Advertisement

ರಸ್ತೆ ಸುರಕ್ಷತೆ ನಿಯಮ ಪಠ್ಯ ಕ್ರಮದಲ್ಲಿ ಸೇರ್ಪಡೆಯಾಗಲಿ: ಡಿಸಿ ರಾಜೇಂದ್ರ ಕೆ.ವಿ.

01:07 AM Dec 16, 2021 | Team Udayavani |

ಮಂಗಳೂರು: ಅಪಘಾತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಸುರಕ್ಷತೆ ಮತ್ತು ನಿಯಮ ಪಾಲನೆ ಬಗ್ಗೆ ಪಠ್ಯಕ್ರಮದಲ್ಲಿ ವಿಷಯವನ್ನು ಸೇರ್ಪಡೆ ಮಾಡುವ ಆವಶ್ಯಕತೆ ಇದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು ಹೇಳಿದರು.

Advertisement

ಮೋಟಾರು ವಾಹನ ಕಾಯ್ದೆ 2019ರ ಪರಿಣಾಮಕಾರಿ ಅನುಷ್ಠಾನ ಮತ್ತು ರಸ್ತೆ ಸುರಕ್ಷತೆ ಕುರಿತಂತೆ ಬೆಂಗಳೂರಿನ ಪಬ್ಲಿಕ್‌ ಅಫೇರ್ ಫೌಂಡೇಶನ್‌ ಮತ್ತು ಕಟ್ಸ್‌ (ಕನ್‌ಸ್ಯೂಮರ್‌ ಯೂನಿಟಿ ಆ್ಯಂಡ್‌ ಟ್ರಸ್ಟ್‌ ಸೊಸೈಟಿ) ಇಂಟರ್‌ ನ್ಯಾಶನಲ್‌ ವತಿಯಿಂದ ಬುಧವಾರ ನಗರದಲ್ಲಿ ನಡೆದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ರಸ್ತೆಗಳು ಸುರಕ್ಷಿತವಾಗಿದ್ದರೂ, ಬಳಕೆದಾರರಾದ ನಾವು ನಮ್ಮ ನಡವಳಿಕೆ ಬದಲಾಯಿಸಿ, ಸಂಚಾರ ನಿಯಮಗಳ ಸಮರ್ಪಕ ಪಾಲನೆ ಮಾಡಿ ಎಚ್ಚರಿಕೆಯಿಂದ ಇದ್ದರೆ ಸಂಭಾವ್ಯ ಅಪಘಾತಗಳನ್ನು ತಡೆಯಲು ಸಾಧ್ಯವಿದೆ ಎಂದ ಅವರು ಈ ವಿಚಾರವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ರಸ್ತೆ ಸುರಕ್ಷತ ಸಮಿತಿಯ ಸಭೆಗಳನ್ನು ನಿಯಮಿತವಾಗಿ ನಡೆಸಲಾಗುವುದು ಎಂದರು.

ಕೈಪಿಡಿ ತಯಾರಿ
ರಸೆ ಸುರಕ್ಷತೆ ಮತ್ತು ಮೋಟಾರು ವಾಹನ ಕಾಯ್ದೆ ಕುರಿತು ಕೈಪಿಡಿಯೊಂದನ್ನು ಕೆನರಾ ಚೇಂಬರ್‌ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರೀ ಸಹಾಯದಿಂದ ತಯಾರಿಸಿ ಹೈಸ್ಕೂಲ್‌ ವಿದ್ಯಾರ್ಥಿಗಳಿಗೆ 2022ರ ಜನವರಿಯಲ್ಲಿ ಹಂಚುವ ಚಿಂತನೆಯಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಇದನ್ನೂ ಓದಿ:ನಮ್ಮನ್ನು ಕಡೆಗಣಿಸಿದ್ದರಿಂದಲೇ ಪರಿಷತ್ ಚುನಾವಣೆಯಲ್ಲಿ ಹಿನ್ನಡೆ ಆಯ್ತು; ಯತ್ನಾಳ್‌ ಕಿಡಿ

ಕಟ್ಸ್‌ ಇಂಟರ್‌ನ್ಯಾಶನಲ್‌ ಸಂಸ್ಥೆಯ ನಿರ್ದೇಶಕ ಜಾರ್ಜ್‌ ಚೆರಿಯನ್‌ ಮಾತನಾಡಿ, ದೇಶದಲ್ಲಿ ಪರಿಷ್ಕೃತ ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದು 2 ವರ್ಷ ಕಳೆದಿದೆ. ಆದರೆ ಅಪಘಾತಗಳು ನಿರೀಕ್ಷಿತ ಪ್ರಮಾಣದಲ್ಲಿ ಕಡಿಮೆಯಾಗಿಲ್ಲ. ಹೊಸ ಕಾಯ್ದೆ ಅನುಷ್ಠಾನದ ಬಗ್ಗೆ ಅಧಿಕಾರಿಗಳಿಗೆ ಮತ್ತು ಕಾನೂನು ಅನುಸರಣೆಯ ಬಗ್ಗೆ ಜನರಿಗೆ ತಿಳುವಳಿಕೆ ಕೊಡುವ ಆವಶ್ಯಕತೆ ಇದೆ. ಹಾಗಾಗಿ ಕಟ್ಸ್‌ ಸಂಸ್ಥೆಯು ದೇಶಾದ್ಯಂತ ವಿವಿಧೆಡೆ ಜಾಗೃತಿ ಕಾರ್ಯಾಗಾರಗಳನ್ನು ಆಯೋಜಿಸುತ್ತಿದೆ ಎಂದರು.

Advertisement

ವಿವಿಧ ವಿಷಯಗಳ ಬಗ್ಗೆ ವಿಚಾರ ಮಂಡನೆ ನಡೆಯಿತು. ಜಿ.ಪಂ. ಸಿಇಒ ಡಾ| ಕುಮಾರ್‌ ಸಮಾರೋಪ ಭಾಷಣ ಮಾಡಿದರು. ಬೆಂಗಳೂರಿನ ಪಬ್ಲಿಕ್‌ ಅಫೇರ್ ಫೌಂಡೇಶನ್‌ ಕಾರ್ಯ ನಿರ್ವಾಹಕ ನಿರ್ದೇಶಕಿ ಡಾ| ಅನ್ನ ಪೂರ್ಣ ರವಿಚಂದರ್‌ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next