Advertisement

ಚರಂಡಿ ಇಲ್ಲ, ಹೊಂಡಗಳೇ ಎಲ್ಲ ! ; ರಾಜ್ಯ ಹೆದ್ದಾರಿಯಲ್ಲಿ ಅಪಾಯದ ಪಯಣ

02:50 AM Jun 29, 2018 | Team Udayavani |

ಪುತ್ತೂರು: ಮಾಣಿ -ಮೈಸೂರು ರಾಜ್ಯ ಹೆದ್ದಾರಿ ಮೇಲ್ದರ್ಜೆಗೇರಿ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಗೊಂಡು ಪ್ರಕ್ರಿಯೆ ಚಾಲ್ತಿಯಲ್ಲಿದೆ. ಆದರೆ ರಾಜ್ಯ ಹೆದ್ದಾರಿಯಾಗಿರುವ ಸಂದರ್ಭದಲ್ಲಿ ಮೂರು ವರ್ಷಗಳ ಹಿಂದೆ ಪೂರ್ಣಗೊಂಡ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯ ಹುಳುಕುಗಳೇ ಇನ್ನೂ ಬಿಚ್ಚಿಕೊಳ್ಳುತ್ತಲೇ ಇವೆ. ಮಳೆಗಾಲದಲ್ಲಿ ಎಲ್ಲೆಲ್ಲೂ ರಸ್ತೆಯಲ್ಲೇ ಹರಿಯುವ ನೀರು, ಅಲ್ಲಲ್ಲಿ ದೊಡ್ಡ ಗಾತ್ರದ ಹೊಂಡಗಳು, ಅವುಗಳ ಸುತ್ತಲೂ ಅಪಾಯ ಸೂಚಿಸುವ ಕಲ್ಲುಗಳು. ಇವು ಹೆದ್ದಾರಿಯ ಅಲ್ಲಲ್ಲಿ ಕಂಡುಬರುತ್ತಿವೆ. ಸಾವಿರಾರು ವಾಹನಗಳು ಸಂಚರಿಸುವ ರಸ್ತೆಯಲ್ಲಿ ಆಗಾಗ ಟ್ರಾಫಿಕ್‌ ಜಾಮ್‌, ಅಪಘಾತದ ದೃಶ್ಯಗಳೂ ಗೋಚರಿಸುತ್ತವೆ.

Advertisement

ದರ್ಬೆಯಿಂದ ಕೌಡಿಚ್ಚಾರ್‌ ತನಕ 15 ಕಿ.ಮೀ. ದೂರವನ್ನು ಗಮನಿಸಿದರೂ ತೆಗೆದುಕೊಂಡರೂ 50ಕ್ಕೂ ಹೆಚ್ಚು ದೊಡ್ಡ ಗಾತ್ರದ ಹೊಂಡಗಳು ಹೆದ್ದಾರಿಯಲ್ಲಿವೆ. ದೊಡ್ಡ ಹೊಂಡಗಳಿಗೆ ವಾಹನಗಳು ಬಿದ್ದು ಅಪಘಾತಗಳು ಸಂಭವಿಸುತ್ತಿದೆ. ಪ್ರತಿ ವರ್ಷವೂ ಮಳೆಗಾಲದ ಆರಂಭದಲ್ಲೇ ಈ ಜಾಗಗಳಲ್ಲಿ ಹೊಸದಾಗಿ ಹೊಂಡಗಳು ದೊಡ್ಡ ಗಾತ್ರದ ಸೃಷ್ಟಿಯಾಗುತ್ತಿದ್ದು, ತಾತ್ಕಾಲಿಕ ದುರಸ್ತಿಯನ್ನಷ್ಟೇ ಮಾಡಲಾಗುತ್ತಿದೆ. ಮತ್ತೆ ಅದೇ ಹೊಂಡಗಳ ಕಥೆ-ವ್ಯಥೆ ಮುಂದುವರಿಯುತ್ತದೆ.


ರಸ್ತೆ ಸವೆತ

ಚರಂಡಿ ವ್ಯವಸ್ಥೆ ಕಲ್ಪಿಸದೆ ರಸ್ತೆಯಲ್ಲಿ ನೀರು ಹರಿಯುತ್ತಿರುವ ಕಾರಣ ಎಲ್ಲೆಡೆ ಡಾಮರಿನ ಸವೆತ ಉಂಟಾಗುತ್ತಿದೆ. ರಸ್ತೆಗೆ ಹೊಂದಿಕೊಂಡಂತೆ ನೀರು ಹರಿಯುವುದರಿಂದ ಡಾಮರು ಕುಸಿತವೂ ಉಂಟಾಗುತ್ತಿದೆ. ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಪೂರ್ತಿಗೊಂಡು ಮೂರು ವರ್ಷ ಕಳೆದರೂ ಸಮರ್ಪಕ ಚರಂಡಿ ಕಾಮಗಾರಿ ನಡೆಸದಿರುವ ಗುತ್ತಿಗೆದಾರ ಸಂಸ್ಥೆಯ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.


ಚರಂಡಿಯೇ ಇಲ್ಲ

ಮಾಣಿ – ಮೈಸೂರು ರಾಜ್ಯ ಹೆದ್ದಾರಿಯ ಪುತ್ತೂರು-ಸುಳ್ಯ ಮಧ್ಯೆ ಎಲ್ಲಿಯೂ ಸಮರ್ಪಕ ಚರಂಡಿ ವ್ಯವಸ್ಥೆ ಕಲ್ಪಿಸಿಲ್ಲ. ರಸ್ತೆ ಗುಣಮಟ್ಟ ರಕ್ಷಣೆಗಾಗಿ ಚರಂಡಿ ನಿರ್ಮಿಸಬೇಕೆಂಬ ಸಾರ್ವಜನಿಕ ಆಗ್ರಹಕ್ಕೂ ಮನ್ನಣೆ ಸಿಕ್ಕಿಲ್ಲ. ಹೀಗಾಗಿ, ಹೆದ್ದಾರಿಯಲ್ಲೇ ಅಪಾಯಕಾರಿಯಾಗಿ ನೀರು ಹರಿಯುತ್ತಿದೆ. ರಾತ್ರಿ ಸಮಯದಲ್ಲಂತೂ ಹೊಂಡಗಳನ್ನು ತಪ್ಪಿಸಿ ಸಂಚರಿಸುವುದೇ ದೊಡ್ಡ ಸಾಹಸ. ಸಂಬಂಧಪಟ್ಟವರನ್ನು ಎಚ್ಚರಿಸ ಬೇಕಾದ ಅಧಿಕಾರಿಗಳು, ಜನಪ್ರತಿನಿಧಿಗಳೂ ನಿರ್ಲಕ್ಷ್ಯಕ್ಕೆ ಮೌನ ವಹಿಸಿದ್ದರಿಂದ ಸಮಸ್ಯೆ ಹಾಗೆಯೇ ಉಳಿದಿದೆ.


ತತ್‌ ಕ್ಷಣ ಕಾಮಗಾರಿ

ಹೆದ್ದಾರಿಯಲ್ಲಿ ಉಂಟಾಗಿರುವ ಹೊಂಡಗಳನ್ನು ಮುಚ್ಚುವ ಕಾರ್ಯವನ್ನು ತತ್‌ಕ್ಷಣ ಆರಂಭಿಸಲಿದ್ದೇವೆ. ರಾಜ್ಯ ಹೆದ್ದಾರಿಯ ನಿರ್ವಹಣೆ ಕುರಿತಂತೆ ಸಂಬಂಧಪಟ್ಟ ಕಾಂಟ್ರಾಕ್ಟ್ ದಾರರಿಗೆ 2018ರ ಮಾರ್ಚ್‌ ತನಕ ನಿರ್ವಹಣೆಗೆ ಜವಾಬ್ದಾರಿ ಇತ್ತು. ಆದರೆ ಅದನ್ನು ವಿಸ್ತರಿಸಲಾಗಿದೆ. ಹೆದ್ದಾರಿ ಹಸ್ತಾಂತರಿಸುವ ಮೊದಲು ಸಮರ್ಪಕಗೊಳಿಸಿ ನೀಡುವಂತೆ ಸೂಚಿಸಲಾಗಿದೆ.
– ಲಿಂಗೇಗೌಡ, ಎಂಜಿನಿಯರ್‌, KRDCL

Advertisement


ಸುರಕ್ಷಿತವಲ್ಲ

ಚರಂಡಿ ವ್ಯವಸ್ಥೆ ಇಲ್ಲದ ಕಾರಣ  ಹೆದ್ದಾರಿ ಕೆರೆಯಂತಾಗುತ್ತದೆ. ಹೊಂಡಗಳೂ ಬಿದ್ದಿವೆ. ಹೆದ್ದಾರಿ ಅಭಿವೃದ್ಧಿಯಾದರೂ ಮಳೆಗಾಲದ ಸಂಚಾರ ಸುರಕ್ಷಿತವಾಗಿಲ್ಲ.
– ಶೈಲಜಾ ಅರಿಯಡ್ಕ, ಖಾಸಗಿ ಉದ್ಯೋಗಿ

ಅಸಮರ್ಪಕ
ಸಂಪ್ಯ ಜಂಕ್ಷನ್‌ ನಲ್ಲಿ ರಸ್ತೆಯಲ್ಲೇ ನೀರು ನಿಲ್ಲುತ್ತದೆ. ವಾಹನಗಳು ಹೋಗುವಾಗ ರಿಕ್ಷಾ ಪಾರ್ಕಿಂಗ್‌ ಮಾಡುವವರ ಮೇಲೆ ಕೆಸರು ನೀರು ಎರಚುತ್ತದೆ. ರಸ್ತೆ ಬದಿ ಚರಂಡಿಯೂ ಸಮರ್ಪಕವಾಗಿಲ್ಲದ ಕಾರಣ ಶಾಲಾ ಮಕ್ಕಳಿಗೂ ನಡೆದಾಡಲು ಅಪಾಯಕಾರಿಯಾಗಿದೆ.
– ಉಮ್ಮರ್‌ ಫಾರೂಕ್‌, ಸಂಪ್ಯ

— ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next