ಹೊಸಂಗಡಿ: ಇದು ಅನೇಕ ವರ್ಷಗಳಿಂದ ಇರುವ ಮಣ್ಣಿನ ರಸ್ತೆ. ಮಳೆಗಾಲದಲ್ಲಿ ಪ್ರತೀ ವರ್ಷ ಈ ಮಾರ್ಗದಲ್ಲಿ ಸಂಚರಿಸಲು ಜನ ಹರಸಾಹಸ ಪಡುತ್ತಾರೆ. ಇದೇ ರಸ್ತೆಗೆ ಪಂಚಾಯತ್‌ನಿಂದ ಹೊಂಡ ಬಿದ್ದ ಕಡೆಗಳಲ್ಲಿ ಮಳೆಗಾಲ ಆರಂಭವಾಗುವ ಸ್ವಲ್ಪ ಮುನ್ನ ಮಣ್ಣು ಹಾಕಲಾಗಿತ್ತು. ಇದೇ ಈಗ ಇಲ್ಲಿನ ಜನರಿಗೆ ಸಮಸ್ಯೆ ತಂದೊಡ್ಡಿರುವುದು. ವಾಹನ ಮಾತ್ರವಲ್ಲದೆ, ನಡೆದುಕೊಂಡು ಹೋಗಲು ಕೂಡ ಸಂಕಷ್ಟ ಪಡುವಂತಾಗಿದೆ.
ಇದು ಹೊಸಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮರಾಠಿ ಸಮುದಾಯದ ಮನೆಗಳಿರುವ ಗಾವಡಿಜಡ್ಡುವನ್ನು ಸಂಪರ್ಕಿಸುವ ಮಣ್ಣಿನ ರಸ್ತೆಯ ದುಸ್ಥಿತಿ. ಅಲ್ಲಲ್ಲಿ ಕೆಸರುಮಯ ಆಗಿರುವುದರಿಂದ ಈಗ ಇಲ್ಲಿ ಸಂಚರಿಸಲು ಸಾಧ್ಯವಿಲ್ಲದಂತಾಗಿದೆ. 25 ಕುಟುಂಬಗಳು
ಗಾವಡಿಜಡ್ಡುವಿನಲ್ಲಿ ಮರಾಠಿ ಸಮುದಾಯದ 25ಕ್ಕೂ ಅಧಿಕ ಕುಟುಂಬಗಳಿದ್ದು, ಇವರೆಲ್ಲ ನಿತ್ಯ ಪೇಟೆ ಅಥವಾ ಇನ್ನು ಬೇರೆ ಬೇರೆ ಕಡೆಗಳಿಗೆ ಹೋಗಲು ಇದೇ ಮಾರ್ಗವನ್ನು ಅವಲಂಬಿಸಿದ್ದಾರೆ. ಹೊಸಂಗಡಿ ಪೇಟೆಯಿಂದ ಗಾವಡಿಜಡ್ಡುವಿಗೆ ಸುಮಾರು 3 ಕಿ.ಮೀ. ದೂರವಿದೆ. ಇದರಲ್ಲಿ ಮುಖ್ಯ ರಸ್ತೆಯಿಂದ ಸುಮಾರು 2 ಕಿ.ಮೀ. ದೂರದವರೆಗೆ ಕಾಂಕ್ರೀಟ್ ರಸ್ತೆಯಾಗಿದೆ. ಆದರೆ ಅಲ್ಲಿಂದ ಮುಂದಕ್ಕೆ ಅಂದರೆ ಸುಮಾರು 1 ಕಿ.ಮೀ. ದೂರದ ಮಣ್ಣಿನ ರಸ್ತೆ ಮಾತ್ರ ಸಂಪೂರ್ಣ ಹದಗೆಟ್ಟಿದ್ದು, ಜನ ನಿತ್ಯ ಸಂಕಷ್ಟ ಅನುಭವಿಸುವಂತಾಗಿದೆ.
ದುರಸ್ತಿಪಡಿಸಿದರೂ ಪ್ರಯೋಜನವಿಲ್ಲ :
ಈ ರಸ್ತೆಯನ್ನು ಈ ಬಾರಿಯ ಮಳೆಗಾಲ ಆರಂಭವಾಗುವುದಕ್ಕೂ ಮುನ್ನ ಹೊಂಡ- ಗುಂಡಿಗಳಿರುವ ಕಡೆಗಳಲ್ಲಿ ಸುಮಾರು 80 ಸಾವಿರ ರೂ. ವೆಚ್ಚದಲ್ಲಿ ಪಂಚಾಯತ್ ವತಿಯಿಂದ ದುರಸ್ತಿ ಪಡಿಸಲಾಗಿದೆ. ಆದರೆ ಅಲ್ಲಲ್ಲಿ ಮಣ್ಣು ಹಾಕಿದ್ದರಿಂದ ರಾಡಿಯೆದ್ದಿದ್ದು, ಇದು ಇನ್ನಷ್ಟು ಸಮಸ್ಯೆ ತಂದೊಡ್ಡಿದೆ.
ಪೇಟೆಗೆ ಬರುವುದೇ ಕಷ್ಟ :
ಇಲ್ಲಿ ನೆಲೆಸಿರುವ ಜನರಿಗೆ ಎಲ್ಲದಕ್ಕೂ ಹೊಸಂಗಡಿ ಪೇಟೆಗೆ ಬರಬೇಕು. ಈ ಹದಗೆಟ್ಟ ಕೆಸರುಮಯ ರಸ್ತೆಯಿಂದಾಗಿ ಪೇಟೆ ಕಡೆಗೆ ಬರುವುದೇ ಇವರಿಗೆ ದೊಡ್ಡ ಸಾಹಸಮಯ ಕೆಲಸವಾಗಿದೆ. ಪಡಿತರ ತರಲು, ಅಗತ್ಯದ ದಿನಸಿ ವಸ್ತುಗಳ ಖರೀದಿ ಹೀಗೆ ಎಲ್ಲದಕ್ಕೂ ಸಮಸ್ಯೆಯಾಗಿದೆ. ಇನ್ನು ಯಾರಿಗಾದರೂ ಅನಾರೋಗ್ಯ ಉಂಟಾದರೆ ತುರ್ತಾಗಿ ಆಸ್ಪತ್ರೆಗೆ ಕರೆದೊಯ್ಯಲು ಸಹ ತುಂಬಾ ಸಮಸ್ಯೆಯಾಗುತ್ತಿದೆ.
ಇತರ ಸಮಸ್ಯೆಗಳೇನು? :
- ಗಾವಡಿಜಡ್ಡುವಿನಲ್ಲಿರುವ 25 ಕುಟುಂಬಗಳ ಪೈಕಿ ಐದು ಮನೆಗಳಿಗೆ ಇನ್ನೂ ಸಹ ವಿದ್ಯುತ್ ಸಂಪರ್ಕವನ್ನೇ ಕಲ್ಪಿಸಿಕೊಟ್ಟಿಲ್ಲ.
- ಇಲ್ಲಿನ ಕೆಲವು ಮನೆಗಳಿಗೆ ನೆಟ್‌ವರ್ಕ್ ಸಮಸ್ಯೆಯಿದೆ.
- ಪಡಿತರಕ್ಕಾಗಿ 3-4 ಕಿ.ಮೀ. ದೂರ ಸಂಚರಿಸಬೇಕಾಗಿದೆ.
ಕಳಪೆ ಕಾಮಗಾರಿ :
ಈ ನಮ್ಮ ವಾರ್ಡಿನ ಗಾವಡಿಜಡ್ಡುವಿನ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ಜನ ವಾಹನದಲ್ಲಿ ಬಿಡಿ, ನಡೆದುಕೊಂಡು ಹೋಗಲು ಸಹ ಸಂಕಷ್ಟಪಡುವಂತಾಗಿದೆ. ಕೆಲವು ದಿನಗಳ ಹಿಂದೆ ದುರಸ್ತಿ ಮಾಡಿದರೂ, ಯಾವುದೇ ಪ್ರಯೋಜನವಾಗಿಲ್ಲ. ಕಳಪೆ ಕಾಮಗಾರಿಯಿಂದಾಗಿ ಮತ್ತಷ್ಟು ರಾಡಿಯೆದ್ದು ಹೋಗಿದೆ. ಈ ರಸ್ತೆಯ ಅಭಿವೃದ್ಧಿಗೆ ಈಗಾಗಲೇ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಲಾಗಿದೆ.
– ಸಂತೋಷ್, ಸ್ಥಳೀಯ ಗ್ರಾ.ಪಂ. ಸದಸ್ಯರು
ಪ್ರಸ್ತಾವನೆ ಸಲ್ಲಿಕೆ :
ಗಾವಡಿಜಡ್ಡುವಿನ ರಸ್ತೆ ಅಭಿವೃದ್ಧಿ ಬಗ್ಗೆ ಈಗಾಗಲೇ ಪಂಚಾಯತ್ ಗಮನದಲ್ಲಿದ್ದು, ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳಿಗೆ ಪಂಚಾಯತ್‌ನಿಂದ ಪ್ರಸ್ತಾವನೆ ಸಲ್ಲಿಸಲಾಗುವುದು.
– ಶ್ವೇತಾಲತಾ, ಹೊಸಂಗಡಿ ಗ್ರಾ.ಪಂ. ಪಿಡಿಒ
-ಪ್ರಶಾಂತ್ ಪಾದೆ