Advertisement

ಚಲಿಸುವ ವಾಹನಗಳಿಗೆ ಬ್ರೇಕ್‌ ಹಾಕುತ್ತಿದೆ ರಸ್ತೆ ಬದಿ ಪಾರ್ಕಿಂಗ್‌

09:09 AM Apr 28, 2019 | Lakshmi GovindaRaju |

ನಗರದ ರಸ್ತೆಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚಿರುವುದು ಒಂದೆಡೆಯಾದರೆ, ರಸ್ತೆ ಬದಿಯಲ್ಲೇ ವಾಹನಗಳ ಪಾರ್ಕಿಂಗ್‌ಗೆ ಅವಕಾಶ ನೀಡಿರುವುದು ಸಂಚಾರ ದಟ್ಟಣೆಗೆ ಪ್ರಮುಖ ಕಾರಣವಾಗಿದೆ. ಒಂದು ಅಂದಾಜು ಪ್ರಕಾರ ರಸ್ತೆ ಬದಿ ನಿಲ್ಲುವ ಒಂದು ಕಾರಿನ ಮೌಲ್ಯಕ್ಕಿಂತ, ಅದು ನಿಂತ ಭೂಮಿಯ ಮೌಲ್ಯ ಹೆಚ್ಚಾಗಿರುತ್ತದೆ. ಲಂಡನ್‌ನಲ್ಲಿ ವಾಹನ ನಿಲುಗಡೆ ಶುಲ್ಕದಿಂದಲೇ ಅಲ್ಲಿನ ಸರ್ಕಾರಕ್ಕೆ ಅತಿ ಹೆಚ್ಚು ಆದಾಯ ಬರುತ್ತಿದೆ. ಹೀಗಾಗಿ ನಮ್ಮಲ್ಲೂ ರಸ್ತೆಗಳಲ್ಲಿ ನಿಲ್ಲಿಸುವ ವಾಹನಗಳಿಗೆ ಭಾರೀ ಪಾರ್ಕಿಂಗ್‌ ಶುಲ್ಕ ವಿಧಿಸಬೇಕು ಎನ್ನುತ್ತಾರೆ ತಜ್ಞರು.

Advertisement

ಬೆಂಗಳೂರು: ನಗರದಲ್ಲಿ ಪ್ರಸ್ತುತ 80.45 ಲಕ್ಷ ವಾಹನಗಳಿವೆ. ಅದರಲ್ಲಿ 6.39 ಲಕ್ಷ ವಾಹನಗಳು 2018-19ರಲ್ಲಿ ಸೇರ್ಪಡೆಯಾಗಿದ್ದು, ಸರಾಸರಿ ಪ್ರತಿ ದಿನ 1,777 ವಾಹನಗಳು ಹೊಸದಾಗಿ ರಸ್ತೆಗಿಳಿಯುತ್ತವೆ. ಇದರಲ್ಲಿ ನಿತ್ಯ 300 ಕಾರುಗಳ ನೋಂದಣಿ ಆಗುತ್ತದೆ. ಕಳೆದ ಹತ್ತು ವರ್ಷಗಳಲ್ಲಿ ಇಲ್ಲಿನ ವಾಹನಗಳ ಸಂಖ್ಯೆ ಒಂದೂವರೆಪಟ್ಟು ಏರಿಕೆ ಆಗಿದೆ.

ವಿಪರೀತವಾಗಿ ಹೆಚ್ಚುತ್ತಿರುವ ಈ ವಾಹನಗಳು ನಿಲುಗಡೆಗೆ ನಗರದ ಅತ್ಯಮೂಲ್ಯ ಜಾಗವನ್ನು ಆಕ್ರಮಿಸಿಕೊಳ್ಳುತ್ತಿದ್ದು, ಇದು ಪರೋಕ್ಷವಾಗಿ ಭೂಮಿಯ ಬಿಕ್ಕಟ್ಟು ಸೃಷ್ಟಿಸುತ್ತಿದೆ. ಅತಿ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಇಂಚು ಭೂಮಿಗೂ ಬಂಗಾರದ ಬೆಲೆ ಇದೆ. ಆದರೆ, ಈ ಬೆಲೆಬಾಳುವ ಜಾಗ ವಾಹನಗಳ ಪಾಲಾಗುತ್ತಿದೆ. ಅಷ್ಟೇ ಅಲ್ಲ, ಜಾಗದ ಕೊರತೆಯಿಂದ ಸಂಚಾರದಟ್ಟಣೆ ಕೂಡ ಉಂಟಾಗುತ್ತಿದೆ.

ವಿಚಿತ್ರವೆಂದರೆ, ಈ ವಾಹನಗಳಿಗೆ ನಮ್ಮಲ್ಲಿ ಸಾಕಷ್ಟು ಸಬ್ಸಿಡಿ ನೀಡಲಾಗುತ್ತದೆ. ಅವುಗಳ ಓಡಾಟಕ್ಕೆ, ಫ‌ುಟ್‌ಪಾತ್‌ನಲ್ಲಿ ಬದುಕು ಕಟ್ಟಿಕೊಂಡಿರುವವರನ್ನು ಜೆಸಿಬಿ ಮೂಲಕ ಒಕ್ಕಲೆಬ್ಬಿಸಲಾಗುತ್ತದೆ. ಪ್ರತಿಯಾಗಿ ಪರಿಹಾರವನ್ನೂ ನೀಡುವುದಿಲ್ಲ.

ಹೀಗೆ ತೆರವುಗೊಳಿಸಿ, ಕೋಟ್ಯಂತರ ರೂ. ಸುರಿದು ನಿರ್ಮಿಸಿರುವ ರಸ್ತೆಯನ್ನು ಒತ್ತುವರಿ ಮಾಡಿಕೊಂಡ ವಾಹನಗಳ ತೆರವು ಬಗ್ಗೆ ಯಾರೊಬ್ಬರೂ ಮಾತನಾಡುವುದಿಲ್ಲ. ವಾಣಿಜ್ಯ ಮತ್ತು ವಸತಿ ಪ್ರದೇಶಗಳು, ಶಿಕ್ಷಣ ಸಂಸ್ಥೆಗಳು, ಹೊರವರ್ತುಲ ರಸ್ತೆಗಳ ಉದ್ದಕ್ಕೂ ಇವುಗಳದ್ದೇ ಕಾರುಬಾರು. ರಿಯಲ್‌ ಎಸ್ಟೇಟ್‌ ಉದ್ಯಮದ ಲೆಕ್ಕದಲ್ಲಿ ಇದನ್ನು ಪರಿಗಣಿಸಿದರೆ, ನೂರಾರು ಎಕರೆ ಜಾಗ ಹೀಗೆ ಅನಧಿಕೃತವಾಗಿ ಒತ್ತುವರಿ ಆಗಿರುವುದನ್ನು ಕಾಣಬಹುದು.

Advertisement

ಒಂದು ಕಿ.ಮೀ. ರಸ್ತೆ ಅಭಿವೃದ್ಧಿಗೆ ಸುಮಾರು 5ರಿಂದ ಆರು ಕೋಟಿ ರೂ. ಖರ್ಚು ಮಾಡಲಾಗುತ್ತದೆ. ಇದರಿಂದ ಪ್ರತಿ ಚದರಡಿಗೆ ರಸ್ತೆಗಳು ನೂರಾರು ರೂ. ಬೆಲೆ ಬಾಳುತ್ತವೆ. ಹೆಚ್ಚು-ಕಡಿಮೆ 75ರಿಂದ 100 ಚದರಡಿ ಜಾಗವನ್ನು ಆಕ್ರಮಿಸಿಕೊಳ್ಳುತ್ತದೆ. ಒಂದು ಅಂದಾಜು ಪ್ರಕಾರ ಆ ಕಾರಿನ ಮೌಲ್ಯಕ್ಕಿಂತ ಹೆಚ್ಚು ಮೌಲ್ಯ ಅದು ಆಕ್ರಮಿಸಿಕೊಂಡ ಜಾಗದ್ದಾಗಿರುತ್ತದೆ. ಅದೂ ಸಾರ್ವಜನಿಕ ಆಸ್ತಿ. ಆದ್ದರಿಂದ ರಸ್ತೆಗಳಲ್ಲಿ ನಿಲುಗಡೆಗೆ ಭಾರಿ ಶುಲ್ಕ ವಿಧಿಸಬೇಕು ಎಂದು ವಾಸ್ತುಶಿಲ್ಪಿ ಹಾಗೂ ಸಿಟಿಜನ್‌ ಫಾರ್‌ ಬೆಂಗಳೂರು ಸಂಘಟನೆಯ ನರೇಶ್‌ ನರಸಿಂಹನ್‌ ತಿಳಿಸುತ್ತಾರೆ.

ಬೈಸಿಕಲ್‌ ಬಳಕೆದಾರರು ಮತ್ತು ಪಾದಚಾರಿಗಳೇ ಈ ವಾಹನಗಳ ಅಪಘಾತಗಳಲ್ಲಿ ಹೆಚ್ಚು ಬಲಿ ಆಗುತ್ತಿದ್ದಾರೆ. ಆದರೂ, ನಗರದ ಬಹುತೇಕ ಸೌಲಭ್ಯಗಳು ಈ ವಾಹನಗಳ ಸವಾರರಿಗೇ ದೊರೆಯುತ್ತಿವೆ. ಅವರೆಲ್ಲಾ ಬಹುತೇಕ ಮತದಾನದಿಂದ ದೂರ ಉಳಿದವರ ಪಾಲಾಗಿದ್ದು, ಸ್ಥಳೀಯ ರಾಜಕೀಯದಲ್ಲಿ ಅವರ ಭಾಗವಹಿಸುವಿಕೆಯೂ ಇಲ್ಲ. ಆದಾಗ್ಯೂ ಅವರೇ ನಗರದ ಜೀವನವನ್ನು ನಿಯಂತ್ರಿಸುತ್ತಿದ್ದಾರೆ ಎಂಬುದು ಪಾದಚಾರಿಗಳ ಆರೋಪ.

ಪಾರ್ಕಿಂಗ್‌ ಕಡ್ಡಾಯವಲ್ಲ; ಸೌಲಭ್ಯ: ರಸ್ತೆ ಬದಿ ನಿಲುಗಡೆ ಮಾಡಿದ ವಾಹನಗಳ ವಿರುದ್ಧ ಕಾರ್ಯಾಚರಣೆ ನಿರಂತರವಾಗಿರುತ್ತದೆ. “ಟೋ’ ಮೂಲಕ ತೆರವುಗೊಳಿಸುವ ಕೆಲಸ ನಿತ್ಯ ನಡೆಯುತ್ತದೆ. ಆದರೂ, ವಾಹನಗಳ ನಿಲುಗಡೆ ತಪ್ಪುವುದಿಲ್ಲ. ಟೋಯಿಂಗ್‌ ಮಾಡಿದಾಗ, ವಾಹನ ಮಾಲಿಕರು ಹೇಳುವುದು, “ನೋ ಪಾರ್ಕಿಂಗ್‌ ಫ‌ಲಕ ಇರಲಿಲ್ಲ’ ಎನ್ನುತ್ತಾರೆ.

ಆದರೆ, ವಾಹನಗಳಿಗೆ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸುವುದು ಕಡ್ಡಾಯ ಮತ್ತು ಕರ್ತವ್ಯ ಎಂದೇನಲ್ಲ. ಅದೊಂದು ಸೌಲಭ್ಯವಷ್ಟೇ. “ವಾಹನಗಳ ನಿಲುಗಡೆಗೆ ನಿರ್ದಿಷ್ಟ ಜಾಗಗಳನ್ನು ಗುರುತಿಸಬೇಕು. ಬಹುಮಹಡಿ ಕಾರು ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಬೇಕು. ಹಾಗೂ ಆ ಪಾರ್ಕಿಂಗ್‌ ತಾಣಗಳು ಸಂಪೂರ್ಣವಾಗಿ ಬಳಕೆ ಆಗುವಂತೆ ಮಾಡಬೇಕು’ ಎಂದು ಹೆಚ್ಚುವರಿ ಪೊಲೀಸ್‌ ಆಯುಕ್ತ (ಸಂಚಾರ) ಪಿ. ಹರಿಶೇಖರನ್‌ ತಿಳಿಸುತ್ತಾರೆ.

ಜಾಗದ ಕೊರತೆ ಹಿನ್ನೆಲೆಯಲ್ಲಿ ಬಹುಮಹಡಿ ಕಟ್ಟಡಗಳ ವಾಹನ ನಿಲುಗಡೆ ತಾಣಗಳನ್ನು ಪರಿಚಯಿಸಲಾಗಿದೆ. ನಗರದಲ್ಲಿ ಪಾಲಿಕೆ ಒಡೆತನದಲ್ಲಿರುವ ಎರಡು ಹಾಗೂ ಬಿಎಂಟಿಸಿಯ ಒಂಬತ್ತು ಟಿಟಿಎಂಸಿಗಳು ಸೇರಿದಂತೆ 11 ಪಾರ್ಕಿಂಗ್‌ ತಾಣಗಳಿದ್ದು, ಅವುಗಳು ಏಕಕಾಲಕ್ಕೆ 1,200 ಕಾರುಗಳು ಮತ್ತು 3,500 ದ್ವಿಚಕ್ರ ವಾಹನಗಳ ನಿಲುಗಡೆ ಸಾಮರ್ಥ್ಯ ಹೊಂದಿವೆ. ಆದರೆ, ಆ ಪೈಕಿ ಶೇ. 20ರಿಂದ 30ರಷ್ಟು ಜಾಗ ಮಾತ್ರ ಬಳಕೆ ಆಗುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸುತ್ತಾರೆ.

50 ಸಾವಿರ ಮೌಲ್ಯದ ಜಾಗ ಉಚಿತ!: ಒಂದು ಉತ್ತಮ ರಸ್ತೆ (15 ಮೀಟರ್‌ ಅಗಲ)ಯ ಪ್ರತಿ ಕಿ.ಮೀ.ಗೆ ಅಭಿವೃದ್ಧಿ ವೆಚ್ಚ 5 ಕೋಟಿ ರೂ. ಅಂದರೆ, ಪ್ರತಿ ಚದರಡಿಗೆ 300 ರೂ. ಆಗುತ್ತದೆ. ಒಂದು ಕಾರು ನಿಲುಗಡೆಗೆ 150 ಚದರಡಿ ಜಾಗ ಬೇಕಾಗುತ್ತದೆ. ಇದರರ್ಥ ರಸ್ತೆ ಬದಿಯಲ್ಲಿ ಕಾರು ನಿಲುಗಡೆಯಾದ ಜಾಗದ ಬೆಲೆ 50 ಸಾವಿರ ರೂ. ಅದನ್ನು ಸಂಪೂರ್ಣ ಉಚಿತವಾಗಿ ನೀಡಲಾಗುತ್ತಿದೆ ಎಂದು ನರೇಶ್‌ ನರಸಿಂಹನ್‌ ತಿಳಿಸುತ್ತಾರೆ.

ಇನ್ನು ಸಾಮಾನ್ಯವಾಗಿ ವಸತಿ ಪ್ರದೇಶದಲ್ಲಿನ 600 ಚದರಡಿಯ ಒಂದು ಬಿಎಚ್‌ಕೆ ಮನೆಯ ಬಾಡಿಗೆ ಲೆಕ್ಕಹಾಕಿದರೆ, ಚದರಡಿಗೆ ಒಂದು ತಿಂಗಳಿಗೆ 1,300 ರೂ. ಆಗುತ್ತದೆ. ಅದೇ ರೀತಿ, ಒಂದು ಕಾರು ನಿಲುಗಡೆಗೆ ಒಂದು ತಿಂಗಳಿಗೆ ಪಾರ್ಕಿಂಗ್‌ ಶುಲ್ಕ 1,500ರಿಂದ 1,800 ರೂ. ಇದೆ (ಮೆಟ್ರೋ ನಿಲ್ದಾಣಗಳಲ್ಲಿನ ಶುಲ್ಕದ ಅನ್ವಯ).

ದಿನದಲ್ಲಿ ಒಂದೇ ತಾಸು ಓಡಾಟ!: ನಗರದಲ್ಲಿರುವ ಬಹುತೇಕ ವಾಹನಗಳ ಚಾಲನೆಗಿಂತ ನಿಲುಗಡೆ ಸಮಯವೇ ಹೆಚ್ಚಿದ್ದು, ದಿನದ 24 ಗಂಟೆಗಳಲ್ಲಿ ಶೇ. 90ರಷ್ಟು ಸಮಯ ಆ ವಾಹನಗಳು ನಿಲುಗಡೆ ಆಗಿರುತ್ತವೆ.

ದೆಹಲಿಯ ಕೇಂದ್ರ ರಸ್ತೆ ಸಂಶೋಧನಾ ಸಂಸ್ಥೆ (ಸೆಂಟ್ರಲ್‌ ರೋಡ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌) ಈ ಹಿಂದೆ ನಡೆಸಿದ ಅಧ್ಯಯನವೊಂದರ ಪ್ರಕಾರ ವರ್ಷದಲ್ಲಿ ಸರಾಸರಿ 8,760 ತಾಸುಗಳು ಬರುತ್ತವೆ. ಅದರಲ್ಲಿ ಕಾರುಗಳ ಚಾಲನೆ ಅವಧಿ ಕೇವಲ 400 ಗಂಟೆಗಳು. ಅಂದರೆ ಸರಾಸರಿ ದಿನಕ್ಕೆ ಒಂದು ತಾಸು ಮಾತ್ರ ಕಾರುಗಳು ಚಾಲನೆ ಮಾಡುತ್ತವೆ. ಆ ಒಂದೇ ತಾಸಿನಲ್ಲಿ ಸಾಕಷ್ಟು ಸಂಚಾರದಟ್ಟಣೆಗೆ ಕಾರಣವಾಗುತ್ತಿವೆ!

ಬರಲಿದೆ ಪಾರ್ಕಿಂಗ್‌ ನೀತಿ: ಈ ಮಧ್ಯೆ ಎಲ್ಲೆಂದರಲ್ಲಿ ವಾಹನ ನಿಲುಗಡೆ ಮತ್ತು ಅದರಿಂದ ಉಂಟಾಗುತ್ತಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬಿಬಿಎಂಪಿಯು ಪ್ರತ್ಯೇಕ ಪಾರ್ಕಿಂಗ್‌ ನೀತಿ ಜಾರಿಗೊಳಿಸಲು ನಿರ್ಧರಿಸಿದೆ.

ಅದರಂತೆ ಮನೆಯಿಂದ ಹೊರಗೆ ಎಲ್ಲಿಯೇ ವಾಹನಗಳ ನಿಲುಗಡೆ ಮಾಡಬೇಕಾದರೆ, ಅದಕ್ಕೆ ಇನ್ಮುಂದೆ ಶುಲ್ಕ ನಿಗದಿಪಡಿಸಲಾಗುತ್ತದೆ. ಮೂಲಗಳ ಪ್ರಕಾರ ಮೂರು ಹಂತಗಳಲ್ಲಿ ಶುಲ್ಕ ವಿಧಿಸಲು ಉದ್ದೇಶಿಸಲಾಗಿದೆ. ಈ ಸಂಬಂಧ ಟೆಂಡರ್‌ ಪ್ರಕ್ರಿಯೆ ಜಾರಿಯಲ್ಲಿದೆ ಎನ್ನಲಾಗಿದೆ.

ಆನ್‌ ಸ್ಟ್ರೀಟ್‌-ಆಫ್ ಸ್ಟ್ರೀಟ್‌ ಪಾರ್ಕಿಂಗ್‌: ಪಾರ್ಕಿಂಗ್‌ನಲ್ಲಿ ಎರಡು ಪ್ರಕಾರಗಳಿದ್ದು, ಒಂದು ಆನ್‌ ಸ್ಟ್ರೀಟ್‌ ಮತ್ತೂಂದು ಆಫ್ ಸ್ಟ್ರೀಟ್‌ ಪಾರ್ಕಿಂಗ್‌. ಈ ಪೈಕಿ ಆನ್‌ ಸ್ಟ್ರೀಟ್‌ನಲ್ಲಿ ವಾಹನ ನಿಲುಗಡೆಗಾಗಿಯೇ ರಸ್ತೆಯ ಒಂದು ಬದಿಯನ್ನು ಮೀಸಲಿರಿಸಲಾಗುತ್ತದೆ. ಇದರಿಂದ ರಸ್ತೆಯ ಗಾತ್ರ ಕುಗ್ಗುತ್ತದೆ. ಇದು ಸಂಚಾರದಟ್ಟಣೆಗೆ ಕಾರಣವಾಗುತ್ತದೆ.

ಅದೇ ರೀತಿ, ಆಫ್ಸ್ಟ್ರೀಟ್‌ ಪಾರ್ಕಿಂಗ್‌ನಲ್ಲಿ ವಾಹನಗಳ ನಿಲುಗಡೆಗೆ ಪ್ರತ್ಯೇಕ ತಾಣವನ್ನು ನಿರ್ಮಿಸುವುದು (ಉದಾ: ಬಹುಮಹಡಿ ಕಾರು ಪಾರ್ಕಿಂಗ್‌ ಇತ್ಯಾದಿ). ಈ ಸೌಲಭ್ಯ ಕಲ್ಪಿಸುವ ಮೂಲಕ ಖಾಸಗಿ ವಾಹನಗಳ ಬಳಕೆಗೆ ಪರೋಕ್ಷವಾಗಿ ಉತ್ತೇಜನ ನೀಡಲಾಗುತ್ತದೆ. ವಾಹನ ನಿಲುಗಡೆ ವ್ಯವಸ್ಥೆ ಇದೆ ಎಂಬ ಕಾರಣಕ್ಕಾಗಿ ಜನ ಸ್ವಂತ ವಾಹನಗಳೊಂದಿಗೆ ರಸ್ತೆಗಿಳಿಯುತ್ತಾರೆ.

ಹಾಗಾಗಿ, ವಾಹನಗಳ ನಿಲುಗಡೆಯನ್ನು ನಾವು ಬೇಡಿಕೆ ಆಧಾರಿತ ಸೌಲಭ್ಯವನ್ನಾಗಿ ಪರಿಗಣಿಸಬೇಕು. ಅಗತ್ಯ ಮತ್ತು ಅನಿವಾರ್ಯತೆಗೆ ತಕ್ಕಂತೆ ಈ ವ್ಯವಸ್ಥೆ ಕಲ್ಪಿಸಬೇಕು. ಉದಾಹರಣೆಗೆ ಮೆಟ್ರೋ ನಿಲ್ದಾಣದಿಂದ ಮನೆ ದೂರ ಇರುತ್ತದೆ ಅಥವಾ ಹೊರವರ್ತುಲ ರಸ್ತೆಯಿಂದ ಹತ್ತಿರದ ನಿಲ್ದಾಣಕ್ಕೆ ಬಂದು-ಹೋಗುವವರಿಗೆ ಇದನ್ನು ಕಲ್ಪಿಸಬೇಕು ಎಂದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯ ಮೂಲಸೌಕರ್ಯ, ಸುಸ್ಥಿರ ಸಾರಿಗೆ ಮತ್ತು ನಗರ ಯೋಜನೆ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ. ಆಶಿಶ್‌ ವರ್ಮ ಮಾಹಿತಿ ತಿಳಿಸುತ್ತಾರೆ.

* ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next