ಬಾದಾಮಿ: ಬನಶಂಕರಿಯಿಂದ ಬಾದಾಮಿಯವರೆಗೆ ಕೈಗೊಂಡಿರುವ ರಸ್ತೆ ಸುಧಾರಣೆ ಕಾಮಗಾರಿ ಕಳಪೆಯಾಗಿದೆ. ಎರಡೂ ಬದಿಯ ಪಾದಚಾರಿ ರಸ್ತೆ ಕಿರಿದಾಗಿದೆ. ಲೋಕೋಪಯೋಗಿ ಇಲಾಖೆಯಿಂದ 5 ಕೋಟಿ ರೂ.ವೆಚ್ಚದ ಈ ಕಾಮಗಾರಿ ಡಿಪಿಆರ್ ಪ್ರಕಾರ ನಡೆಯುತ್ತಿಲ್ಲ ಎಂದು ಬಾದಾಮಿ ಅಭಿವೃದ್ಧಿ ಹೋರಾಟ ಸಮಿತಿ ಆರೋಪಿಸಿದೆ.
ಪ್ರತಿ ವರ್ಷ ನಡೆಯುವ ಬಾದಾಮಿ-ಬನಶಂಕರಿದೇವಿ ಜಾತ್ರೆಯ ವೇಳೆ ಲಕ್ಷಾಂತರ ಜನ ಭಕ್ತರು ಈ ರಸ್ತೆಯಲ್ಲಿಯೇ ಸಾಗಿ ದೇವಿಯ ದರ್ಶನ ಪಡೆಯುವುದರಿಂದ ಸುಧಾರಣೆ ಕಾಮಗಾರಿ ನಡೆಸಿರುವುದು ಸಂತಸ ತಂದಿದೆ. ಆದರೆ, ಗುಣಮಟ್ಟ ಕಡಿಮೆಯಾಗಿದೆ.
ಪಾದಚಾರಿ ರಸ್ತೆಗೆ ಕರ್ಬಸ್ಟೋನ್ ಅಳವಡಿಸುತ್ತಿಲ್ಲ. ಇದರಿಂದ ವಾಹನಗಳು ಫುಟ್ ಪಾತ್ ರಸ್ತೆಯ ಮೇಲೆಯೇ ಬಂದು ಅವಘಡಗಳು ಸಂಭವಿಸುವ ಸಾಧ್ಯತೆ ಇದೆ. ಕೂಡಲೇ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನಹರಿಸಿ ಗುಣಮಟ್ಟದ ಕೆಲಸ ನಡೆಯುವಂತೆ ಕ್ರಮಕೈಗೊಳ್ಳಬೇಕು ಎಂದು ಬಾದಾಮಿ ಅಭಿವೃದ್ಧಿ ಹೋರಾಟ ಸಮಿತಿ ಆಗ್ರಹಿಸಿದೆ.
ಬನಶಂಕರಿ ದೇವಸ್ಥಾನದಿಂದ ಬಾದಾಮಿಯ ರಾಮದುರ್ಗ ಕ್ರಾಸ್‌ವರೆಗೂ ಕಾಮಗಾರಿ ಮಾಡಬೇಕಿದೆ. ಆದರೆ, ಗಾತ್ರವನ್ನು ಕಡಿತಗೊಳಿಸಿ ಆರಂಭಿಸಲಾಗಿದೆ. ರಸ್ತೆಯ ಎರಡೂ ಬದಿಯಲ್ಲಿ 1 ಮೀಟರ ಡಾಂಬರೀಕರಣ ಮಾಡಲಾಗಿದೆ. ಆದರೆ ಅದರಲ್ಲಿಯೂ 1 ಮೀ ಪೂರ್ಣ ಕೆಲಸ ನಡೆದಿಲ್ಲ. ರಸ್ತೆಯ ಎರಡೂ ಬದಿಯಲ್ಲಿ 2.75ಮೀ ಪಾದಚಾರಿ ರಸ್ತೆ ನಿರ್ಮಿಸಬೇಕು. ಆದರೆ 2.10ಮೀಟರ ಮಾತ್ರ ಮಾಡಲಾಗುತ್ತಿದೆ.
ಸರಕಾರದಿಂದ ಬಂದ ಅನುದಾನ ಸದ್ಬಳಕೆಯಾಗಬೇಕು ಎಂದು ಹೋರಾಟ ಸಮಿತಿ ಆಗ್ರಹಿಸಿದೆ.