Advertisement

ಅಭಿವೃದ್ಧಿ ನಿರೀಕ್ಷೆಯಲ್ಲಿ ಬೆಳಂದೂರು-ಪೆರುವಾಜೆ ಸಂಪರ್ಕ ರಸ್ತೆ

05:05 AM May 24, 2018 | Karthik A |

ಸವಣೂರು: ಬೆಳಂದೂರು- ಪೆರುವಾಜೆ ರಸ್ತೆಯಲ್ಲಿ ವಾಹನ ಚಲಾಯಿಸುವುದು ಬಿಡಿ, ನಡೆದಾಡಲೂ ಸಾಧ್ಯವಾಗದು. ಅಷ್ಟು ಕುಲಗೆಟ್ಟು ಹೋಗಿದೆ ಈ ರಸ್ತೆ. ಮಳೆಗಾಲದಲ್ಲಿ ಹೊಂಡಗಳಲ್ಲಿ ನೀರು ನಿಂತರೆ, ಬೇಸಿಗೆಯಲ್ಲಿ ಧೂಳಿನದೇ ಚಿಂತೆ. ಈ ರಸ್ತೆಯ ಅಭಿವೃದ್ಧಿಯ ನಿರೀಕ್ಷೆಯಲ್ಲಿ ಈ ಭಾಗದ ಜನತೆ ಇದ್ದಾರೆ. ತೀರಾ ಹದಗೆಟ್ಟಿರುವ ಬೆಳಂದೂರು – ಪೆರುವಾಜೆ ರಸ್ತೆಯ ಮೂಲಕ ಕಂಪ, ಪಾತಾಜೆ, ಪೆರುವಾಜೆ, ಪೆರುವೋಡಿ ಮೊದಲಾದೆಡೆ ಹೋಗಬಹುದಾಗಿದ್ದು, ಈ ರಸ್ತೆಯಲ್ಲಿ ಬೆಳಂದೂರುನಿಂದ ಬೆಳ್ಳಾರೆಗೆ ಇರುವ ದೂರ ಕೇವಲ 9 ಕಿ.ಮೀ. ಆದರೆ ಈ ರಸ್ತೆಯ ದುರವಸ್ಥೆಯಿಂದ ಜನತೆ ಸುತ್ತು ಬಳಸಿ ಪ್ರಯಾಣಿಸುವಂತಾಗಿದೆ. ಬೆಳಂದೂರುನಿಂದ ಪಾತಾಜೆವರೆಗಿನ ರಸ್ತೆ ಬೆಳಂದೂರು ಜಿ.ಪಂ. ಕ್ಷೇತ್ರದ ವ್ಯಾಪ್ತಿಗೆ ಬಂದರೆ, ಪಾತಾಜೆಯಿಂದ ಕಾಪುಕಾಡು ವರೆಗೆ ಬೆಳ್ಳಾರೆ ಜಿ.ಪಂ. ವ್ಯಾಪ್ತಿಗೆ ಬರುತ್ತದೆ.

Advertisement

ಸುತ್ತು ಬಳಸಿ ಪ್ರಯಾಣ
ಗುಂಡಿನಾರು ಎಂಬಲ್ಲಿಂದ ಬೆಳಂದೂರು ತಲುಪಲು ಕೇವಲ 2 ಕಿ.ಮೀ. ಅಂತರ. ಆದರೆ ರಸ್ತೆಯ ದುಸ್ಥಿತಿಯಿಂದ ಗುಂಡಿನಾರು ಪರಿಸರದ ಜನರು ಬೆಳಂದೂರಿಗೆ ಬರಬೇಕಾದರೆ ಕಾಣಿಯೂರು ಮೂಲಕ 6 ಕಿ.ಮೀ. ಪ್ರಯಾಣಿಸಬೇಕು. ಅದೇ ರೀತಿ ಬೆಳಂದೂರು ಸಮೀಪದ ಪಳ್ಳತ್ತಾರಿಗೆ ಹೋಗಲು ಬರೆಪ್ಪಾಡಿ ಮೂಲಕ ಸಂಚರಿಸುತ್ತಾರೆ.

ಆಟೋ ಬರುತ್ತಿಲ್ಲ!
ಬೆಳಂದೂರಿನಿಂದ ಪೆರುವಾಜೆಗೆ ಹೋಗಲು ಯಾವ ಆಟೋ ಚಾಲಕರೂ ಮುಂದೆ ಬರುತ್ತಿಲ್ಲ. ಈ ರಸ್ತೆಯಲ್ಲಿ ಸಂಚರಿಸಿದರೆ ಸಿಗುವ ಬಾಡಿಗೆಗಿಂತ ಹೆಚ್ಚು ಹಣ ವಾಹನ ರಿಪೇರಿಗೆ ಬೇಕಾಗುತ್ತದೆ ಎಂಬುದು ರಿಕ್ಷಾ ಚಾಲಕರ ಅಭಿಪ್ರಾಯ. ಹೀಗಾಗಿ ಹೆಚ್ಚಿನವರು ಸಣ್ಣ ಪ್ರಮಾಣದ ಹೊರೆಯನ್ನು ಹೆಗಲ ಮೇಲೆ ಹೊತ್ತುಕೊಂಡೇ ಹೋಗುವಂತಹ ಸ್ಥಿತಿ ಬಂದೊದಗಿದೆ.


ಗರಿಷ್ಠ ಅನುದಾನ ಬೇಕು

ಗರಿಷ್ಠ ಅನುದಾನವಿಲ್ಲದೆ ಈ ರಸ್ತೆಯನ್ನು ಅಭಿವೃದ್ಧಿ ನಡೆಸುವುದು ಅಸಾಧ್ಯ. ಕೆಲವೆಡೆ ರಸ್ತೆಯಲ್ಲಿ ಡಾಮರಿನ ಯಾವುದೇ ಕುರುಹು ಕಾಣಸಿಗದು. ಮಣ್ಣಿನ ಕಚ್ಚಾ ರಸ್ತೆಯ ರೀತಿಯಲ್ಲಿ ಇದೆ. ಈ ರಸ್ತೆಯ ಅಭಿವೃದ್ಧಿ ಕುರಿತೂ ಹಲವು ಬಾರಿ ಬೆಳಂದೂರು ಗ್ರಾಮಸಭೆಯಲ್ಲೂ ವಿಚಾರ ಪ್ರಸ್ತಾಪವಾಗಿದೆ. ಜನರೂ ಮನವಿ ನೀಡಿದ್ದಾರೆ. ಆದರೆ ರಸ್ತೆಯ ಸ್ಥಿತಿಯಲ್ಲಿ ಸುಧಾರಣೆಯಾಗಿಲ್ಲ.

ಇಲಾಖೆಗೆ ನೀಡಿ
ಈ ರಸ್ತೆಯನ್ನು ಲೋಕೋಪಯೋಗಿ ಇಲಾಖೆಗೆ ಸೇರ್ಪಡೆಗೊಳಿಸಿ ಅಭಿವೃದ್ಧಿಪಡಿಸುವಂತೆ ಜಿಲ್ಲಾಧಿಕಾರಿ, ಶಾಸಕರಿಗೆ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರು ಮಂಗಳೂರು ಇವರಿಗೆ ಮನವಿ ಸಲ್ಲಿಸಲಾಗಿದೆ. ಈ ಹಿಂದೆ ತುರ್ತು ಕಾಮಗಾರಿಗೆ 3 ಲಕ್ಷ ರೂ.ಗಳನ್ನು ಮಂಜೂರುಗೊಳಿಸಿ ಕಾಮಗಾರಿ ನಡೆಸಲಾಗಿದೆ. ರಸ್ತೆ ಡಾಮರು ಕಾಮಗಾರಿಗೆ ದೊಡ್ಡ ಮೊತ್ತದ ಹಣ ಬೇಕಾಗಿರುವುದರಿಂದ ಅನುದಾನ ನೀಡುವಂತೆ ಶಾಸಕ, ಸಂಸದರಿಗೂ ಕೇಳಿಕೊಳ್ಳಲಾಗಿದೆ ಎಂದು ಜಿ.ಪಂ. ಸದಸ್ಯೆ ಪ್ರಮೀಳಾ ಜನಾರ್ದನ್‌ ಹೇಳಿದ್ದಾರೆ.

Advertisement

ಪ್ರಯತ್ನ ಅಗತ್ಯ
ಈ ರಸ್ತೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಪ್ರಯತ್ನಿಸಬೇಕು. ರಸ್ತೆಯನ್ನು ಪ್ಯಾಚ್‌ ವರ್ಕ್‌ ಮಾಡುವುದರ ಬದಲು ಸಂಪೂರ್ಣ ಡಾಮರು ಕಾಮಗಾರಿ ಮಾಡಿಸಲು ಜನಪ್ರತಿನಿಧಿಗಳು ಮುತುವರ್ಜಿ ವಹಿಸಬೇಕು ಎಂದು ರಸ್ತೆಯ ಬಳಕೆದಾರ ಪ್ರಜೀತ್‌ ರೈ ಪಾತಾಜೆ ಅಭಿಪ್ರಾಯಪಟ್ಟಿದ್ದಾರೆ.

CRF ಅನುದಾನ
ಬೆಳಂದೂರು – ಪೆರುವಾಜೆ ರಸ್ತೆಯ ಅಭಿವೃದ್ಧಿಗಾಗಿ ನಬಾರ್ಡ್‌ ಅನುದಾನಕ್ಕೆ ಈ ಹಿಂದಿನ ಅವಧಿಯಲ್ಲೇ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಗ್ರಾಮ ಸಡಕ್‌ ಯೋಜನೆಯಲ್ಲಿ ಅನುದಾನ ಒದಗಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನಿಸಿದ್ದೆವು. ಜನತೆಯ ಆವಶ್ಯಕತೆಗಳ ಈಡೇರಿಕೆಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. CRF ನಿಧಿಯಿಂದ 3 ಕೋಟಿ ರೂ. ಅನುದಾನ ನೀಡಲಾಗಿದೆ. ಟೆಂಡರ್‌ ಪ್ರಕ್ರಿಯೆ ನಡೆದ ಬಳಿಕ ಕಾಮಗಾರಿ ಆರಂಭವಾಗುತ್ತದೆ ಎಂದು ಸುಳ್ಯ ಶಾಸಕ ಎಸ್‌. ಅಂಗಾರ ತಿಳಿಸಿದ್ದಾರೆ.

— ಪ್ರವೀಣ್‌ ಚೆನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next