Advertisement
ರಾಜ್ಯದಲ್ಲಿಯೇ ಎರಡನೇ ಅತಿದೊಡ್ಡ ಮಹಾನಗರ, ವಾಣಿಜ್ಯ ನಗರಿ, ಶೈಕ್ಷಣಿಕ-ಸಾಂಸ್ಕೃತಿಕ ತವರು ಎಂದೆಲ್ಲ ಬಣ್ಣಿಸಿಕೊಳ್ಳುವ ಹುಬ್ಬಳ್ಳಿ-ಧಾರವಾಡದಲ್ಲಿ ಇಂದಿಗೂ ಹೇಳಿಕೊಳ್ಳುವಂತಹ ದೊಡ್ಡ ಉದ್ಯಮಗಳು ಬೆರಳೆಣಿಕೆಯಷ್ಟು ಸಹ ಇಲ್ಲ. ಉದ್ಯಮ ಸ್ಥಾಪನೆ ಹಾಗೂ ಬಂಡವಾಳ ಹೂಡಿಕೆಗೆ ಬರುವವರು ಮೊದಲು ನೋಡುವುದೇ ಇಲ್ಲಿನ ಮೂಲಸೌಕರ್ಯ ಹಾಗೂ ಈಗಾಗಲೇ ಇರುವ ಕೈಗಾರಿಕಾ ವಲಯದ ಸ್ಥಿತಿ ಏನಾಗಿದೆ ಎಂಬುದಾಗಿದೆ.
Related Articles
Advertisement
ರಾತ್ರಿ ರಸ್ತೆ ಸುಧಾರಿಸಿದರೆ, ಬೆಳಗ್ಗೆ ಕೆಲವರು ಅದೇ ರಸ್ತೆಯಲ್ಲಿ ಅಗೆತ ಶುರುವಿಟ್ಟುಕೊಂಡಿರುತ್ತಾರೆ. ರಸ್ತೆಗಳ ಅಗೆತ ವಿಚಾರದಲ್ಲಿ ಪರವಾನಗಿ ನೀಡಿದ್ದೆಷ್ಟು, ಅಗೆದಿದ್ದೆಷ್ಟು ಎಂಬುದಕ್ಕೆ ಪಾಲಿಕೆಯಲ್ಲಿ ಸ್ಪಷ್ಟ ಚಿತ್ರಣವೇ ಇಲ್ಲದ ಸ್ಥಿತಿ ಇದೆ. ವಿವಿಧ ಇಲಾಖೆ ಹಾಗೂ ಕಂಪೆನಿಗಳು ರಸ್ತೆ ಅಗೆತಕ್ಕೆ ಸಂದಾಯ ಮಾಡುವ ಶುಲ್ಕಕ್ಕೆ ಪ್ರತ್ಯೇಕ ಖಾತೆಯೇ ಪಾಲಿಕೆಯಲ್ಲಿ ಇತ್ತೀಚೆಗಿನವರೆಗೆ ಇರಲಿಲ್ಲ.
ರಸ್ತೆಗಳ ದುಸ್ಥಿತಿಗೆ ರೋಸಿ ಜನರು ರಾಡಿಯಲ್ಲಿಯೇ ರಸ್ತೆ ಮೇಲೆ ಉರುಳು ಸೇವೆ ಮಾಡಿಯಾಯಿತು, ವಿವಿಧ ಸಸ್ಯಗಳನ್ನು ನಾಟಿ ಮಾಡಿದ್ದಾಯಿತು, ಹೋಮ ಮಾಡಿದ್ದಾಯಿತು. ಇಷ್ಟಾದರೂ ರಸ್ತೆಗಳ ಸುಧಾರಣೆ ಮಾತ್ರ ನಿರೀಕ್ಷಿತ ಮಟ್ಟಿಗೆ ಆಗಿಲ್ಲ ಎಂಬುದು ವಾಸ್ತವ.
ಹೂಡಿಕೆದಾರರ ಹಿಂದೇಟು: ಅವಳಿನಗರದಲ್ಲಿ ಗೋಕುಲ, ತಾರಿಹಾಳ, ಲಕಮನಹಳ್ಳಿ, ಬೇಲೂರು, ಗಾಮನಗಟ್ಟಿ ಹೀಗೆ ವಿವಿಧ ಕೈಗಾರಿಕಾ ವಲಯಗಳು ಇದ್ದು, ಯಾವುದೇ ಕೈಗಾರಿಕಾ ವಲಯಕ್ಕೆ ಹೋದರೂ ಮೂಲಸೌಕರ್ಯಗಳ ಕೊರತೆಯೇ ಕಾಣಸಿಗುತ್ತದೆ.
ಕೈಗಾರಿಕಾ ವಲಯಗಳಲ್ಲಿನ ಉದ್ಯಮಿಗಳು ಇಂದಿಗೂ ಕುಡಿಯುವ ನೀರು, ಚರಂಡಿ ಇನ್ನಿತರ ಮೂಲಸೌಕರ್ಯಗಳ ಕೊರತೆಯಲ್ಲಿಯೇ ಉದ್ಯಮ ನಡೆಸುವಂತಾಗಿದೆ. ಇದ್ದ ಉದ್ಯಮಿಗಳೇ ಬೇರೆಲ್ಲಾದರೂ ಉತ್ತಮ ಅವಕಾಶ ಸಿಕ್ಕರೆ ಹೋಗಿ ಬಿಡೋಣ ಅನ್ನುವ ಸ್ಥಿತಿಯಲ್ಲಿದ್ದಾರೆ. ಇಂತಹದ್ದರಲ್ಲಿ ಹೊರಗಿನಿಂದ ಉದ್ಯಮಿಗಳು ಬರುವುದು ದೂರದ ಮಾತೇ ಆಗಿದೆ.
ಅವಳಿ ನಗರದ ಪ್ರಮುಖ ರಸ್ತೆಗಳೇ ಚಿಂದಿಯಾದ ಸ್ಥಿತಿಯಲ್ಲಿವೆ. ಇನ್ನು ಒಳ ರಸ್ತೆಗಳ ಸ್ಥಿತಿ ಆ ದೇವರಿಗೆ ಪ್ರೀತಿಯಂತಿವೆ. ರಸ್ತೆಗಳ ಸುಧಾರಣೆ ಹಾಗೂ ಮೂಲಸೌಕರ್ಯಗಳ ಇಚ್ಛಾಶಕ್ತಿ ಪ್ರದರ್ಶನ ಮೂಲಕ ಅವಳಿ ನಗರಕ್ಕೆ ದೊಡ್ಡ ಉದ್ಯಮಗಳ ಆಕರ್ಷಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ.
ಯಾರೂ ಮುಂದೆ ಬರೋಲ್ಲವಿದೇಶಿ ಉದ್ಯಮಿಗಳನ್ನು ಇಲ್ಲಿಗೆ ಕರೆತಂದು ಹೂಡಿಕೆಗೆ ಮನವೊಲಿಸಲು ಅವಕಾಶಗಳಿದ್ದರೂ, ಇಲ್ಲಿಗೆ ಅವರನ್ನು ಕರೆ ತಂದರೆ ರಸ್ತೆ ಸ್ಥಿತಿ ನೋಡಿದರೆ ಯಾವ ಹೂಡಿಕೆದಾರರು ಮುಂದೆ ಬರಲಾರರು ಎಂಬುದು ಹಲವರ ಅನಿಸಿಕೆ. ಉದ್ಯಮದಾರರೊಂದಿಗೆ ನಡೆದ ಸಂವಾದದಲ್ಲಿ ಬೆಲ್ಜಿಯಂ ಫ್ಲಾಂಡರ್ ಪ್ರಾಂತೀಯ ಸರಕಾರದ ವ್ಯಾಪಾರ ಮತ್ತು ಹೂಡಿಕೆ ಆಯುಕ್ತ ಜಯಂತ ನಾಡಿಗೇರ ಅವರು ಬೆಲ್ಜಿಯಂನ ಹೂಡಿಕೆದಾರರನ್ನು ಇಲ್ಲಿಗೆ ಕರೆತರಬಹುದು. ಆದರೆ, ಇಲ್ಲಿನ ರಸ್ತೆ, ಕೈಗಾರಿಕಾ ವಲಯಗಳ ಸ್ಥಿತಿ ನೋಡಿಯೂ ಅವರನ್ನು ಕರೆತರುವುದಾದರು ಹೇಗೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಅಮರೇಗೌಡ ಗೋನವಾರ