ಮಂಗಳೂರು ನಗರದ ಅಲ್ಲಲ್ಲಿ ಆಗಾಗ ರಸ್ತೆ ದುರಸ್ತಿ ಕಾರ್ಯಗಳು ನಡೆಯುತ್ತಲೇ ಇರುತ್ತವೆ. ಆದರೆ, ಈ ಕಾರ್ಯ ನಡೆದ ಮೇಲೆ ಅರ್ಧಂಬರ್ಧ ತೇಪೆ ಹಾಕಿ ಬಿಡುವುದರಿಂದ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ.
ನಗರದ ಪ್ರಮುಖ ರಸ್ತೆಗಳನ್ನು ನೀರು, ವಿದ್ಯುತ್ ಹಾಗೂ ಒಳಚರಂಡಿ ಮತ್ತಿತರ ಸಂಪರ್ಕಕ್ಕಾಗಿ ಅಗೆದು ಹಾಕಿ ಹೊಂಡಕ್ಕೆ ಅರ್ಧಂಬರ್ಧ ಮಣ್ಣು ತುಂಬಿಸಿ ಹಾಗೆಯೇ ಬಿಟ್ಟು ಬಿಡುವುದರಿಂದ ವಾಹನ ಚಾಲಕರು ಸದಾ ಸಂಕಷ್ಟ ಅನುಭವಿಸುವಂತಾಗಿದೆ. ರಸ್ತೆ ಕಡಿತ ಎನ್ನುವುದು ದ್ವಿಚಕ್ರ ವಾಹನ ಚಾಲಕರಿಗಂತೂ ಅಪಾಯಕಾರಿಯಾಗಿ ಪರಿಣಮಿಸಿದೆ.
ಮಂಗಳೂರಿನ ಉರ್ವ ಮಾರ್ಕೆಟ್ ಪರಿಸರದಲ್ಲಿ ಸಂಬಂಧಪಟ್ಟ ಇಲಾಖೆಯವರು ನೀರಿನ ಸಂಪರ್ಕಕ್ಕಾಗಿ ಅಲ್ಲಲ್ಲಿ ರಸ್ತೆಯನ್ನು ಕಡಿದು ಅರೆಬರೆ ಕಾಮಗಾರಿ ನಡೆಸಿದ್ದಾರೆ. ನಿರ್ಮಾಣ ಹಂತದಲ್ಲಿರುವ ಉರ್ವ ಮಾರುಕಟ್ಟೆಯ ಮುಂಭಾಗದಲ್ಲಿ ರಸ್ತೆಯನ್ನು ಕಡಿದು ಹಾಕಿದ ಪರಿಣಾಮ ರಸ್ತೆ ಮಧ್ಯೆಯೇ ಭಾರೀ ಗಾತ್ರದ ಚರಂಡಿ ನಿರ್ಮಾಣವಾಗಿದೆ. ದ್ವಿಚಕ್ರ ವಾಹನ ಚಾಲಕರಂತೂ ಈ ‘ಚರಂಡಿ’ ದಾಟಿ ವಾಹನ ಚಲಾಯಿಸಲು ಹರಸಾಹಸ ಪಡಬೇಕಾದ ಅನಿವಾರ್ಯತೆ ಇದೆ. ಆದ್ದರಿಂದ ರಸ್ತೆ ಅಗೆದ ಇಲಾಖೆಯವರು ಕೂಡಲೇ ಹೊಂಡವನ್ನು ತುಂಬಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಿದೆ.
ಸತೀಶ್ ಶೆಟ್ಟಿ ,
ಕೊಡಿಯಾಲಾಬೈಲ್