ಗೌರಿಬಿದನೂರು: ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 234ರ ಅಗಲೀಕರಣಕ್ಕೆ ಕಟ್ಟಡಗಳನ್ನು ತೆರವುಗೊಳಿಸುವುದಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಮಾಲೀಕರಿಗೆ ಸ್ವಲ್ಪ ದಿನಗಳ ಮಟ್ಟಿಗೆ ರಿಲೀಫ್ ಸಿಕ್ಕಂತಾಗಿದೆ.
ರಸ್ತೆ ಬದಿಯ ಕಟ್ಟಡ ಮಾಲೀಕರಾದ ಎಸ್ .ಎ.ನಾಗರಾಜ್ , ಎನ್.ಆರ್.ಮಂಜುನಾಥ ಗುಪ್ತ, ಶ್ರೀನಿವಾಸ್ ಗುಪ್ತ ಸೇರಿದಂತೆ 22 ಮಂದಿ ಕಟ್ಟಡ ಮಾಲೀಕರು, ತಮಗೆ ಯಾವುದೇ ಮಾಹಿತಿ ಹಾಗೂ ಸೂಕ್ತ ಪರಿಹಾರ ನೀಡದೆ ಕಟ್ಟಡ ತೆರವುಗೊಳಿಸಲು ಮುಂದಾಗಿರುವುದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದರು. ರಾಜ್ಯ ಸರ್ಕಾರದ ಕಾರ್ಯದರ್ಶಿ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು, ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ, ಗೌರಿಬಿದನೂರು ತಹಶೀಲ್ದಾರ್, ನಗರಸಭೆ ಆಯುಕ್ತರು, ಪೊಲೀಸ್ ವೃತ್ತ ನಿರೀಕ್ಷಕರು ಸೇರಿ 9 ಮಂದಿಯನ್ನು ಪ್ರತಿವಾದಿಗಳನ್ನಾಗಿಸಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಾ ಧೀಶರು, ಕಟ್ಟಡಗಳ ತೆರವು ಕಾರ್ಯಾಚರಣೆಗೆ ತಡೆಯಾಜ್ಞೆ ಸೂಚಿಸಿದ್ದು, ಮುಂದಿನ ಹಂತದ ವಿಚಾರಣೆವರೆಗೆ ಯತಾಸ್ಥಿತಿ ಕಾಪಾಡಿ ಕೊಳ್ಳುವಂತೆ ಆದೇಶಿಸಿದ್ದಾರೆ.
ಕಟ್ಟಡ ಮಾಲೀಕರ ವಾದ ಏನು?: ನಾವು ನೂರು ವರ್ಷಗಳಿಂದ ಕಟ್ಟಡಗಳನ್ನು ನಿರ್ಮಿಸಿಕೊಂಡು ವಾಸ, ವಾಣಿಜ್ಯ ವಹಿವಾಟು ನಡೆಸಿಕೊಂಡು ಬರುತ್ತಿದ್ದೇವೆ. ಸ್ವತ್ತುಗಳಿಗೆ ಸಂಬಂಧಿಸಿದ ಭೂ ಕಂದಾಯ, ಜಲ ಕಂದಾಯ, ವಿದ್ಯುತ್ ಎಲ್ಲವನ್ನೂ ಪಾವತಿಸಿಕೊಂಡು ಬರುತ್ತಿದ್ದೇವೆ. ಆದರೆ, ಈಗ ಯಾವುದೇ ರೀತಿಯ ಮಾಹಿತಿ ನೀಡದೆ ಹಾಗೂ ಸೂಕ್ತ ಪರಿಹಾರ ವಿತರಿಸದೆ ಕಟ್ಟಡಗಳನ್ನು ತೆರವುಗೊಳಿಸಲು ಮುಂದಾಗಿರುವುದರಿಂದ ನಮ್ಮ ಜೀವನ ಅತಂತ್ರ ಸ್ಥಿತಿಗೆ ತಲುಪಬೇಕಾಗುತ್ತದೆ. ಆದ್ದರಿಂದ ನ್ಯಾಯಯುತ ಪರಿಹಾರ ನೀಡಬೇಕು. ರಸ್ತೆ ಅಗಲೀಕರಣದ ವಿಸ್ತೀರ್ಣವನ್ನು ಕಡಿಮೆಗೊಳಿ ಸಬೇಕು ಎಂಬುದು ಕಟ್ಟಡ ಮಾಲೀಕರ ಆಗ್ರಹವಾಗಿದೆ.
ಬೈಪಾಸ್ ಇದ್ದರೂ ಅಗಲೀಕರಣವೇಕೆ?; ಚಿಂತಾಮಣಿ ಮತ್ತು ಚಿಕ್ಕಬಳ್ಳಾಪುರ ಬೈಪಾಸ್ ರಸ್ತೆಯಿಲ್ಲದ ಕಾರಣ ನಗರದ ಮೂಲಕವೇ ಈ ಹೆದ್ದಾರಿ ಹಾದು ಹೋಗಲಿದೆ. ಕೋಲಾರ ಮತ್ತು ಮುಳಬಾಗಿನಲ್ಲಿ ಬೈಪಾಸ್ ರಸ್ತೆಯಿರುವ ಕಾರಣ ಕೋಲಾರ ಮತ್ತು ಮುಳಬಾಗಿಲು ನಗರದಲ್ಲಿ ರಸ್ತೆ ಅಗಲೀಕರಣ ಮಾಡುತ್ತಿಲ್ಲ. ಆದರೆ, ಗೌರಿಬಿದ ನೂರಿನಲ್ಲಿ ಬೈಪಾಸ್ ಇದೆ. ಭಾರಿ ವಾಹನಗಳು ಬೈಪಾಸ್ ಮೂಲಕವೇ ಹಾದು ಹೋಗಲಿವೆ. ನಗರದ ಮಧ್ಯ ಭಾಗದಲ್ಲಿ ಕಟ್ಟಡ ಗಳನ್ನು ತೆರವುಗೊಳಿಸಿ ರಸ್ತೆ ಅಗಲೀಕರಣ ಮಾಡುವ ಅಗತ್ಯವೇನಿದೆ. ಭವಿಷ್ಯದ ದೃಷ್ಟಿಯಿಂದ ರಸ್ತೆಯನ್ನು ಅಗಲೀಕರಣ ಮಾಡುವುದು ಅನಿವಾರ್ಯ ವಾದರೆ, ನಮಗೆ ಸೂಕ್ತ ಪರಿಹಾರ ಒದಗಿಸಿ ಅಗಲೀಕರಣ ಮಾಡಬೇಕು ಎಂಬುದು ಕಟ್ಟಡ ಮಾಲೀಕರ ಮನವಿಯಾಗಿದೆ.
ನಾವು ಯಾರೂ ಅಭಿವೃದ್ಧಿ ವಿರೋಧಿಗಳಲ್ಲ. ಆದರೆ ಜಮೀನುಗಳ ಮಾಲೀಕರಿಗೆ ಮಾಹಿತಿ ಹಾಗೂ ಸೂಕ್ತ ಪರಿಹಾರ ನೀಡದೆ ಕಟ್ಟಡಗಳ ತೆರವು ಕಾರ್ಯಾಚರಣೆಗೆ ಮುಂದಾಗಿರುವುದು ಸರಿಯಲ್ಲ. ಆದ್ದರಿಂದ ನ್ಯಾಯಾಲಯದ ಮೊರೆ ಹೋಗಿದ್ದೇವೆ. ನ್ಯಾಯಾಲಯ ತೆರವು ಕಾರ್ಯಾಚರಣೆಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿರುವುದು ತುಸು ನಿರಾಳಗೊಳಿಸಿದೆ. ಅಂತಿಮವಾಗಿ ನ್ಯಾಯ ದೊರೆಯುವ ವಿಶ್ವಾಸವಿದೆ.
●
ಎನ್. ಎಸ್. ಪಾಂಡುರಂಗ ಗುಪ್ತಾ ,
ಕಟ್ಟಡ ಮಾಲೀಕ