Advertisement

ಸಸಿಹಿತ್ಲು ಬೀಚ್‌ ರಸ್ತೆಗೆ ಹೊಂಡ, ಗುಂಡಿಗಳಿಂದ ಸ್ವಾಗತ?

03:25 AM Jul 13, 2017 | Team Udayavani |

ಹಳೆಯಂಗಡಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದು ಕಡಲ ಕ್ರೀಡೆಯಾದ ಸರ್ಫಿಂಗ್‌ನಿಂದ ದೇಶ ವಿದೇಶದ ಪ್ರವಾಸಿಗರನ್ನು ಸೆಳೆಯುತ್ತಿರುವ ಸಸಿಹಿತ್ಲು ಬೀಚ್‌ ಪ್ರದೇಶ ಅಭಿವೃದ್ಧಿಯಲ್ಲೂ ಮುಂಚೂಣಿಯಲ್ಲಿದ್ದರೂ ಇಲ್ಲಿನ ಬಸ್‌ ನಿಲ್ದಾಣ ಪ್ರದೇಶದ ರಸ್ತೆ ಮಾತ್ರ ಹೊಂಡ ಗುಂಡಿಗಳಿಂದ ಕೂಡಿದ್ದು ಇಲ್ಲಿ ರಸ್ತೆಯನ್ನು ಹುಡುಕಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ. ಸಸಿಹಿತ್ಲುವಿನ ಕೊನೆಯ ಸಂಪರ್ಕದ ಪ್ರದೇಶವಾಗಿರುವ ಮುಂಡ ಪ್ರದೇಶದಲ್ಲಿರುವ ಸಸಿಹಿತ್ಲು ಬಸ್‌ ನಿಲ್ದಾಣವೇ ಬೀಚ್‌ ಪ್ರದೇಶದ ಏಕೈಕ ಪ್ರಮುಖ ಸಂಪರ್ಕದ ರಸ್ತೆಯೂ ಆಗಿದೆ. ಡಾಮರು ರಸ್ತೆಯ ಅನಂತರ ಬೀಚ್‌ನ ಕಾಂಕ್ರೀಟ್‌ ರಸ್ತೆಯ ನಡುವಿನ ಸುಮಾರು 300 ಮೀ. ರಸ್ತೆಯಲ್ಲಿ ದೊಡ್ಡ ಗಾತ್ರ ಹೊಂಡಗಳು ನಿರ್ಮಾಣ ವಾಗಿವೆ. ವಾಹನ ಸವಾರರು ರಸ್ತೆಯಲ್ಲಿ ಸಂಚರಿಸಬೇಕಾದರೆ ಈ ಗುಂಡಿಗಳ ಮೂಲಕವೇ ಸಂಚರಿಸಬೇಕಾಗಿದೆ.

Advertisement

ಈ ರಸ್ತೆಯಲ್ಲಿಯೇ ಬಸ್ಸು, ಕಾರು ಇನ್ನಿತರ ಪ್ರವಾಸಿಗರ ವಾಹನಗಳು, ದ್ವಿಚಕ್ರ ವಾಹನಗಳೂ ಸಹ ಸಂಚರಿಸುತ್ತಿದ್ದು, ಮಳೆಗಾಲವಾದುದರಿಂದ ಹೊಂಡಗಳಲ್ಲಿ ನೀರು ತುಂಬಿದೆ. ಈ ಹೊಂಡಗಳಿಂದ ಕೆಲವೊಂದು ವಾಹನಗಳ ಕೆಳಭಾಗಕ್ಕೂ ಹಾನಿಯಾಗುತ್ತಿದೆ ಎಂದು ಪ್ರಯಾಣಿಕರು ಪತ್ರಿಕೆಯೊಂದಿಗೆ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಬೀಚ್‌ ನಿರ್ವಹಣೆ ಮಾಡುವ ಜಿಲ್ಲಾಡಳಿತವಾಗಲಿ ಅಥವಾ ಹಳೆಯಂಗಡಿ ಗ್ರಾಮ ಪಂಚಾಯತ್‌ ಆದರೂ ಕನಿಷ್ಠ ತಾತ್ಕಾಲಿಕವಾಗಿ ಹೊಂಡಗಳಿಗೆ ಮಣ್ಣು ತುಂಬಿಸಿದಲ್ಲಿ ಮಳೆಗಾಲದಲ್ಲಾದರೂ ರಕ್ಷಣೆ ನೀಡಿದಂತಾಗುತ್ತದೆ ಎಂದು ಪ್ರವಾಸಿಗರು ಸಲಹೆ ನೀಡುತ್ತಾರೆ.

‘ಸುನಾಮಿ ಯೋಜನೆಯಲ್ಲಿದೆ’
ಈ ಸಮಸ್ಯೆಯ ಬಗ್ಗೆ ಪಂಚಾಯತ್‌ನ ಬೀಚ್‌ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಎಚ್‌. ವಸಂತ ಬೆರ್ನಾಡ್‌ ಮಾತನಾಡಿ, ಶಾಸಕ ಕೆ. ಅಭಯಚಂದ್ರ ಅವರು ಸುನಾಮಿ ಯೋಜನೆಯಲ್ಲಿ ಮುಕ್ಕದಿಂದ ಸಸಿಹಿತ್ಲು ಪ್ರದೇಶದವರೆಗೆ ಹಳೆಯಂಗಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಈ ರಸ್ತೆಗೆ 3 ಕೋ. ರೂ. ವೆಚ್ಚದಲ್ಲಿ ಸಂಪೂರ್ಣವಾಗಿ ಕಾಂಕ್ರೀ ಟೀಕರಣಗೊಳಿಸುವ ಯೋಜನೆಯನ್ನು ರೂಪಿಸಿದ್ದು, ಮುಂದಿನ ಸೆಪ್ಟಂಬರ್‌ ತಿಂಗಳಿನಲ್ಲಿ ಕಾಮಗಾರಿ ಪ್ರಾರಂಭ ಆಗಬಹುದು. ಆಗ ಇಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next