Advertisement

ಇಲ್ಲಿ ರಸ್ತೆ ಅಭಿವೃದ್ಧಿಯೇ ಒಂದು ಸಮಸ್ಯೆ :ವರ್ಷ ಕಳೆಯುತ್ತಾ ಬಂದರೂ ಕಾಮಗಾರಿ ಮುಗಿಯುತ್ತಿಲ್ಲ

12:30 PM Jan 31, 2022 | Team Udayavani |

ರಾಯಚೂರು : ಕೆಲವೆಡೆ ರಸ್ತೆಗಳ ಅಭಿವೃದ್ಧಿ ಆಗುತ್ತಿಲ್ಲ ಎಂಬ ಆರೋಪಗಳಿದ್ದರೆ, ಇಲ್ಲಿ ರಸ್ತೆ ಅಭಿವೃದ್ಧಿ ಆರಂಭಿಸಿದ್ದೇ ಸಮಸ್ಯೆಯಾಗಿದೆ. ವರ್ಷ ಕಳೆಯುತ್ತಾ ಬಂದರೂ ರಸ್ತೆ ನಿರ್ಮಾಣ ಕಾಮಗಾರಿ ಮುಗಿಯದಿರುವುದು ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದೆ.

Advertisement

ನಗರದ ತೀನ್‌ ಕಂದೀಲ್‌ ವೃತ್ತದಿಂದ ಅಶೋಕ ಡಿಪೋದವರೆಗಿನ ರಸ್ತೆ ಅಗಲೀಕರಣ ಕಾರ್ಯ ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಕೊನೆಗೂ ರಸ್ತೆ ಕಾಮಗಾರಿ ಶುರುವಾಯಿತು. ಆದರೆ, ವರ್ಷ ಕಳೆಯುತ್ತಾ ಬಂದರೂ ಮುಗಿಯುವ ಲಕ್ಷಣಗಳೇ ಕಾಣುತ್ತಿಲ್ಲ. ಇದು ಸ್ಥಳೀಯರು, ಬೀದಿ ಬದಿ ವ್ಯಾಪಾರಿಗಳಿಗೆ ಸಂಕಷ್ಟ ತಂದೊಡ್ಡಿದ್ದು, ನಿತ್ಯ ಯಾತನೆ ಎದುರಿಸುವಂತಾಗಿದೆ.

ಸಾಕಷ್ಟು ಅಡೆ ತಡೆಗಳ ನಡುವೆ ರಸ್ತೆ ತೆರವು ಕಾರ್ಯಾಚರಣೆ ಮಾಡಿ ಮುಗಿಸಲಾಗಿದೆ. ಆದರೆ, ಮುಂದಿನ ಕಾಮಗಾರಿಗಳು ವೇಗ ಪಡೆಯುತ್ತಿಲ್ಲ. ಇದರಿಂದ ಅರೆಬರೆಯಾಗಿರುವ ಕೆಲಸದಲ್ಲೇ
ಜನಜೀವನ ದೂಡುವಂತಾಗಿದೆ. ಇದಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಕಾರಣವೋ, ಅಧಿಕಾರಿಗಳು, ಗುತ್ತಿಗೆದಾರರ ನಿರ್ಲಕ್ಷ್ಯ ಕಾರಣವೋ ತಿಳಿಯದಾಗಿದೆ.

ನಗರೋತ್ಥಾನ ಯೋಜನೆಯಡಿ ರಸ್ತೆ ಅಗಲೀಕರಣ, ಚರಂಡಿ ಹಾಗೂ ಒಳಚರಂಡಿ ಕಾಮಗಾರಿಗೆ 4.30 ಕೋಟಿ ರೂ. ಖರ್ಚು ಮಾಡಲಾಗಿದೆ. ತೆರವು ವೇಳೆಯೂ ಯಡವಟ್ಟು: ರಸ್ತೆ ಅಭಿವೃದ್ಧಿ
ಮಾಡುವ ಮುನ್ನ ಎರಡು ಬದಿ ತೆರವು ಮಾಡುವಾಗಲೂ ಅಧಿಕಾರಿಗಳು ತಾರತಮ್ಯ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದವು. ಈ ವಿಚಾರವಾಗಿ ಸ್ಥಳೀಯರು ಅಧಿಕಾರಿಗಳು,
ಜನಪ್ರತಿನಿಧಿಗಳೊಂದಿಗೆ ವಾಕ್ಸಮರ ಕೂಡ ಮಾಡಿದ್ದಾರೆ. ಆದರೆ, ಇದು ರಾಜಕೀಯ ವಿಷಯವಾಗಿ ಸಮಸ್ಯೆ ದೊಡ್ಡದಾಗಿತ್ತು. ಒಂದು ಕಡೆ ಮಾತ್ರ ಹೆಚ್ಚು ತೆರವು ಮಾಡಿದ್ದು, ಮತ್ತೂಂದು
ಬದಿಯಲ್ಲಿ ಸರಿಯಾಗಿ ತೆರವು ಮಾಡಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದವು. ಅಲ್ಲದೇ, ಇದೇ ವಿಚಾರವಾಗಿ ನಗರಸಭೆ ಅಧ್ಯಕ್ಷ, ಹಿಂದಿನ ಪೌರಾಯುಕ್ತ, ಸ್ಥಳೀಯ ಮುಖಂಡರ ಸಮ್ಮುಖದಲ್ಲಿ ಗಲಾಟೆ ಕೂಡ ನಡೆದಿತ್ತು.

ಇದನ್ನೂ ಓದಿ : ಧಾರ್ಮಿಕ ಮತಾಂತರಕ್ಕೆ ಹೆದರಿ ತಂಜಾವೂರಿನ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ ಸಿಬಿಐಗೆ

Advertisement

ಬೀದಿ ಬದಿ ವರ್ತಕರಿಗೆ ಸಂಕಷ್ಟ: ಈ ಮಾರ್ಗವಾಗಿ ಬೀದಿ ವ್ಯಾಪಾರ ಮಾಡಿಕೊಂಡಿದ್ದ ಅನೇಕ ಕುಟುಂಬಗಳಿಗೆ ಇದರಿಂದ ಸಾಕಷ್ಟು ಸಮಸ್ಯೆಯಾಗಿದೆ. ಮಚ್ಚಿ ಬಜಾರ್‌ ಎಂದೇ
ಕರೆಯುವ ಪ್ರದೇಶದಲ್ಲಿ ಮೀನು ಮಾರಿ ಜಿವನ ನಡೆಸುವ ಕುಟುಂಬಗಳು ಹೆಚ್ಚಾಗಿದ್ದವು. ಈಗ ರಸ್ತೆ ಕಾಮಗಾರಿ ಶುರುವಾದಾಗಿನಿಂದ ಅವರ ವ್ಯಾಪಾರ ವಹಿವಾಟು ಸಾಕಷ್ಟು
ಸಮಸ್ಯೆಯಾಗುತ್ತಿದೆ. ಇನ್ನೂ ತಳ್ಳು ಬಂಡಿಗಳಲ್ಲಿ ವ್ಯಾಪಾರ ಮಾಡಿಕೊಂಡ ಸಾಕಷ್ಟು ಜನರಿಗೂ ಸಮಸ್ಯೆಯಾಗಿದೆ. ಈ ರಸ್ತೆಯಲ್ಲಿ ಸಿಟಿ ಬಸ್‌ ಸಂಚಾರವೂ ನಿಂತು ಹೋಗಿದೆ. ಯಾವುದೇ
ದೊಡ್ಡ ವಾಹನಗಳ ಓಡಾಟ ಕಷ್ಟವಾಗಿದೆ. ಆದಷ್ಟು ಬೇಗ ರಸ್ತೆ ಕಾಮಗಾರಿ ಮುಗಿಸಿ ನಮಗೆ ಅನುಕೂಲ ಮಾಡಿಕೊಡಲಿ ಎನ್ನುವುದು ಸ್ಥಳೀಯರ ಒತ್ತಾಸೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next