Advertisement

ರಸ್ತೆ ಬದಿ ಪಾರ್ಕಿಂಗ್‌: ಮುಂದುವರಿದ ಗೊಂದಲ

12:06 PM Sep 02, 2018 | |

ಪುತ್ತೂರು: ನಗರದ ಮುಖ್ಯ ರಸ್ತೆಯ ಗಾಂಧಿ ಕಟ್ಟೆಯ ಬಳಿಯಿಂದ ಬಸ್‌ ನಿಲ್ದಾಣದ ತನಕದ ಪಾರ್ಕಿಂಗ್‌ಗೆ ಸಂಬಂಧಪಟ್ಟಂತೆ ಪೊಲೀಸ್‌ ಇಲಾಖೆ ಹಾಗೂ ಆಟೋ ರಿಕ್ಷಾ ಚಾಲಕರ ಮಧ್ಯೆ ಶನಿವಾರವೂ ಗೊಂದಲ ಮುಂದುವರಿಯಿತು. ಶನಿವಾರ ಬೆಳಗ್ಗಿಯಿಂದ ಮಧ್ಯಾಹ್ನದ ತನಕ ಸಂಚಾರ ಪೊಲೀಸರು ಹಾಗೂ ಅಟೋ ರಿಕ್ಷಾ ಚಾಲಕರ ಮಧ್ಯೆ ಮಾತುಕತೆ ನಡೆಯಿತು. ಶಾಸಕರ ಪರವಾಗಿ ಮುಖಂಡರಾದ ಸಂತೋಷ್‌ ರೈ ಕೈಕಾರ ಹಾಗೂ ದಿನೇಶ್‌ ಜೈನ್‌ ರಿಕ್ಷಾ ಚಾಲಕರು ಹಾಗೂ ಪೊಲೀಸರ ಮಧ್ಯೆ ಸಮನ್ವಯಕ್ಕೆ ಪ್ರಯತ್ನ ನಡೆಸಿದರು.

Advertisement

ಪಾರ್ಕಿಂಗ್‌ನ ಮಧ್ಯ ಭಾಗದಲ್ಲಿ ಎ.ಎಂ. ಕಾಂಪ್ಲೆಕ್ಸ್‌ ಮುಂಭಾಗದಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲು ಅನುವು ಮಾಡಿಕೊಡುವಂತೆ ಸಂಚಾರ ಠಾಣೆ ಪಿಎಸ್‌ಐ ನಾರಾಯಣ ರೈ ರಿಕ್ಷಾ ಚಾಲಕರ ಸಂಘದ ಮುಖಂಡರಲ್ಲಿ ಮನವಿ ಮಾಡಿದರು. ಅಷ್ಟು ವ್ಯಾಪ್ತಿಯಲ್ಲಿ ಮತ್ತು ತಡೆಬೇಲಿಯ ಒಳಭಾಗದಲ್ಲಿ ದ್ವಿಚಕ್ರ ಪಾರ್ಕಿಂಗ್‌ ಮಾಡುವುದಕ್ಕೆ ರಿಕ್ಷಾ ಚಾಲಕರು ಆಕ್ಷೇಪ ವ್ಯಕ್ತಪಡಿಸಿದರು. ಕಟ್ಟಡಕ್ಕೆ ಹೋಗುವ ದಾರಿ ಮತ್ತು ಮಧ್ಯ ಭಾಗದಲ್ಲಿ 10-15 ದ್ವಿಚಕ್ರಗಳನ್ನು ನಿಲ್ಲಿಸಲು ಅವಕಾಶ ನೀಡಲು ರಿಕ್ಷಾ ಚಾಲಕರು ಸಮ್ಮತಿಸಿದರು. ಆದರೆ ಅಂತಿಮವಾಗಿ ಪೊಲೀಸರು ಹಾಗೂ ರಿಕ್ಷಾ ಚಾಲಕರ ಮಧ್ಯೆ ಹೊಂದಾಣಿಕೆ ಸಾಧ್ಯವಾಗದೆ ಪೊಲೀಸರು ತೆರಳಿದರು.

ಮಂಗಳವಾರ ಚರ್ಚೆ
ಸೆ. 3ರಂದು ನಗರ ಸಭೆ ಚುನಾವಣೆ ಫಲಿತಾಂಶವೂ ಬರುವುದರಿಂದ ಮತ್ತು ಶಾಸಕ ಸಂಜೀವ ಮಠಂದೂರು ಹಾಗೂ ಸಂಸದ ನಳಿನ್‌ ಕುಮಾರ್‌ ಕಟೀಲು ಸೆ. 4ರಂದು ಪಾರ್ಕಿಂಗ್‌ ಸಮಸ್ಯೆಯ ಕುರಿತು ಮಾತುಕತೆ ನಡೆಸುವ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಸಂಧಾನಕಾರರು ಹಾಗೂ ರಿಕ್ಷಾ ಚಾಲಕರು ಒತ್ತಾಯಿಸಿದರು.

ಹಿಂದೂ ಸಂಘಟನೆಯ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ ಸ್ಥಳಕ್ಕೆ ಭೇಟಿ ನೀಡಿ ರಿಕ್ಷಾ ಚಾಲಕರ ಜತೆ ಚರ್ಚೆ ನಡೆಸಿದರು. ವಾಣಿಜ್ಯ ಕಟ್ಟಡದ ವರ್ತಕರ ಜತೆಯೂ ಪೊಲೀಸರು ಮಾತುಕತೆ ನಡೆಸಿದರು. ಮಧ್ಯಾಹ್ನ ಪೊಲೀಸರು ಸೂಚಿಸಿದ ಸ್ಥಳಗಳಲ್ಲೂ ದ್ವಿಚಕ್ರ ವಾಹನಗಳನ್ನು ಪಾರ್ಕಿಂಗ್‌ ಮಾಡಿರುವುದು ಕಂಡುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next