Advertisement
ಕೇರಳ ಸಂಪರ್ಕ ಹೇಗೆ?ಕೇರಳ – ಕರ್ನಾಟಕ ಸಂಪರ್ಕಕ್ಕಾಗಿ ಕೊಮ್ಮುಂಜೆಯಲ್ಲಿ 1 ಕೋಟಿ ರೂ.ಗಳ ಒಳಗಿನ ಅನುದಾನದ ಒಂದು ಬೃಹತ್ ಸೇತುವೆ ನಿರ್ಮಾಣಗೊಂಡಿದೆ. ಪರಿಣಾಮವಾಗಿ ಮಾಣಿಲದಿಂದ ಈ ರಸ್ತೆ ಮೂಲಕ ಕೇರಳದ ಪೈವಳಿಕೆ ಗ್ರಾಮದ ಕನಿಯಾಲವನ್ನು ಸಂಪರ್ಕಿಸಲು ಸಾಧ್ಯವಾಗುತ್ತದೆ. ಆ ಮೂಲಕ ಬಾಯಾರುಪದವು ಮಾರ್ಗವಾಗಿ ಕಾಸರಗೋಡು ಜಿಲ್ಲೆಯ ಉಪ್ಪಳವನ್ನು ಸೇರಲು ಸಾಧ್ಯ. ಇನ್ನೊಂದು ಮಾರ್ಗವಾಗಿ ಕನಿಯಾಲ, ಧರ್ಮತ್ತಡ್ಕ ಮೂಲಕ ಸೀತಾಂಗೋಳಿ, ಕುಂಬಳೆ ಸಂಪರ್ಕಿಸಲೂ ಸಾಧ್ಯವಾಗುತ್ತದೆ. ಬಾಯಾರುಪದವು ಮೂಲಕ ಮತ್ತೆ ಕರ್ನಾಟಕದ ಕರೋಪಾಡಿ- ಕನ್ಯಾನ ಗ್ರಾಮವನ್ನು ತಲುಪಲೂ ಸಾಧ್ಯವಾಗುತ್ತದೆ. ಈ ರಸೆ ಉದ್ದ ಕೇವಲ 5 ಕಿ.ಮೀ. ಆಗಿದ್ದರೂ ಪ್ರಯೋಜನ ಜಾಸ್ತಿ.
ಈ ರಸ್ತೆಗೆ ಹಲವು ಅನುದಾನಗಳು ಲಭಿಸಿವೆ. ಚಿಕ್ಕ ಚಿಕ್ಕ ಅನುದಾನಗಳು ಅಲ್ಲಲ್ಲಿ ರಸ್ತೆಯನ್ನು ಅಭಿವೃದ್ಧಿಪಡಿಸಿವೆ. ಸ್ವರ್ಣ ಗ್ರಾಮ ಯೋಜನೆಯಡಿಯಲ್ಲಿ 800 ಮೀ. ದೂರಕ್ಕೆ ಡಾಮರು ಹಾಕಲಾಗಿದೆ. 6 ಲಕ್ಷ ರೂ. ಅನುದಾನದಲ್ಲಿ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಮೂಲಕ ಪ. ವರ್ಗದ ಕಾಲನಿಯಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡಲಾಗಿದೆ. ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ.ಜಾ. ಕಾಲನಿ ಅಭಿವೃದ್ಧಿಯ ನೆಪದಲ್ಲಿ 10 ಲಕ್ಷ ರೂ. ಅನುದಾನ ಲಭಿಸಿದೆ. ದ.ಕ. ಜಿಲ್ಲಾ ಪಂಚಾಯತ್ ವತಿಯಿಂದ ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿಯಲ್ಲಿ 3.09 ಲಕ್ಷ ರೂ. ಅನುದಾನದಲ್ಲಿ 90 ಮೀ. ಕಾಂಕ್ರೀಟ್ ಕಾಮಗಾರಿ ನಡೆಸಲಾಗಿದೆ. ಈ ಎಲ್ಲ ಅನುದಾನಗಳಲ್ಲಿ ರಸ್ತೆ ಅಲ್ಲಲ್ಲಿ ಅಭಿವೃದ್ಧಿಯಾಗಿದೆ. ಮಧ್ಯೆ ಮಧ್ಯೆ ಅಭಿವೃದ್ಧಿಯಾಗದೆ ಕೆಸರು ರಸ್ತೆಯಾಗಿದೆ. ಆದುದರಿಂದ ರಸ್ತೆಯಿದ್ದೂ ಇಲ್ಲದಂತಾಗಿದೆ ಎನ್ನುತ್ತಾರೆ ನಿತ್ಯಸಂಚಾರಿಗಳು. ಹಲವರ ಸಹಕಾರ, ಪ್ರಯತ್ನದಿಂದ ನಿರ್ಮಾಣ
ಹಲವು ವರ್ಷಗಳ ಹಿಂದೆ ಮಂಡಲ ಪಂಚಾಯತ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಮುರುವ ನಡುಮನೆ ಮಹಾಬಲ ಭಟ್ ಮತ್ತು ಮಾಜಿ ಸದಸ್ಯ ವೆಂಕಪ್ಪ ನಾಯ್ಕ ಕೊಮ್ಮುಂಜೆ ಅವರು ಹಲವರ ಸಹಕಾರದಲ್ಲಿ ವಿಶೇಷವಾಗಿ ಈ ರಸ್ತೆ ನಿರ್ಮಾಣಕ್ಕೆ ಪ್ರಯತ್ನಿಸಿ, ಯಶಸ್ವಿಯಾದರು. ಅಂದು ಈ ರಸ್ತೆ ನಿರ್ಮಾಣಕ್ಕಾಗಿಯೇ ಓಟೆಪಡ್ಪು ಕ್ಷೇತ್ರಾಭಿವೃದ್ಧಿ ಸೇವಾ ವಿಶ್ವಸ್ಥ ನಿಧಿ ಎಂಬ ಸಂಘಟನೆ ಆರಂಭವಾಗಿತ್ತು. ಆ ಸಂಘಟನೆಯಲ್ಲಿ ಶ್ರೀಕೃಷ್ಣ ಭಟ್ ಬೊಳಿಂಜಡ್ಕ, ವೆಂಕಟಸುಬ್ಬರಾವ್ ಕೊಮ್ಮುಂಜೆ, ಗೋಪಾಲಕೃಷ್ಣ ಭಟ್ ರುಪಾಯಿಮೂಲೆ, ಕೊಂದಲಕೋಡಿ ರಾಮಚಂದ್ರ ಆಚಾರ್ಯ, ಗೋಪಾಲಕೃಷ್ಣ ಭಟ್ ಬೊಳಿಂಜಡ್ಕ, ಜನಾರ್ದನ ಓಟೆಪಡು³ ಮೊದಲಾದವರು ಒಟ್ಟಾಗಿ ಈ ರಸ್ತೆ ನಿರ್ಮಾಣಕ್ಕಾಗಿ ಹೋರಾಟ, ಶ್ರಮ ವಹಿಸಿದ್ದರು. ಶ್ರಮದಾನದ ಮೂಲಕವೇ ಈ ರಸ್ತೆ ನಿರ್ಮಾಣವಾಗಿರುವುದು ಕೂಡಾ ವಿಶೇಷವಾಗಿದೆ ಎನ್ನುತ್ತಾರೆ ಈ ಭಾಗದ ಹಿರಿಯರು.
Related Articles
120 ಮನೆಗಳಿಗೆ ಈ ರಸ್ತೆ ಅತ್ಯಂತ ಹೆಚ್ಚು ಉಪಯುಕ್ತ. ಓಟೆಪಡ್ಪು ಎಂಬಲ್ಲಿ ಕಿ.ಪ್ರಾ. ಶಾಲೆ, ಭಜನ ಮಂದಿರವಿದೆ. ನೆಕ್ಕರೆ, ಪಿಲಿಂಗುರಿ, ಬೊಳಿಂಜಡ್ಕ, ಓಟೆಪಡ್ಪು, ರುಪಾಯಿಮೂಲೆ, ಕೊಮ್ಮುಂಜೆ ಪ್ರದೇಶದ ಜನರು ಪಡಿತರ, ಸಾಮಗ್ರಿ ತರಲು ರಸ್ತೆಯಲ್ಲಿ 5 ಕಿ.ಮೀ. ನಡೆದೇ ಮುರುವ ತಲುಪಬೇಕು. ವಾಹನ ಸಂಚಾರವಿಲ್ಲ. ಕೆಸರು ರಸ್ತೆಯಲ್ಲಿ ನಡೆದಾಡಲಾಗುತ್ತಿಲ್ಲ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.
Advertisement
ಅನುದಾನ ಬರಲಿಪುತ್ತೂರು ಕ್ಷೇತ್ರದಲ್ಲಿ ಬಿಜೆಪಿಯ ಮಲ್ಲಿಕಾ ಪ್ರಸಾದ್ ಅವರು ಶಾಸಕರಾಗಿದ್ದ ಅವಧಿಯಲ್ಲಿ ಆ ರಸ್ತೆಗೆ ಬೃಹತ್ ಸೇತುವೆ ನಿರ್ಮಿಸಲಾಗಿದೆ. ಆ ರಸ್ತೆಯಲ್ಲಿ ಸಂಚಾರ ಕಷ್ಟವಾಗುತ್ತಿದೆ ಎಂದು ಸ್ಥಳೀಯರಾದ ವೆಂಕಪ್ಪ ನಾಯ್ಕ ಅವರೂ ಹೇಳಿದ್ದಾರೆ. ಸದ್ಯ ಅನುದಾನ ಬಿಡುಗಡೆಗೊಂಡಿಲ್ಲ. ಬಿಡುಗಡೆಯಾದ ಕೂಡಲೇ ಪ್ರಥಮ ಆದ್ಯತೆಯಲ್ಲಿ ಆ ರಸ್ತೆಯನ್ನು ಸುಸಜ್ಜಿತಗೊಳಿಸಲು ಪ್ರಯತ್ನಿಸುತ್ತೇನೆ.
– ಸಂಜೀವ ಮಠಂದೂರು, ಶಾಸಕರು, ಪುತ್ತೂರು — ಉದಯಶಂಕರ್ ನೀರ್ಪಾಜೆ