Advertisement

ಕುಂದಗೋಳದಲ್ಲಿ ಭರ್ಜರಿ ರೋಡ್‌ ಶೋ, ಬಿರುಸಿನ ಪ್ರಚಾರ

11:30 PM May 08, 2019 | Lakshmi GovindaRaj |

ಉಪ ಚುನಾವಣೆ ನಡೆಯಲಿರುವ ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ಕಾವು ಜೋರಾಗಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಗಳ ಪರ ನಾಯಕರು ಮತಯಾಚನೆಯಲ್ಲಿ ತೊಡಗಿದ್ದಾರೆ. ಅಂಚಟಗೇರಿ ಹಾಗೂ ಮಾವನೂರು ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಎಸ್‌.ಐ.ಚಿಕ್ಕನಗೌಡರ ಪರ ಮಾಜಿ ಸಚಿವ ಶ್ರೀರಾಮುಲು ಭರ್ಜರಿ ರೋಡ್‌ ಶೋ ನಡೆಸಿದರೆ, ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಕುಸುಮಾ ಶಿವಳ್ಳಿ ಪರ ಸಚಿವ ಸತೀಶ ಜಾರಕಿಹೊಳಿ ಪ್ರಚಾರ ನಡೆಸಿದರು.

Advertisement

“ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ, ಬಿಎಸ್‌ವೈ ಸಿಎಂ’
ಹುಬ್ಬಳ್ಳಿ: ರಾಜ್ಯದಲ್ಲಿ ಬಿಜೆಪಿ ಮತ್ತೂಮ್ಮೆ ಅಧಿಕಾರಕ್ಕೆ ಬರಲಿದ್ದು, ಬಿ.ಎಸ್‌.ಯಡಿಯೂರಪ್ಪ ಮತ್ತೇ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಶಾಸಕ ಶ್ರೀರಾಮುಲು ಭವಿಷ್ಯ ನುಡಿದಿದ್ದಾರೆ. ಕುಂದಗೋಳ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಅಂಚಟಗೇರಿಯಲ್ಲಿ ಮಾಧ್ಯಮರೊಂದಿಗೆ ಮಾತನಾಡಿ, ಬಿಜೆಪಿ 104 ಶಾಸಕರನ್ನು ಹೊಂದಿದೆ.

ಕುಂದಗೋಳ ಹಾಗೂ ಚಿಂಚೋಳಿ ಉಪ ಚುನಾವಣೆಯಲ್ಲಿ ಎರಡು ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಶಾಸಕರ ಸಂಖ್ಯೆಯನ್ನು 106ಕ್ಕೆ ಹೆಚ್ಚಿಸಿಕೊಳ್ಳಲಿದೆ. ಪಕ್ಷೇತರ ಅಭ್ಯರ್ಥಿಗಳ ಸಹಕಾರದೊಂದಿಗೆ ಸರಕಾರ ರಚಿಸಲಾಗುವುದು. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವುದೇ ನಮ್ಮ ಗುರಿಯಾಗಿದೆ ಎಂದರು.

ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ಉತ್ತರ ಕರ್ನಾಟಕವನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ. ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಚುನಾವಣಾ ಇಲಾಖೆಗೆ ಪತ್ರ ಬರೆದು ಅಭಿವೃದ್ಧಿ ಕಾಮಗಾರಿ ಆರಂಭಿಸಲು ಅನುಕೂಲ ಕಲ್ಪಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಬರಪೀಡಿತ ಪ್ರದೇಶಗಳ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಕೆಲಸ ಮಾಡಬೇಕು.

ಕೇವಲ ಕಮೀಷನ್‌ ಆಸೆಗಾಗಿ ಹಾಗೂ ಕೇವಲ ನಾಲ್ಕು ಜಿಲ್ಲೆಗಳ ಮುಖ್ಯಮಂತ್ರಿಗಳಾಗಿ ಕೆಲಸ ಮಾಡಬಾರದು. ಉತ್ತರ ಕರ್ನಾಟಕದಲ್ಲಿ ಬರಗಾಲ ಆವರಿಸಿದ್ದು, ಜನ-ಜಾನುವಾರುಗಳು ಕುಡಿಯಲು ನೀರಿಲ್ಲದೇ ಪರಿತಪಿಸುತ್ತಿದ್ದು, ಚುನಾವಣೆ ನೆಪದಲ್ಲಾದರೂ ಮುಖ್ಯಮಂತ್ರಿಗಳು ಉತ್ತರ ಕರ್ನಾಟಕಕ್ಕೆ ಆಗಮಿಸಿ ಇಲ್ಲಿನ ಪರಿಸ್ಥಿತಿ ನೋಡಬೇಕು ಎಂದರು.

Advertisement

ನಕಲಿ ಮತದಾನ ಶಂಕೆ: ಸೋಲಿನ ಭೀತಿಯಿಂದ ಮಂಡ್ಯ, ಹಾಸನದಲ್ಲಿ ನಕಲಿ ಮತದಾನ ನಡೆದಿರುವ ಶಂಕೆ ಇದೆ. ಕೇವಲ ಒಂದೇ ಗಂಟೆಯಲ್ಲಿ ಶೇ.20 ಮತದಾನ ಹೆಚ್ಚಾಗಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಬಗ್ಗೆ ತನಿಖೆ ಮಾಡುವಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆಯುತ್ತೇನೆ ಎಂದು ಶ್ರೀರಾಮುಲು ಹೇಳಿದರು.

ಶ್ರೀರಾಮುಲು ರೋಡ್‌ ಶೋ: ಕುಂದಗೋಳ ವಿಧಾನಸಭಾ ಕ್ಷೇತ್ರದ ಹುಬ್ಬಳ್ಳಿ ತಾಲೂಕಿನ ಅಂಚಟಗೇರಿಯಲ್ಲಿ ಬುಧವಾರ ಮಾಜಿ ಸಚಿವ ಶ್ರೀರಾಮುಲು ಅವರು ಬಿಜೆಪಿ ಅಭ್ಯರ್ಥಿ ಎಸ್‌.ಐ.ಚಿಕ್ಕನಗೌಡರ ಪರ ರೋಡ್‌ ಶೋ ಮೂಲಕ ಮತಯಾಚಿಸಿದರು.
ನಂತರ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತ್ಯಲ್ಪ ಮತಗಳಿಂದ ಸೋಲು ಕಂಡಿರುವ ಬಿಜೆಪಿ ಅಭ್ಯರ್ಥಿ ಎಸ್‌.ಐ.ಚಿಕ್ಕನಗೌಡರ ಅವರನ್ನು ಈ ಬಾರಿ ಅತ್ಯಧಿಕ ಮತಗಳಿಂದ ಜಯ ಗಳಿಸುವಂತೆ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.

ಇದಕ್ಕೂ ಮೊದಲು, ಕುಂದಗೋಳ ತಾಲೂಕಿನ ಮಾವನೂರು ಗ್ರಾಮದಲ್ಲಿ ರೋಡ್‌ ಶೋ ನಡೆಸಿ, ಮತಯಾಚಿಸಿದರು. ಬಿಜೆಪಿ ಅಭ್ಯರ್ಥಿ ಎಸ್‌.ಐ.ಚಿಕ್ಕನಗೌಡರ, ಎಂ.ಆರ್‌.ಪಾಟೀಲ, ಮೋಹನ ಲಿಂಬಿಕಾಯಿ, ಜಿಲ್ಲಾಧ್ಯಕ್ಷ ಈರಣ್ಣಾ ಜಡಿ ಸೇರಿದಂತೆ ಮೊದಲಾದವರು ಸಾಥ್‌ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next