Advertisement

ಗಣೇಕಲ್‌ ಜಲಾಶಯಕ್ಕೆ ನೀರು ಹರಿಸಲು ಆಗ್ರಹಿಸಿ ರಸ್ತೆತಡೆ

06:41 PM Apr 19, 2021 | Team Udayavani |

ರಾಯಚೂರು: ಬೇಸಿಗೆಯಲ್ಲಿ ಕುಡಿವ ನೀರು ಪೂರೈಸುವ ಉದ್ದೇಶದಿಂದ ಗಣೇಕಲ್‌ ಜಲಾಶಯಕ್ಕೆ ಹರಿಸುತ್ತಿರುವ ನೀರು ದುರ್ಬಳಕೆ ಆಗುತ್ತಿದ್ದು, ಕೂಡಲೇ ಕಡಿವಾಣ ಹಾಕಿ ಜಲಾಶಯ ತುಂಬಿಸುವಂತೆ ಆಗ್ರಹಿಸಿ ನಗರಸಭೆ ಸದಸ್ಯರು ರವಿವಾರ ಸಾತ್‌ ಮೈಲ್‌ ಕ್ರಾಸ್‌ ಹತ್ತಿರ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

Advertisement

ಬೇಸಿಗೆಯಲ್ಲಿ ನಗರ ಪ್ರದೇಶದ ನಿವಾಸಿಗಳಿಗೆ ನೀರಿನ ಸಮಸ್ಯೆ ಆಗದಂತೆ ತಡೆಯುವ ಉದ್ದೇಶದಿಂದ ಟಿಎಲ್‌ಬಿಸಿ ಮೂಲಕ ಗಣೇಕಲ್‌ ಜಲಾಶಯಕ್ಕೆ ನೀರು ಹರಿಸಲಾಗುತ್ತಿದೆ. ಆದರೆ, ನಿಷೇಧಾಜ್ಞೆ ಜಾರಿಗೊಳಿಸಿ ಕಾಲುವೆ ಮೂಲಕ ನೀರು ಹರಿಸುತ್ತಿದ್ದರೂ ಬೇಸಿಗೆ ಬೆಳೆಗಾಗಿ ನೀರು ಬಳಸಿಕೊಳ್ಳುತ್ತಿರುವುದು ಖಂಡನೀಯ. ಬೇಸಿಗೆ ಬೆಳೆ ನೀರು ಬಳಸಿಕೊಳ್ಳಲು ಗೇಜ್‌ ನಿರ್ವಹಣೆ ಸಮರ್ಪಕವಾಗಿ ಮಾಡುತ್ತಿಲ್ಲ. ಈಗಾಗಲೇ 3.5 ಮೀಟರ್‌ ನೀರಿದ್ದು, ಇನ್ನೂ ಒಂದು ಮೀಟರ್‌ ಹರಿಸಬೇಕಿದೆ. ಒಂದು ಕೆರೆ ಭರ್ತಿಯಾಗದಿದ್ದಲ್ಲಿ ಬೇಸಿಗೆ ವೇಳೆ ಕುಡಿಯುವ ನೀರಿಗೆ ಪರಿತಪಿಸಬೇಕಾಗುತ್ತದೆ.

ಈಗಾಗಲೇ ನಗರದಲ್ಲಿ ಎರಡು ದಿನಕ್ಕೊಮ್ಮೆ ನೀರು ಹರಿಸಲಾಗುತ್ತಿದೆ. ಈ ಕುರಿತು ಜಿಲ್ಲಾಧಿಕಾರಿ ಸೇರಿದಂತೆ ನೀರಾವರಿ ನಿಗಮದ ಅಧಿಕಾರಿಗಳಿಗೆ ಸಮಸ್ಯೆ ಕುರಿತು ಮನವರಿಕೆ ಮಾಡಿಕೊಡಲಾಗಿದೆ. ಆದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ದೂರಿದರು. ಸ್ಥಳಕ್ಕೆ ಭೇಟಿ ನೀಡಿದ ನೀರಾವರಿ ನಿಗಮದ ಎಇಇ ವಿದ್ಯಾಸಾಗರ ಪ್ರತಿಭಟನಾಕಾರರ ಜತೆಗೆ ಮಾತನಾಡಿದರು. ಇಂದಿನಿಂದಲೇ ಗಣೇಕಲ್‌ ಜಲಾಶಯಕ್ಕೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು. ಕಾಲುವೆಯಲ್ಲಿ ನೀರು ಹರಿದು ಬರುತ್ತಿದ್ದು, ಗೇಜ್‌ ನಿರ್ವಹಣೆಗೆ ನಿರ್ದೇಶನ ನೀಡಲಾಗುವುದು. ಮೇಲಧಿಕಾರಿಗಳಿಗೆ ಈಗಾಗಲೇ ಸಮಸ್ಯೆ ಕುರಿತು ವಿವರಿಸಲಾಗಿದೆ ಎಂದು ತಿಳಿಸಿದರು.

ನಗರಸಭೆ ಸದಸ್ಯ ಈ.ವಿನಯಕುಮಾರ್‌, ನಗರಸಭೆ ಸದಸ್ಯರಾದ ಜಿಂದಪ್ಪ, ಎನ್‌. ಕೆ.ನಾಗರಾಜ್‌, ತಿಮ್ಮಪ್ಪ ನಾಯಕ, ವೀರೇಶ, ಯು.ದೊಡ್ಡಮಲ್ಲೇಶಪ್ಪ, ರವೀಂದ್ರ ಜಲ್ದಾರ್‌, ಕಡಗೋಳ ಆಂಜನೇಯ, ನರಸಿಂಹಲು ಮಾಡಗಿರಿ ಸೇರಿದಂತೆ ಅನೇಕರು ಇದ್ದರು. ಪ್ರತಿಭಟನೆಯಿಂದಾಗಿ ಕೆಲ ಕಾಲ ವಾಹನ ಸಂಚಾರಕ್ಕೆ ಸಮಸ್ಯೆಯಾಯಿತು.

Advertisement

Udayavani is now on Telegram. Click here to join our channel and stay updated with the latest news.

Next