Advertisement

ಡಾಮರೇ ಇಲ್ಲದ ಕೊಡ್ಲಾಡಿ-ಮಾರ್ಡಿ-ಮೂಡುಬಗೆ ರಸ್ತೆ

09:22 PM Dec 01, 2019 | Sriram |

ಆಜ್ರಿ: ನೇರಳಕಟ್ಟೆಯಿಂದ ಆಜ್ರಿ ಕಡೆಗೆ ಸಂಚರಿಸುವ ಮಾರ್ಗದಲ್ಲಿ ಸಿಗುವ ಕೊಡ್ಲಾಡಿ – ಮಾರ್ಡಿ – ಮೂಡುಬಗೆ ರಸ್ತೆಯಲ್ಲಿ ಡಾಮರೇ ಇಲ್ಲದಂತಾಗಿದ್ದು, ಈ ಭಾಗದ ವಾಹನ ಸವಾರರು ನಿತ್ಯ ಹೈರಾಣಾಗಿದ್ದಾರೆ. ಹಲವು ವರ್ಷಗಳಿಂದ ದುರಸ್ತಿಗೆ ಮನವಿ ಮಾಡಿದರೂ, ಜನಪ್ರತಿನಿಧಿಗಳಿಂದ ಮಾತ್ರ ಯಾವುದೇ ಸ್ಪಂದನೆಯೇ ಸಿಕ್ಕಿಲ್ಲ.

Advertisement

ಆಜ್ರಿ ಗ್ರಾ.ಪಂ. ವ್ಯಾಪ್ತಿಯ ಹೆಮ್ಮಕ್ಕಿ ಯಿಂದ ಸುಮಾರು 500 ಮೀ. ಮುಂದಕ್ಕಿರುವ ಕೊಡ್ಲಾಡಿ ಕ್ರಾಸ್‌ನಿಂದ ಮೂಡುಬಗೆಯವರೆಗೆ ಸುಮಾರು 5 ಕಿ.ಮೀ. ದೂರದ ರಸ್ತೆಯುದ್ದಕ್ಕೂ ಡಾಮರೇ ಇಲ್ಲದಂತಾಗಿದ್ದು, ಅಲ್ಲಲ್ಲಿ ಹೊಂಡ – ಗುಂಡಿಗಳದ್ದೇ ಕಾರುಬಾರು.

800ಕ್ಕೂ ಮಿಕ್ಕಿ ಮನೆಗಳು
ಮಾರ್ಗದಲ್ಲಿ ಬರುವ ಕದಿರು ಹಕ್ಲು, ಕೊಡ್ಲಾಡಿ, ಮಾರ್ಡಿ, ಮೂಡುಬಗೆ ಯವರೆಗೆ ಅಂದಾಜು 700 ರಿಂದ 800 ಮನೆಗಳು ಸಿಗುತ್ತವೆ. ಸಾವಿರಾರು ಮಂದಿ ಇದೇ ರಸ್ತೆಯನ್ನು ಆಶ್ರಯಿಸಿದ್ದಾರೆ. ಪ್ರತಿನಿತ್ಯ ಕುಂದಾಪುರ, ಆಜ್ರಿ ಅಥವಾ ಸಿದ್ದಾಪುರ ಪೇಟೆಗಳಿಗೆ ತೆರಳಲು ಇದೇ ಮಾರ್ಗವನ್ನು ಅವಲಂಬಿಸಿಕೊಂಡಿದ್ದಾರೆ.

8 ವರ್ಷದ ಹಿಂದೆ ಕಾಮಗಾರಿ
ಈ ರಸ್ತೆಗೆ ಡಾಮರೀಕರಣ ಆಗಿದ್ದು ಸರಿ ಸುಮಾರು 8 ವರ್ಷಗಳ ಹಿಂದೆ. ಆಗ ಗ್ರಾಮ ಸಡಕ್‌ ಯೋಜನೆಯಡಿ ಡಾಮರೀಕರಣ ಆಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಯಾವುದೇ ರೀತಿಯ ಕಾಮಗಾರಿಯಾಗಲಿ, ರಸ್ತೆ ವಿಸ್ತರಣೆ ಯಾಗಲಿ ನಡೆದಿಲ್ಲ. ಕನಿಷ್ಠ ಗುಂಡಿಗಳಿಗೆ ತೇಪೆ ಹಾಕುವ ಕೆಲಸವೂ ಆಗಿಲ್ಲ ಎನ್ನುವುದಾಗಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಬಸ್‌ ಸಂಚಾರವೇ ಸ್ಥಗಿತ
ಕುಂದಾಪುರದಿಂದ ನೇರಳಕಟ್ಟೆ ಮಾರ್ಗವಾಗಿ ಮಾರ್ಡಿ ಮೂಲಕ ವಾಗಿ ಸಿದ್ದಾಪುರಕ್ಕೆ ದಿನಕ್ಕೆ 4 ಬಾರಿ ಬಸ್‌ ಸಂಚರಿಸುತ್ತಿತ್ತು. ಈ ರಸ್ತೆಯ ದುಃಸ್ಥಿತಿಯಿಂದಾಗಿ ಕಳೆದ ವರ್ಷದಿಂದ ಈಚೆಗೆ ಈ ಮಾರ್ಗದಲ್ಲಿ ಬಸ್‌ ಸಂಚಾರವೇ ಸ್ಥಗಿತಗೊಂಡಿದೆ. ಇದರಿಂದ ಇಲ್ಲಿನ ಜನ 4-5 ಕಿ.ಮೀ. ದೂರದ ಹೆಮ್ಮಕ್ಕಿ ಕ್ರಾಸ್‌ವರೆಗೆ ಹೋಗಬೇಕು.

Advertisement

ಶಾಲಾ ಬಸ್‌ ಕೂಡ ಈ ವರ್ಷ ಸ್ಥಗಿತಗೊಂಡಿದ್ದು, ಇದರಿಂದ ಮನೆ ಯವರೇ ತಮ್ಮ ವಾಹನ ಅಥವಾ ರಿಕ್ಷಾ ಬಾಡಿಗೆ ಮೂಲಕ ಮಕ್ಕಳನ್ನು ಶಾಲೆಗೆ ಕಲಿಸುತ್ತಿದ್ದಾರೆ.

ಪ್ರತಿದಿನ ಅಪಘಾತ…!
ಈ ಹದಗೆಟ್ಟ ರಸ್ತೆಯ ಅವ್ಯವಸ್ಥೆಯಿಂದಾಗಿ ಪ್ರತಿದಿನ ಒಂದಿಲ್ಲೊಂದು ಅಪಘಾತಗಳು ಸಂಭವಿಸುತ್ತಲೇ ಇದೆ. ಅದರಲ್ಲೂ ಬೈಕ್‌ ಸವಾರರಂತೂ ಪಲ್ಟಿಯಾಗಿ ಬೀಳುವ ಘಟನೆ ಸರ್ವೆ ಸಾಮಾನ್ಯ ಆಗಿದೆ. ದ್ವಿಚಕ್ರ ವಾಹನ ಸವಾರರಂತೂ ಜೀವ ಕೈಯಲ್ಲಿಯೇ ಹಿಡಿದುಕೊಂಡು ಸಂಚರಿಸುವ ದುಃಸ್ಥಿತಿಯಿದೆ. ಅಲ್ಲಲ್ಲಿ ಡಾಮರೆಲ್ಲ ಕಿತ್ತು ಹೋಗಿರುವುದರಿಂದ ರಸ್ತೆಯಿಡೀ ಧೂಳುಮಯವಾಗಿದ್ದು, ಇದರಿಂದ ಪಾದಚಾರಿಗಳು ಕೂಡ ಸಂಕಷ್ಟ ಅನುಭವಿಸುತ್ತಿದ್ದಾರೆ.

ಎಲ್ಲರಿಗೂ ಮನವಿ ಸಲ್ಲಿಸಿದ್ದೇವೆ
ಈ ರಸ್ತೆಯ ದುಃಸ್ಥಿತಿ ಕುರಿತಂತೆ ಗ್ರಾ.ಪಂ., ತಾ.ಪಂ. ಸದಸ್ಯರು, ಜಿ.ಪಂ. ಸದಸ್ಯರು, ಶಾಸಕರೆಲ್ಲರಿಗೂ ಮನವಿ ಸಲ್ಲಿಸಿದ್ದೇವೆ. ಆದರೆ ಕಳೆದ ಹಲವು ವರ್ಷಗಳಿಂದ ಅಭಿವೃದ್ಧಿಯೇ ಆಗದೇ ಹದಗೆಟ್ಟು ಹೋಗಿದೆ. ಪ್ರತಿ ಬಾರಿ ಮನವಿ ಮಾಡಿದಾಗಲೂ ದುರಸ್ತಿ ಮಾಡುತ್ತೇವೆ ಎನ್ನುವ ಭರವಸೆ ಮಾತ್ರ ಕೊಡುತ್ತಾರೆ.
– ಅರುಣ್‌ ಕುಮಾರ್‌ ಶೆಟ್ಟಿ ಕೊಡ್ಲಾಡಿ, ಸ್ಥಳೀಯರು

ಶೀಘ್ರ ಮರು ಡಾಮರು ಕಾಮಗಾರಿ
ಕೆಲವು ದಿನಗಳ ಹಿಂದೆ ಅಲ್ಲಿನ ಜನರ ನಿಯೋಗದೊಂದಿಗೆ ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿಯವರನ್ನು ಭೇಟಿ ಮಾಡಿ, ರಸ್ತೆಯ ಅಭಿವೃದ್ಧಿಗೆ ಮನವಿ ಸಲ್ಲಿಸಿದ್ದೇವೆ. ಅವರು ಕೂಡ ಸ್ಪಂದಿಸಿದ್ದು, ಉಪ ಚುನಾವಣೆ ಮುಗಿದ ಕೂಡಲೇ ಸರಕಾರದಿಂದ 2 ಕೋ.ರೂ. ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ. ಶೀಘ್ರ ಈ ರಸ್ತೆಗೆ ಮರು ಡಾಮರೀಕರಣ ಮಾಡುವ ಸಂಬಂಧ ಎಲ್ಲ ಅಗತ್ಯ ಕ್ರಮಕೈಗೊಳ್ಳಲಾಗುವುದು.
– ರೋಹಿತ್‌ ಕುಮಾರ್‌ ಶೆಟ್ಟಿ, ಜಿ.ಪಂ. ಸದಸ್ಯರು

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next