Advertisement
ಸಾಮಾನ್ಯವಾಗಿ ಮೆಟ್ರೊ ರೈಲಿನಲ್ಲಿ ತಾಂತ್ರಿಕ ದೋಷ ಉಂಟಾದ ಸಂದರ್ಭದಲ್ಲಿ ಅದರ ದುರಸ್ತಿಗೆ ರೋಡ್ ಕಂ ರೈಲು ವಾಹನ ಬಳಕೆ ಮಾಡಲಾಗುತ್ತದೆ. ಈಚೆಗೆ ಜರ್ಮನ್‌ನಿಂದ ತರಲಾದ ಈ ವಾಹನದ ಪರೀಕ್ಷೆಯು ಪೀಣ್ಯ ಡಿಪೋದಿಂದ ನ್ಯಾಷನಲ್ ಕಾಲೇಜು ನಡುವೆ ನಡೆಸಲಾಗುತ್ತಿತ್ತು. ರಾಜಾಜಿನಗರ ನಿಲ್ದಾಣ ದಾಟುತ್ತಿದ್ದಂತೆ ಬರುವ ತಿರುವಿನಲ್ಲಿ ಆರ್‌ಆರ್‌ವಿ ಹಳಿಯಲ್ಲಿ ಜಾಮ್ (ಸಿಲುಕಿದೆ) ಆಗಿದೆ. ಇದರಿಂದ ಇಡೀ ಹಸಿರು ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ತೊಂದರೆ ಅನುಭವಿಸಿದರು.
Related Articles
Advertisement
ಏನಿದು ರೋಡ್ ಕಂ ರೈಲ್ ವೇಹಿಕಲ್?: ಮೆಟ್ರೋ ರೈಲು ಹಳಿ ತಪ್ಪಿದಾಗ ಅಥವಾ ಯಾವುದೇ ತಾಂತ್ರಿಕ ದೋಷದಿಂದ ಮಾರ್ಗಮಧ್ಯೆ ಸ್ಥಗಿತಗೊಂಡಾಗ ಅದರ ನೆರವಿಗೆ ಧಾವಿಸುವ ವಾಹನ ರೋಡ್ ಕಂ ರೈಲ್ ವೇಹಿಕಲ್ (ಆರ್ ಆರ್‌ವಿ). ಇದರಲ್ಲಿ ಹಳಿ ತಪ್ಪಿದ ರೈಲಿನ ಚಕ್ರಗಳನ್ನು ಮರಳಿ ಹಳಿಗೆ ಎತ್ತಿಡಲು ಅಗತ್ಯವಿರುವ ಜ್ಯಾಕ್, ಪೂರಕ ಬೀಮ್‌ಗಳು, ರೈಲನ್ನು ಎಳೆದೊಯ್ಯಲು, ತ್ವರಿತ ರಿಪೇರಿಗೆ ಅಗತ್ಯ ಉಪಕರಣಗಳು ಇರುತ್ತವೆ. ರೈಲು ಇದ್ದಲ್ಲಿಗೇ ತೆರಳಿ ಇದನ್ನು ಕಾರ್ಯಾಚರಣೆಗೊಳಿಸಲಾಗುತ್ತದೆ. ಟಯರ್‌ಗಳು ಮತ್ತು ರೈಲಿನ ಚಕ್ರಗಳು ಎರಡನ್ನೂ ಇದು ಒಳಗೊಂಡಿರುತ್ತದೆ. ಹಳಿ ಮೇಲೆ ಇಳಿಸಿದಾಗ, ಟಯರ್‌ಗಳು ಮೇಲಕ್ಕೆ ಹೋಗುತ್ತವೆ. ಅದೇ ರೀತಿ, ರಸ್ತೆಗಿಳಿದಾಗ ಟಯರ್‌ಗಳು ಕೆಳಗೆ ಬರುತ್ತವೆ. ಈಗಾಗಲೇ ಇಂತಹ ಎರಡು ಆರ್‌ಆರ್ ವಿಗಳು ಪೀಣ್ಯ ಮತ್ತು ಬೈಯಪ್ಪನಹಳ್ಳಿಯಲ್ಲಿ ಇಡಲಾಗಿದೆ. ಈಚೆಗೆ ಜರ್ಮನ್‌ನಿಂದ ಹೊಸ ಆರ್‌ಆರ್‌ವಿ ಬಂದಿದ್ದು, ಇದರ ಪರೀಕ್ಷೆ ಮಂಗಳವಾರ ನಡೆದಿತ್ತು. ಸೋಮವಾರ ವಾಣಿಜ್ಯ ಸೇವೆ ಮುಗಿದ ನಂತರ ಈ ಪರೀಕ್ಷೆ ಆರಂಭವಾಗಿತ್ತು. ಬೆಳಗಿನಜಾವ 1.40ಕ್ಕೆ ಈ ವಾಹನ ಹಳಿಯಲ್ಲಿ ಸಿಲುಕಿತ್ತು ಎಂದು ನಿಗಮದ ಮೂಲಗಳು ತಿಳಿಸಿವೆ.
ಬಿಎಂಆರ್‌ಸಿಎಲ್ ವಿರುದ್ಧ ಆಕ್ರೋಶ: ಬಿಎಂಆರ್‌ಸಿಎಲ್ ಈ ಧೋರಣೆ ಹೊಸದಲ್ಲ; ತಾಂತ್ರಿಕ ದೋಷಗಳು ಅನಿರೀಕ್ಷಿತ ಇರಬಹುದು. ಆದರೆ, ಅದರ ಬಗ್ಗೆ ಸ್ಪಷ್ಟ ಮಾಹಿತಿ ನೀಡಿ, ಬಿಎಂಟಿಸಿಯೊಂದಿಗೆ ಸಮನ್ವಯ ಸಾಧಿಸಿ, ಪ್ರಯಾಣಿಕರಿಗೆ ಸಾಧ್ಯವಾದಷ್ಟು ಸಮಸ್ಯೆ ಆಗದಂತೆ ನೋಡಿಕೊಳ್ಳಬಹುದು. ಇದಾವುದನ್ನೂ ಮಾಡುವುದಿಲ್ಲ. ಬೆಳಗ್ಗೆ 10ಕ್ಕೆ ಜಯನಗರದಲ್ಲಿ ಇರಬೇಕಿತ್ತು. ಈ ವ್ಯತ್ಯಯದಿಂದ ಒಂದು ತಾಸು ತಡವಾಗುತ್ತಿದೆ. ಏನು ಮಾಡುವುದು ಎಂದು ದಾಸರಹಳ್ಳಿ ನಿವಾಸಿ ಮೆಟ್ರೋ ಪ್ರಯಾಣಿಕ ಮನೋಜ್ ಕುಮಾರ್ ಬೇಸರ ವ್ಯಕ್ತಪಡಿಸಿದರು.