ಹಾವೇರಿ: ನೆರೆ ಮತ್ತು ಅತಿವೃಷ್ಟಿಯಿಂದ ಗ್ರಾಮಿಣ ರಸ್ತೆಗಳು ಅಪಾರ ಪ್ರಮಾಣದಲ್ಲಿ ಹಾಳಾಗಿವೆ. ತುರ್ತು ದುರಸ್ತಿಗೊಳಿಸಬೇಕಾದ ಅನಿವಾರ್ಯತೆ ಇರುವಾಗಲೇ ಉಪಚುನಾವಣೆ ನೀತಿ ಸಂಹಿತೆ ಸಮೀಪಿಸಿದ್ದು, ರಸ್ತೆ ದುರಸ್ತಿ ಇನ್ನೂ ಮರೀಚಿಕೆಯಾಗಿದೆ. ಜಿಲ್ಲೆಯ ಹಿರೇಕೆರೂರ ಹಾಗೂ ರಾಣಿಬೆನ್ನೂರ ವಿಧಾನಸಭೆ ಕ್ಷೇತ್ರಗಳಿಗೆ ಡಿ. 5ರಂದು ಚುನಾವಣೆ ಘೋಷಣೆಯಾಗಿದೆ. ಹೀಗಾಗಿ ಈ ತಿಂಗಳಿನಿಂದಲೇ ನೀತಿ ಸಂಹಿತೆ ಶುರುವಾಗಲಿದ್ದು, ಗ್ರಾಮೀಣ ರಸ್ತೆಗಳ ಸುಧಾರಣೆಗೆ ತಡೆಯೊಡ್ಡಿದಂತಾಗಿದೆ.
ನೆರೆ, ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ 875.80ಕಿಮೀ. ಗ್ರಾಮೀಣ ರಸ್ತೆ ಹಾಳಾಗಿದೆ. ಈವರೆಗೆ ಹಾಳಾದ ರಸ್ತೆ ಸಮೀಕ್ಷೆ ಕಾರ್ಯ ಮಾತ್ರ ಆಗಿದೆ. ಗುಂಡಿಗಳು ಬಿದ್ದಿರುವ ರಸ್ತೆಯಲ್ಲೇ ಓಡಾಟ ನಡೆಸಬೇಕಾದ ಸ್ಥಿತಿ ಇದೆ. ಪಂಚಾಯತರಾಜ್ ಇಂಜಿನಿಯರಿಂಗ್ ವಿಭಾಗದ 875.80ಕಿಮೀ. ಗ್ರಾಮೀಣ ರಸ್ತೆ ಹಾಳಾಗಿದ್ದು, ಹಾನಿ ಅಂದಾಜು ಮೌಲ್ಯ 24.18 ಕೋಟಿ ರೂ.ಗಳಷ್ಟಾಗಿದೆ. ಈ ವಿಭಾಗದ ರಸ್ತೆ ಹಾಗೂ ಕಟ್ಟಡ ಸೇರಿ 332 ಕೋಟಿ ರೂ.ಗಳ ಹಾನಿಯಾಗಿದೆ.
ಒಂದು ತಿಂಗಳ ಹಿಂದೆ ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದ ಜನಜೀವನವೇ ತತ್ತರಗೊಂಡಿತ್ತು. ಜಿಲ್ಲೆಯ 25ಕ್ಕೂ ಹೆಚ್ಚು ಗ್ರಾಮಗಳು ಜಲಾವೃತವಾಗಿದ್ದವು. ರಸ್ತೆಗಳೆಲ್ಲ ಕೊಚ್ಚಿ ಹಳ್ಳಗಳಾಗಿದ್ದವು. ನದಿ ತೀರದ ಪ್ರದೇಶಗಳಲ್ಲಂತೂ ರಸ್ತೆ ಮುಳುಗಿ ಹೋಗಿದ್ದವು. ಈಗ ಪ್ರವಾಹದಿಂದ ಆಗಿರುವ ರಸ್ತೆ ಹಾನಿಯಿಂದ ಗ್ರಾಮೀಣ ಭಾಗದಲ್ಲಿ ಸಂಚಾರವೇ ದುಸ್ತರವಾಗಿದೆ. ಈ ರಸ್ತೆಗಳಲ್ಲಿ ವಾಹನ ಓಡಿಸುವುದೆಂದರೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ರಸ್ತೆ ಹಾನಿ ವಿವರ : ಅತಿವೃಷ್ಟಿ ಹಾಗೂ ನೆರೆ ಹಾವಳಿಗೆ ಜಿಲ್ಲೆಯಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತರಾಜ್ ಇಂಜಿನಿಯರಿಂಗ್ ವಿಭಾಗದ 875.80 ಕಿಮೀ ಗ್ರಾಮೀಣ ರಸ್ತೆ ಹಾಳಾಗಿದ್ದು, ಜಿಲ್ಲೆಯಲ್ಲಿ ಒಟ್ಟು 292 ರಸ್ತೆಗಳು ಅತಿವೃಷ್ಟಿ ಹಾಗೂ ನೆರೆಯಿಂದ ಸಂಪರ್ಕ ಕಡಿತಗೊಂಡಿವೆ. ಅಂದಾಜು 24.18 ಕೋಟಿ ರೂ. ನಷ್ಟವಾಗಿದೆ. 69 ಸೇತುವೆಗಳು ಹಾಳಾಗಿದ್ದು ಅಂದಾಜು 71.20ಲಕ್ಷ ರೂ. ಹಾನಿಯಾಗಿದೆ. 39 ಕೆರೆಗಳಿಗೆ ಧಕ್ಕೆಯಾಗಿದ್ದು, ಅಂದಾಜು 2.99 ಕೋಟಿ ರೂ. ನಷ್ಟವಾಗಿದೆ. ಪಂಚಾಯತರಾಜ್ ವಿಭಾಗದ ಹಾನಿಯಾದ 69 ಸೇತುವೆಗಳಲ್ಲಿ ಸವಣೂರ ತಾಲೂಕಿನಲ್ಲಿ ಅತಿಹೆಚ್ಚು 25, ಹಾವೇರಿ 23, ಬ್ಯಾಡಗಿ 10, ಶಿಗ್ಗಾವಿ 6, ಹಾನಗಲ್ಲ 3, ಹಿರೇಕೆರೂರ ತಾಲೂಕಿನಲ್ಲಿ 2 ಸೇತುವೆಗಳಿಗೆ ಹಾನಿಯಾಗಿದೆ. ಕೆಲವು ಗ್ರಾಮಗಳಲ್ಲಂತೂ ರಸ್ತೆಗಳು ಸಂಪೂರ್ಣ ಕೊಚ್ಚಿ ಹೋಗಿವೆ. ದೊಡ್ಡ ಗುಂಡಿಗಳು ಬಿದ್ದಿವೆ. ಸ್ವಲ್ಪ ಆಯ ತಪ್ಪಿದ್ದರೂ ಅಪಘಾತ ಕಟ್ಟಿಟ್ಟ ಬುತ್ತಿ ಎಂಬಂತಾಗಿದೆ.
ಇಂತಹ ರಸ್ತೆಗಳಲ್ಲಿನ ಸಂಚಾರ ಎಂದರೆ ತಂತಿ ಮೇಲೆ ನಡೆದಂತಾಗಿದೆ. ಕೆಲ ಭಾಗದಲ್ಲಿ ವಾಹನಗಳು ಗುಂಡಿ ಯಲ್ಲಿ ಬಿದ್ದು ಅನಾಹುತ ಸಂಭವಿಸಿದ ಪ್ರಕರಣಗಳೂ ನಡೆದಿವೆ. ನೀತಿ ಸಂಹಿತೆ ಇದ್ದರೂ ತುರ್ತು ಆಗಬೇಕಾದ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆಯಾದರೂ ರಾಜಕಾರಣಿಗಳು, ಅಧಿಕಾರಿಗಳು ಚುನಾವಣೆ ಗುಂಗಿನಲ್ಲಿ ಮುಳುಗಿದ್ದರಿಂದ ದುರಸ್ತಿ ಸದ್ಯಕ್ಕೆ ಮರೀಚಿಕೆಯಾಗಿದ್ದು, ಹಾಳಾಗಿರುವ ರಸ್ತೆಗಳಲ್ಲೇ ಜನರ ಸಂಚಾರ ಅನಿವಾರ್ಯ ಎಂಬಂತಾಗಿದೆ.