತೆಯಿಂದ ಹೆದ್ದಾರಿಗೆ, ಹೆದ್ದಾರಿಯಿಂದ ಸರ್ವಿಸ್‌ ರಸ್ತೆಗೆ ಬರಲು ಇಲ್ಲಿ ಪ್ರವೇಶಿಕೆಯೊಂದು  ಅಗತ್ಯವಿದೆ. ಈ ಭಾಗದ ಜನರಿಗೆ ಸುತ್ತು ಬಳಸಿ ಬರಬೇಕಾದ ಅನಿವಾರ್ಯ ಇದ್ದು ಅನವಶ್ಯ ಸುತ್ತಾಟ ನಡೆಯುತ್ತಿದೆ. ಆದ್ದರಿಂದ ಹೆದ್ದಾರಿಗೆ ನೇರಪ್ರವೇಶ ನೀಡಿದರೆ ಆ ಸುತ್ತಾಟ ಕೊನೆಯಾಗಲಿದೆ.

ಅವಾಂತರ :

ಎರಡು ವಾರ್ಡ್‌ಗಳ ಗಡಿಭಾಗವಾದ ಎಕೆಜಿ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ಜನ ಸಂಚರಿಸುತ್ತಾರೆ. ಆಸ್ಪತ್ರೆ, ಅಪಾರ್ಟ್‌ಮೆಂಟ್‌, ನೂರಾರು ಮನೆಗಳಿವೆ. ತೀರಾ ಕಿರಿದಾದ ರಸ್ತೆಯಲ್ಲಿ ಎರಡು ವಾಹನಗಳು ಏಕಕಾಲದಲ್ಲಿ ಸಂಚರಿಸುವುದು ಕಷ್ಟವಾಗಿದೆ. ಅಷ್ಟಲ್ಲದೆ ವಾಹನದ ಚಕ್ರಗಳು ಚರಂಡಿಗೆ ಇಳಿಯುತ್ತವೆ. ಆಸ್ಪತ್ರೆಗೆ ಬರುವ ಆ್ಯಂಬುಲೆನ್ಸ್‌ ಸೇರಿದಂತೆ ಅನೇಕ ಚತುಶ್ಚಕ್ರ ವಾಹನಗಳು ನಿಯಂತ್ರಣ ತಪ್ಪಿ ಬೀಳುತ್ತಿವೆ.

ಈ ರಸ್ತೆಯ ಸಮಸ್ಯೆ ಗಮನಕ್ಕೆ ಬಂದಿದೆ. ಸಾರ್ವಜನಿಕರು ಮನವಿ ನೀಡಿದ್ದಾರೆ. ಎರಡೂ ವಾರ್ಡ್‌ಗಳ ಜನಪ್ರತಿನಿಧಿಗಳು ಒಟ್ಟಾಗಿ ಅನುದಾನ ಲಭ್ಯವಾದ ಕೂಡಲೇ ಆದ್ಯತೆ ನೆಲೆಯಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು. ವನಿತಾ ಬಿಲ್ಲವ ಸದಸ್ಯರು, ಪುರಸಭೆ

ಇದು ಅನೇಕ ಸಮಯದಿಂದ ಇರುವ ಸಮಸ್ಯೆ. ಪದೇ ಪದೇ ಅವಘಡಗಳು ಸಂಭವಿಸುತ್ತಿರುತ್ತವೆ. ಆಸ್ಪತ್ರೆ, ಫ್ಲಾಟ್‌ಗಳು, ವಾಸ್ತವ್ಯದ ಮನೆಗಳು ಇರುವ ಕಾರಣ ವಾಹನಸಂಚಾರ ಸದಾ ಇರುತ್ತದೆ. ತಡೆಗೋಡೆ ನಿರ್ಮಿಸಿ ಅಪಾಯ ತಪ್ಪಿಸುವ ಕೆಲಸ ಆಗಬೇಕಿದೆ.ಧೀರಜ್‌ರಾವ್‌, ಸ್ಥಳೀಯರು

Advertisement

Udayavani is now on Telegram. Click here to join our channel and stay updated with the latest news.

Next