Advertisement

ಮುಳ್ಳಿಕಟ್ಟೆ –ಹಕ್ಲಾಡಿ ರಸ್ತೆಯುದ್ದಕ್ಕೂ ಹೊಂಡ –ಗುಂಡಿ

11:04 PM Nov 28, 2019 | Sriram |

ಹಕ್ಲಾಡಿ: ರಾಷ್ಟ್ರೀಯ ಹೆದ್ದಾರಿ 66ರ ಮುಳ್ಳಿಕಟ್ಟೆಯಿಂದ ಹಕ್ಲಾಡಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ 3-4 ಕಿ.ಮೀ. ರಸ್ತೆಯುದ್ದಕ್ಕೂ ಹೊಂಡ – ಗುಂಡಿಗಳಿದ್ದು, ವಾಹನ ಸವಾರರು ನಿತ್ಯ ಕಷ್ಟ ಪಟ್ಟು ಸಂಚರಿಸುವಂತಾಗಿದೆ. ನಿತ್ಯ ನೂರಾರು ವಾಹನಗಳು, ಸಾವಿರಾರು ಮಂದಿ ಅವಲಂಬಿಸಿರುವ ಪ್ರಮುಖ ರಸ್ತೆ ಇದಾಗಿದೆ.

Advertisement

ಮುಳ್ಳಿಕಟ್ಟೆಯಿಂದ ಗುಡ್ಡೆಯಂಗಡಿ, ಆಲೂರು, ಕಟ್ಟಿನಮಕ್ಕಿ, ಹಕೂìರು, ಬಂಟ್ವಾಡಿ, ಹಕ್ಲಾಡಿ, ನೂಜಾಡಿ ಹೀಗೆ ಹತ್ತಾರು ಊರುಗಳಿಗೆ ಕುಂದಾಪುರ ಮತ್ತಿತರ ಕಡೆಯಿಂದ ಸಂಚರಿಸಲು ಇರುವ ಮಾರ್ಗ ಇದೊಂದೇ ಆಗಿದೆ. ನಿತ್ಯ ಬೆಳಗ್ಗಿನಿಂದ ಸಂಜೆಯವರೆಗೆ ಹಲವು ಬಸ್‌ಗಳು ಸಂಚರಿಸುತ್ತವೆ. ಶಾಲಾ-ಖಾಸಗಿ ವಾಹನಗಳು ಕೂಡ ತೆರಳುತ್ತವೆ. ಆದರೆ ಹಲವಾರು ವರ್ಷಗಳಿಂದ ಈ ರಸ್ತೆ ಅಭಿವೃದ್ಧಿಯಾಗಿಲ್ಲ.

ಕೊಲ್ಲೂರು ಸಂಪರ್ಕ ರಸ್ತೆ
ಈ ರಸ್ತೆಯು ಕೊಲ್ಲೂರು ರಾಜ್ಯ ಹೆದ್ದಾರಿಯನ್ನು ಕೂಡ ಸಂಪರ್ಕಿಸುತ್ತದೆ. ಈ ಭಾಗದ ಜನರಿಗೆ ಪ್ರಮುಖ ಯಾತ್ರಸ್ಥಳವಾದ ಕೊಲ್ಲೂರು, ಮಾರಣಕಟ್ಟೆ ದೇವಸ್ಥಾನಗಳಿಗೆ ತೆರಳಲು ಇರುವ ಮುಖ್ಯ ರಸ್ತೆಯಾಗಿದೆ. ಹಕ್ಲಾಡಿ – ಚಿತ್ತೂರು – ನೂಜಾಡಿ ಮೂಲಕವಾಗಿ ಮಾರಣಕಟ್ಟೆ ಅಥವಾ ಆಲೂರು – ಚಿತ್ತೂರು – ಮಾರಣಕಟ್ಟೆಗೆ ಕೂಡ ಈ ಮಾರ್ಗದ ಮೂಲಕ ತೆರಳಬಹುದು. ಎರಡು ಕಡೆಗೂ ಸುಮಾರು 12-13 ಕಿ.ಮೀ. ಅಷ್ಟೇ ಅಂತರವಿದೆ.

ಬರೀ ಗುಂಡಿಗಳು…
ಹಲವು ವರ್ಷಗಳ ಹಿಂದೆಯೇ ಈ ರಸ್ತೆಗೆ ಡಾಮರೀಕರಣವಾಗಿದ್ದರೂ, ಕೆಲವು ವರ್ಷಗಳ ಹಿಂದೆ ಈ ರಸ್ತಯುದ್ದಕ್ಕೂ ಅನೇಕ ಕಡೆಗಳಲ್ಲಿ ಹೊಂಡ, ಗುಂಡಿಗಳು ಕಾಣಿಸಿಕೊಂಡಿವೆ. ಅದರಲ್ಲೂ ಕೆಲವೆಡೆಗಳಲ್ಲಿ ಅಂತೂ ಡಾಮರೇ ಇಲ್ಲವಾಗಿದ್ದು, ರಸ್ತೆಯ ಮಧ್ಯೆ ಬರೀ ಗುಂಡಿಗಳೇ ಇವೆ. ವಾಹನ ಸವಾರರು ಸರ್ಕಸ್‌ ಮಾಡಿಕೊಂಡು ಸಂಚರಿಸುವ ದುಃಸ್ಥಿತಿಯಿದೆ. ಇನ್ನೂ ಆಂಬುಲೆನ್ಸ್‌ ಅಥವಾ ಮತ್ತಿತರ ವಾಹನಗಳಲ್ಲಿ ರೋಗಿಗಳನ್ನು, ಹಿರಿಯರನ್ನು ಕರೆದುಕೊಂಡು ಹೋಗಲು ತುಂಬಾ ಕಷ್ಟವಾಗುತ್ತಿದೆ ಎನ್ನುವುದು ಇಲ್ಲಿನ ರಿಕ್ಷಾ ಚಾಲಕರೊಬ್ಬರ ಅಭಿಪ್ರಾಯ.

ಈ ಬಾರಿಯಾದರೂ ದುರಸ್ತಿಯಾಗಲಿ
ಅನೇಕ ವರ್ಷಗಳಿಂದ ಈ ರಸ್ತೆಗೆ ಮರು ಡಾಮರು ಕಾಮಗಾರಿ ಯಾಗಿಲ್ಲ. ಮುಳ್ಳಿಕಟ್ಟೆಯಿಂದ ಹಕ್ಲಾಡಿ ಕಡೆಗೆ ಸಂಚರಿಸುವ ರಸ್ತೆ, ಅದರಲ್ಲೂ ಅಲ್ಲಿನ ಹಾಲಿನ ಡೈರಿಯಿಂದ ಮುಂದಕ್ಕೆ ರಸ್ತೆಯ ಲ್ಲಂತೂ ಸಂಚರಿಸಲು ಸಾಧ್ಯವಿಲ್ಲದಂತಾಗಿದೆ. ಆಲೂರು ಕಡೆಗೆ ಹೋಗುವ ರಸ್ತೆ ಚೆನ್ನಾಗಿದೆ. ಸುಮಾರು 3 ಕಿ.ಮೀ. ರಸ್ತೆಯುದ್ದಕ್ಕೂ ಗುಂಡಿಗಳಿದ್ದು, ಈ ಬಾರಿಯಾದರೂ ಸಂಬಂಧಪಟ್ಟವರು ದುರಸ್ತಿಗೆ ಮುಂದಾಗಲಿ.
– ರಜತ್‌ ಹಕ್ಲಾಡಿ, ಸ್ಥಳೀಯರು

Advertisement

ಕಾಮಗಾರಿ ಆರಂಭ
ಮುಳ್ಳಿಕಟ್ಟೆಯಿಂದ ಹಕ್ಲಾಡಿಗೆ ಸಂಚರಿಸುವ ರಸ್ತೆಯಲ್ಲಿ ಹಕ್ಲಾಡಿ ಹಾಲಿನ ಡೈರಿಯಿಂದ ಮುಂದಕ್ಕೆ ಶಾಲೆಯವರೆಗಿನ ರಸ್ತೆಯ ಡಾಮರು ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯಿಂದ ಈಗಾಗಲೇ 50 ಲಕ್ಷ ರೂ. ಮಂಜೂರು ಮಾಡಿಸಲಾಗಿದ್ದು, ಈಗಾಗಲೇ ಗುದ್ದಲಿ ಪೂಜೆಯನ್ನು ಕೂಡ ಮಾಡಲಾಗಿದೆ. ಶೀಘ್ರ ಕಾಮಗಾರಿ ಕೂಡ ಆರಂಭವಾಗಲಿದೆ.
-ಬಿ.ಎಂ. ಸುಕುಮಾರ್‌ ಶೆಟ್ಟಿ, ಬೈಂದೂರು ಶಾಸಕರು

-ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next