Advertisement

ರಸ್ತೆ ಸುರಕ್ಷತಾ ಸಪ್ತಾಹ: ಪೊಲೀಸರ ಬೈಕ್‌ ರ್ಯಾಲಿ

01:27 PM Jan 17, 2017 | Team Udayavani |

ರಾಯಚೂರು: ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್‌ ಧರಿಸುವುದು ಸೇರಿ ಸಂಚಾರಿ ನಿಯಮಗಳನ್ನು ತಪ್ಪದೆ ಪಾಲಿಸಬೇಕು ಎಂದು ಪಶ್ಚಿಮ ಪೊಲೀಸ್‌ ಠಾಣೆ ಸಿಪಿಐ ಲಕ್ಷಿನಾರಾಯಣ ಹೇಳಿದರು. 

Advertisement

ಇಲ್ಲಿನ ಸಂಚಾರಿ ಠಾಣೆಯಿಂದ 28ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಸೋಮವಾರ ಆಯೋಜಿಸಿದ್ದ ಸಂಚಾರ ಜಾಗೃತಿ ಮೂಡಿಸುವ ಬೈಕ್‌ ರ್ಯಾಲಿ ಮತ್ತು ಸಂಚಾರಿ ಪೊಲೀಸ್‌ ಅಧಿಕಾರಿ, ಸಿಬ್ಬಂದಿ ವರ್ಗ ಹಾಗೂ ಆಟೋ ಚಾಲಕರಿಗೆ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ಸಂಚಾರಿ ನಿಯಮಗಳ ಪಾಲನೆಗೆ ಜಾಗೃತಿ ಮೂಡಿಸುವ ಅಗತ್ಯವಿದೆ. ಇದರಿಂದ ಅಪಘಾತ ತಪ್ಪಿಸಬಹುದು. ಈ ಹಿನ್ನೆಲೆಯಲ್ಲಿ ವಾಹನ  ಚಾಲಕರು ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ಇಲಾಖೆ ಜತೆ ಕೈಜೋಡಿಸಬೇಕು ಎಂದರು. 

ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದ  ಸಮೀಪದ ಸಂಚಾರಿ ಠಾಣೆಯಿಂದ ಆರಂಭಗೊಂಡ ಬೈಕ್‌ ರ್ಯಾಲಿ ಡಾ| ಬಿ.ಆರ್‌.ಅಂಬೇಡ್ಕರ್‌ ವೃತ್ತ, ಸ್ಟೇಷನ್‌ ವೃತ್ತ, ಕೇಂದ್ರ ಬಸ್‌ ನಿಲ್ದಾಣ, ತೀನ್‌ ಕಂದಿಲ್‌, ಮಹಾವೀರ  ವೃತ್ತ, ಚಂದ್ರಮೌಳೇಶ್ವರ ವೃತ್ತ, ಗಂಜ್‌, ಬಸವೇಶ್ವರ ವೃತ್ತದ ಮಾರ್ಗವಾಗಿ ಠಾಣೆಗೆ ಆಗಮಿಸಿ ಸಮಾರೋಪಗೊಂಡಿತು. 

ಸಂಚಾರಿ ಪೊಲೀಸರು ಬೈಕ್‌ ರ್ಯಾಲಿ ನಡೆಸುವ  ಮೂಲಕ ದ್ವಿಚಕ್ರ ವಾಹನ ಚಲಿಸುವಾಗ ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಬೇಕು. ವಾಹನ ಚಲಾಯಿಸುವಾಗ ಮೊಬೈಲ್‌ ಬಳಸಬಾರದು ಮತ್ತು ವಾಹನವನ್ನು ಸರಿಯಾದ  ಪಾರ್ಕಿಂಗ್‌ ಸ್ಥಳದಲ್ಲಿ ನಿಲ್ಲಿಸುವಂತೆ ಜಾಗೃತಿ ಮೂಡಿಸಿದರು. 

Advertisement

ತನ್ನಿಮಿತ್ತ ಪೊಲೀಸ್‌ ಸಿಬ್ಬಂದಿ, ಆಟೋ ಚಾಲಕರು ಮತ್ತು ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು. ವೈದ್ಯರಾದ ಡಾ| ಶಿವರಾಜ ಊಟೂರು, ನೇತ್ರ ತಜ್ಞ ಡಾ| ನದೀಮ್‌, ದಂತ ವೈದ್ಯ ಡಾ| ತ್ರಿಲೋಕ್‌ ಅವರು ಆರೋಗ್ಯ ತಪಾಸಣೆ ನಡೆಸಿದರು.

80ಕ್ಕೂ  ಹೆಚ್ಚು ಜನ ಶಿಬಿರದ ಪ್ರಯೋಜನ ಪಡೆದರು. ನಗರ ಸಂಚಾರಿ ಠಾಣೆ ಪಿಎಸ್‌ಐ ಸಿದ್ಧರಾಮಪ್ಪ ಗಡೇದ, ಎಎಸ್‌ ಐಗಳಾದ ಕೃಷ್ಣಪ್ಪ ಯಾದವ, ಹುಸೇನ್‌ ಬಾಷಾ, ಸಿಬ್ಬಂದಿ ತೋಟಪ್ಪ, ಶರಣಬಸವ, ಮೆಹಬೂಬ್‌ ಅಲಿ, ಮಹ್ಮದ್‌ ಖಾನ್‌ ಇತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next