ತಿಪಟೂರು: ಸಾರ್ವಜನಿಕರ ಓಡಾಟದ ರಸ್ತೆಯನ್ನು ಒತ್ತುವರಿ ಮಾಡಿಕೊಂಡು ತೆಂಗು ಮತ್ತು ಅಡಕೆ ಮರಗಳನ್ನು ಬೆಳೆಸಿದ್ದು, ರಸ್ತೆ ನಿರ್ಮಿಸಿ ಕೊಡಬೇಕೆಂದು ಸಾರ್ವಜನಿಕರು ಅರ್ಜಿ ನೀಡಿದ ಹಿನ್ನೆಲೆ, ತಾಲೂಕು ಆಡಳಿತದ ವತಿಯಿಂದ ಮರಗಳನ್ನು ತೆರವುಗೊಳಿಸಿದ ಘಟನೆ ತಾಲೂಕಿನ ಹೊನ್ನವಳ್ಳಿ ಹೋಬಳಿ ಹೂಲಿಹಳ್ಳಿ ಗ್ರಾಮದಲ್ಲಿ ನಡೆಯಿತು.
ಸರ್ವೆ ನಂ.95, 96,97,90ಮತ್ತು 235ರಲ್ಲಿಜಮೀನನ್ನು ಒತ್ತುವರಿ ಮಾಡಿಕೊಂಡು ತೆಂಗು ಮತ್ತು ಅಡಕೆ ಮರಗಳನ್ನು ಬೆಳೆಸಿದ್ದರು. ಸಾರ್ವಜನಿಕರು ಅರ್ಜಿ ನೀಡಿದ್ದ ಹಿನ್ನೆಲೆ ಸಂಬಂಧಪಟ್ಟ ಅಧಿಕಾರಿಗಳು ಒತ್ತುವರಿ ಮಾಡಲು ಹೋದಾಗ ಒತ್ತುವರಿದಾರರು ಪ್ರತಿಭಟನೆ ನಡೆಸಿದ ಕಾರಣ ಪೊಲೀಸರ ಸಹಾಯದಿಂದ ಒತ್ತುವರಿ ಮಾಡಿ ಮರಗಳನ್ನು ತೆರವುಗೊಳಿಸಲಾಯಿತು.
ನಮ್ಮ ಹಿರಿಯರು ಹಲವು ವರ್ಷಗಳಿಂದ ಭೂಮಿಯನ್ನು ಉಳುಮೆ ಮಾಡಿಕೊಂಡು ಬರುತ್ತಿದ್ದಾರೆ. ಈ ರಸ್ತೆಯ ಬದಲಿಗೆ ನಮ್ಮ ಜಮೀನಿನಲ್ಲಿಯೇ ಬೇರೆ ದಾರಿ ಕಲ್ಪಿಸಿಕೊಡುತ್ತೇವೆಂದು ಹೇಳಿದರೂ, ಫಸಲಿಗೆ ಬಂದ ಅಡಕೆ, ತೆಂಗಿನ ಮರಗಳನ್ನು ಬುಡಸಮೇತ ಕಿತ್ತುಹಾಕಲಾಗಿದೆ.
ಇದನ್ನೂ ಓದಿ:ಸುಪ್ರೀಂ ಕೋರ್ಟ್ ನಲ್ಲಿನ ಬಾಕಿ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಆದ್ಯತೆ: ಸಿಎಂ ಬೊಮ್ಮಾಯಿ
ಇಲ್ಲಿನ ಪ್ರಭಾವಿ ವ್ಯಕ್ತಿಯೊಬ್ಬರ ತೆಂಗಿನ ಚಿಪ್ಪು ಸುಡುವ ಘಟಕವಿದ್ದು, ಅವರಿಗೆ ರಸ್ತೆ ಕಲ್ಪಿಸಲು ಬೆಳೆದು ನಿಂತಿದ್ದ ಮರಗಳನ್ನು ಕಡಿಯುತ್ತಿರುವುದು ನಮಗೆ ತುಂಬಾ ನೋವಾಗುತ್ತಿದೆ ಎಂದು ಒತ್ತುವರಿದಾರರು ತಮ್ಮ ಅಳಲನ್ನು ತೋಡಿಕೊಂಡರು. ತೆಂಗಿನ ಚಿಪ್ಪು ಘಟಕದಿಂದ ರೈತರಬೆಳೆಗಳು ಹಾಳಾಗುತ್ತಿವೆಂದು ದೂರು ನೀಡಿದಾಗ ಅಧಿಕಾರಿಗಳು ಯಾವುದೇ ಕ್ರಮವಹಿಸಲಿಲ್ಲ. ಸಾಮಾನ್ಯ ರೈತರಿಗೊಂದು ನ್ಯಾಯ, ಬಂಡವಾಳ ಶಾಹಿಗಳಿಗೊಂದು ನ್ಯಾಯವೆ ಎಂದು ಮರಗಳನ್ನು ಕಳೆದುಕೊಂಡವರು ತಮ್ಮ ನೋವನ್ನು ಹೊರಹಾಕಿದರು.