ವಾಡಿ: ಪೌಷ್ಟಿಕ ಆಹಾರದ ಬಿರುದು ಪಡೆದಿರುವ ಮೀನು ವ್ಯಾಪಾರ ಬೀದಿಗೆ ಬಿದ್ದಿದ್ದು, ಮುಖ್ಯ ರಸ್ತೆಯಲ್ಲೇ ಗ್ರಾಹಕರನ್ನು ಸೆಳೆಯುತ್ತಿರುವ ನಗರದ ಮೀನುಗಾರರು, ಭಾರಿ ವಾಹನ ಸಂಚಾರದ ಅಪಾಯ ಎದುರಿಸುತ್ತಿದ್ದು, ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ಸೌಲಭ್ಯವಿಲ್ಲದಂತಾಗಿದೆ.
ಸುಮಾರು ಐವತ್ತು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಸಿಮೆಂಟ್ ಕಾಶಿ ವಾಡಿ ನಗರದಲ್ಲಿ ಪುರಸಭೆ ಆಡಳಿತ ಕೇಂದ್ರವಿದೆ. ಸುತ್ತಲ 30 ಹಳ್ಳಿಗಳಿಗೆ ವಾಡಿ ನಗರದ ಮಾರುಕಟ್ಟೆಯೇ ಪ್ರಮುಖ ವ್ಯಾಪಾರ ಕೇಂದ್ರವಾಗಿದೆ. ಗುರುವಾರ ಇಲ್ಲಿ ವಾರದ ಸಂತೆ ಸಾಗುತ್ತದೆ. ಕಟ್ಟಡ ಕಾರ್ಮಿಕರು, ಕಾರ್ಖಾನೆ ಕಾರ್ಮಿಕರು ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಮೀನು ಮತ್ತು ಮಟನ್ ವ್ಯಾಪಾರ ಲಾಭದಾಯಕವಾಗಿದೆ.
ಸಮೀಪದ ಕುಂದನೂರು, ಚಾಮನೂರು, ಇಂಗಳಗಿ ಹಾಗೂ ಸನ್ನತಿ ಭೀಮಾ ನದಿಯಿಂದ ತರಹೆವಾರಿ ಮೀನುಗಳು ನಗರದ ಮಾರುಕಟ್ಟೆಗೆ ಲಗ್ಗೆಯಿಡುತ್ತವೆ. ಕುರಿ ಮತ್ತು ಕೋಳಿ ಮಾಂಸದಷ್ಟೇ ಮೀನು ಪ್ರಿಯರೂ ಕೂಡ ಇಲ್ಲಿದ್ದು, ಮೀನುಗಾರರು ಜಾಗಕ್ಕೆ ತಲುಪುವ ಮೊದಲೇ ಹಾಜರಿರುತ್ತಾರೆ. ವರ್ತಕರ ಸುತ್ತಲೂ ಮುಗಿಬಿದ್ದು ಮೀನು ಖರೀದಿಗೆ ಮುಂದಾಗುತ್ತಾರೆ. ಪುರಸಭೆ ಆಡಳಿತ ಈ ಮೀನು ವ್ಯಾಪಾರಿಗಳಿಗೆ ಸೂಕ್ತ ಸ್ಥಳಾವಕಾಶ ಮಾಡಿಕೊಟ್ಟಿಲ್ಲ. ಕಳೆದ ಹಲವು ವರ್ಷಗಳಿಂದ ಬೀದಿಯಲ್ಲೇ ಕುಳಿತು ವ್ಯವಹಾರ ನಡೆಸುತ್ತಿದ್ದರೂ ಯಾರೂ ಇವರ ಗೋಳು ಕೇಳಲು ಮುಂದಾಗಿಲ್ಲ.
ಕಂಬಳಿವಾಲೆ ದರ್ಗಾ ಹತ್ತಿರದ ಮುಖ್ಯ ರಸ್ತೆಯಲ್ಲಿ ಸಾಲಾಗಿ ಕುಳಿತು ಗ್ರಾಹಕರಿಗಾಗಿ ಕಾಯುತ್ತಿರುತ್ತಾರೆ. ಲಾರಿ, ಕಾರು, ಬಸ್, ಟೆಂಪೋ, ಬೈಕ್‌ಗಳ ಸಂಚಾರ ಅಧಿಕವಾಗಿರುವ ಈ ಅಪಾಯಕಾರಿ ರಸ್ತೆಯಲ್ಲಿ ಗ್ರಾಹಕರು ರಸ್ತೆಯನ್ನೇ ಕಬಳಿಸಿ ಅಸುರಕ್ಷತೆ ಎದುರಿಸುತ್ತಿದ್ದಾರೆ. ನಿರ್ದಿಷ್ಟವಾದ ಸ್ಥಳ ಗುರುತಿಸಿ ಕೊಡುವಲ್ಲಿ ಪುರಸಭೆ ಆಡಳಿತ ವಿಫಲವಾಗಿದೆ ಎಂದು ಜನರು ದೂರಿದ್ದಾರೆ.
ಶಾಸಕ ಪ್ರಿಯಾಂಕ್ ಖರ್ಗೆ ಅವರು ನಗರದ ವಿವಿಧ ವಾರ್ಡ್‌ಗಳ ಅಭಿವೃದ್ಧಿಗಾಗಿ ಕೋಟಿಗಟ್ಟಲೇ ಅನುದಾನ ಬಿಡುಗಡೆ ಮಾಡಿಸಿದ್ದಾರೆ. 100 ಕೋಟಿ ರೂ. ವೆಚ್ಚದಲ್ಲಿ ಶೈಕ್ಷಣಿಕ ಸಂಕೀರ್ಣ ನಿರ್ಮಿಸಲಾಗುತ್ತಿದೆ. ವಸತಿ ಯೋಜನೆಗಾಗಿ 84 ಎಕರೆ ಜಮೀನು ಖರೀದಿಸಿ ನಿವೇಶನ ಹಂಚಿಕೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ ಮೀನು ಮಾರುಕಟ್ಟೆ ನಿರ್ಮಿಸಲು ಅನುದಾನ ನೀಡುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಮೀನು ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಪುರಸಭೆ ಅಧಿಕಾರಿಗಳು ಮತ್ತು ಚುನಾಯಿತ ಜನಪ್ರತಿನಿಧಿಗಳು ಇನ್ನಾದರೂ ಮೀನು ಮಾರುಕಟ್ಟೆ ಸೌಲಭ್ಯ ಒದಗಿಸಲು ಮುಂದಾಗಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.