ಬೆಂಗಳೂರು: ವಾರದೊಳಗೆ ನಗರದ ರಸ್ತೆಗಳನ್ನು ಗುಂಡಿಮುಕ್ತಗೊಳಿಸಬೇಕು ಎಂದು ಮೇಯರ್ ಸಂಪತ್‌ರಾಜ್ ಅಧಿಕಾರಿಗಳಿಗೆ ಸೂಚಿಸಿದರು. ಹೆಬ್ಟಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಬಿಎಂಪಿ ವತಿಯಿಂದ ಕೈಗೆತ್ತಿಕೊಂಡಿರುವ ಬೃಹತ್ ಮಳೆನೀರು ಕಾಲುವೆ ಹಾಗೂ ಇನ್ನಿತರ ಅಭಿವೃದ್ಧಿ ಕಾಮಗಾರಿಗಳ ಪರಿಶೀಲಿಸಿದ ಅವರು, ನಗರದಲ್ಲಿ ಮಳೆ ನಿಂತಿರುವ ಹಿನ್ನೆಲೆ ವಾರದೊಳಗೆ ನಗರದಲ್ಲಿನ ಎಲ್ಲ ಗುಂಡಿಗಳನ್ನು ದುರಸ್ತಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಗಂಗಾನಗರ ವಾರ್ಡ್‌ಗೆ ಭೇಟಿ ನೀಡಿದ ವೇಳೆ ಎಸ್‌ಬಿಎಂ ಬಡಾವಣೆಯ ಪ್ರಸಿಡೆನ್ಸಿ ಶಾಲೆ ಬಳಿಯ ಆಟದ ಮೈದಾನದಲ್ಲಿ ವಾಕಿಂಗ್‌ಟ್ರ್ಯಾಕ್ ನಿರ್ಮಿಸುವಂತೆ ಕೆಲ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಮೇಯರ್‌ಗೆ ಮನವಿ ಪತ್ರ ನೀಡಿದರು. ಅದಕ್ಕೆ ಸ್ಪಂದಿಸಿದ ಅವರು, ಕೂಡಲೇ ಮೈದಾನದ ಅಭಿವೃದ್ಧಿಗೆ ಸಮಗ್ರ ಯೋಜನಾ ವರದಿ ಸಿದ್ಧಪಡಿಸುವಂತೆ ಬಿಬಿಎಂಪಿ ಎಂಜಿನಿಯರ್‌ಗಳಿಗೆ ಆದೇಶಿಸಿದರು.
ನಂತರ ಮನೋರಾಯನ ಪಾಳ್ಯದ ದೊಡ್ಡಮ್ಮ ಯಲ್ಲಮ್ಮ ದೇವಸ್ಥಾನದ ಸಮೀಪದ ಕಾಂಪೌಂಡ್ ಗೋಡೆ ಕುಸಿದು ಅನಾಹುತವಾಗಿರುವುದನ್ನು ಪರಿಶೀಲಿಸಿ, ಕೂಡಲೇ ತಡೆಗೋಡೆ ಎತ್ತರಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ನಂತರ ಸೀತಪ್ಪ ಬಡಾವಣೆ, ಬಾಮುಂಡಿ ನಗರ ಮುಖ್ಯರಸ್ತೆ, ಗಂಗಮ್ಮ ಬಡಾವಣೆ, ವಸಂತಪ್ಪ ಬ್ಲಾಕ್, ಎಸ್‌ಬಿಎಂ ಬಡಾವಣೆ, ಆನಂದನಗರ ಬಡಾವಣೆಗಳಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ಚುರುಕುಗೊಳಿಸುವಂತೆ ಸೂಚಿಸಿದರು.
ನಂತರ ಕುಂತಿ ಗ್ರಾಮ, ಚೋಳನಾಯಕನಹಳ್ಳಿ ಪ್ರದೇಶಗಳಿಗೆ ಭೇಟಿ ನೀಡಿದ ಅವರು, ಪ್ರತಿಯೊಬ್ಬ ಅಧಿಕಾರಿಯೂ ತಮ್ಮ ವಾರ್ಡ್‌ಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳಿಗೆ ವ್ಯಯಿಸಲಾಗುತ್ತಿರುವ ಖರ್ಚಿನ ಬಗ್ಗೆ ಒಂದು ಡೈರಿಯಲ್ಲಿ ಬರೆದಿಡಬೇಕು. ಯಾವುದೇ ಸಂದರ್ಭದಲ್ಲಿ ಪರಿಶೀಲನೆ ನಡೆಸಿದರೂ ಅಧಿಕಾರಿಗಳು ಡೈರಿಯೊಂದಿಗೆ ಬರಬೇಕು ಎಂದು ತಿಳಿಸಿದರು.
ಒಂದು ವರ್ಷದ ಅವಧಿಯಲ್ಲಿ ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳು ಹಾಗೂ ಪ್ರಗತಿಯಲ್ಲಿರುವ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಮುಗಿಸಬೇಕು. ಎಂಜಿನಿಯರ್‌ಗಳು ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡದಿದ್ದರೆ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಉಪಮೇಯರ್ ಪದ್ಮಾವತಿ ನರಸಿಂಹಮೂರ್ತಿ, ಸ್ಥಳೀಯ ಪಾಲಿಕೆ ಸದಸ್ಯರು ಹಾಗೂ ಪಾಲಿಕೆಯ ಅಧಿಕಾರಿಗಳು ಹಾಜರಿದ್ದರು.