ಬೆಂಗಳೂರು: ಮಳೆ ನಿಂತು ಹೋದ ಮೇಲೆ ಸಿಲಿಕಾನ್ ಸಿಟಿಯ ಕೆಲವೆಡೆ ಗುಂಡಿ ಬೀಳುವ ಘಟನೆಗಳು ಆಗಾಗ್ಗೆ ಅಲ್ಲಲ್ಲಿ ನಡೆಯುತ್ತಿವೆ. ಜತೆಗೆ ರಸ್ತೆ ಬದಿ ಇರುವ ಮ್ಯಾನ್‌ಹೋಲ್‌ಗಳು ಕೂಡ ಪದೇ ಪದೆ ಉಕ್ಕಿಹರಿಯುವ ಸ್ಥಿತಿಯಲ್ಲಿದ್ದು ಜನರಲ್ಲಿ ಆತಂಕ ಮೂಡಿಸಿದೆ. ಕಳಪೆ ಕಾಮಗಾರಿ ಹಿನ್ನೆಲೆಯಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ ಎಂಬ ಆರೋಪ ಸಾರ್ವಜನಿಕರದ್ದಾಗಿದೆ.
ಭಾರೀ ಮಳೆಯ ಹಿನ್ನೆಲೆ ಇತ್ತೀಚೆಗಷ್ಟೇ ಬಿಟಿಎಂ ಲೇಔಟ್‌ನ ಮೈಕೋ ಲೇಔಟ್ ಪೊಲೀಸ್ ಠಾಣೆ ಬಳಿ ದಿಢೀರ್ ಎಂದು ರಸ್ತೆ ಕುಸಿದಿತ್ತು. ಸುಮಾರು ನಾಲ್ಕೈದು ಅಡಿಯಷ್ಟು ಸುರಂಗ ರೀತಿಯಲ್ಲಿ ಕುಸಿದಿತ್ತು. ಮಳೆ ಬಂದಾಗ ಸಣ್ಣ ಹಳ್ಳ ಬಿದ್ದಿತ್ತು. ಆದರೆ ಬರುಬರುತ್ತಾ ದೊಡ್ಡಗಾತ್ರದ ಸುರಂಗದ ರೂಪವಾಗಿ ಮಾರ್ಪಾಟು ಹೊಂದಿತು. ರಸ್ತೆ ಮಧ್ಯೆಯೇ ಗುಂಡಿಬಿದ್ದ ಹಿನ್ನೆಲೆಯಲ್ಲಿ ಬೈಕ್ ಮೇಲೆ ಸಾಗುತ್ತಿದ್ದ ಮಹಿಳೆ ಮತ್ತು ಪುರುಷರು ಗುಂಡಿಗೆ ಬಿದ್ದಿದ್ದರು. ಆದರೆ ಯಾವುದೇ ಅಪಾಯವಾಗಲಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.
ಕಳೆದ ಒಂದು ತಿಂಗಳ ಹಿಂದೆಯಷ್ಟೇ ಬಿಬಿಎಂಪಿ ಇಲ್ಲಿ ರಸ್ತೆ ಕಾಮಗಾರಿ ಮಾಡಿತ್ತು. ಕಳಪೆ ಕಾಮಗಾರಿಯೇ ಇದಕ್ಕೆ ಕಾರಣವಾಗಿದೆ ಎಂದು ದೂರುತ್ತಾರೆ. ಗುಂಡಿ ಬಿದ್ದ ತಕ್ಷಣ ತಾತ್ಕಾಲಿಕ ವ್ಯವಸ್ಥೆಗೆ ಪಾಲಿಕೆ ಸಿಬ್ಬಂದಿ ಮೊರೆ ಹೋಗುತ್ತಾರೆ. ಗುಂಡಿಬಿದ್ದ ಸ್ಥಳದಲ್ಲಿ ಮಣ್ಣು ಮುಚ್ಚಿ ಜಾಗ ಖಾಲಿ ಮಾಡುತ್ತಾರೆ. ಆದರೆ ಯಾವ ಕಾರಣದ ಹಿನ್ನೆಲೆಯಲ್ಲಿ ಗುಂಡಿಬಿದಿದ್ದೆ ಎಂಬುವುದನ್ನು ಪಾಲಿಕೆ ಹಿರಿಯ ಅಧಿಕಾರಿಗಳು ಗಮನಿಸುವುದಿಲ್ಲ. ಕಳಪೆ ಡಾಂಬರಿಕಾರಣ ಕಾಮಗಾರಿಯೇ ಇದಕ್ಕೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಇತ್ತೀಚೆಗಷ್ಟೇ ನಗರದ ಮಹಾಲಕ್ಷ್ಮೀ ಲೇಔಟ್ ಮುಖ್ಯ ರಸ್ತೆ ಸಪ್ತಗಿರಿ ಕಲ್ಯಾಣ ಮಂಟಪದ ಬಳಿ ರಸ್ತೆ ಕುಸಿತವಾಗಿತ್ತು. ಬಿಬಿಎಂಪಿ ಕಳಪೆ ಕಾಮಗಾರಿ ಹಿನ್ನೆಲೆಯಲ್ಲಿ ರಸ್ತೆ ಕುಸಿತ ನಡೆದಿತ್ತು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಜಲಮಂಡಳಿ ಪೈಪ್‌ಲೈನ್ ಹಾದು ಹೋಗಿರುವ ರಸ್ತೆಗೆ ಬಿಬಿಎಂಪಿ ಟಾರ್ ಹಾಕಿತ್ತು. ಕೇವಲ ಎರಡು ದಿನದಲ್ಲೇ ಆ ರಸ್ತೆ ಕುಸಿದು ಬಿದ್ದಿತ್ತು. ಪೈಪ್‌ಲೈನ್ ಕಟ್ ಆಗಿ ನೀರು ಸೋರಿದ ಹಿನ್ನೆಲೆಯಲ್ಲಿ ರಸ್ತೆ ಕುಸಿತವಾಗಿತ್ತು ಎಂದು ಪ್ರತ್ಯೇಕ ದರ್ಶಿಗಳು ಹೇಳುತ್ತಾರೆ.
ರಸ್ತೆ ಗುಂಡಿಗಳಿಗೆ ಅವೈಜ್ಞಾನಿಕ ಕಾರಣ?: ರಸ್ತೆಗಳನ್ನು ನಿರ್ಮಾಣ ಮಾಡುವಾಗ ಸರಿಯಾದ ಯೋಜನೆ ಮತ್ತು ವಿನ್ಯಾಸ ಮಾಡಿಕಟ್ಟಬೇಕು. ಸುಮ್ಮನೆ ಮಣ್ಣಿನ ಮೇಲೆ ಡಾಂಬರು ಹಾಕಿ ಹೋದರೆ ಅದು ಮುಂದೆ ಹಲವು ಅನಾಹುತಗಳಿಗೆ ಕಾರಣವಾಗಲಿದೆ ಎಂದು ರಸ್ತೆ ತಜ್ಞರು ಎಚ್ಚರಿಸುತ್ತಾರೆ. ಹೊಸ ರಸ್ತೆ ಮಾಡುವಾಗ ಮಣ್ಣು ತೆಗೆದು ಆಳಮಾಡಿ ಕೆಳಗಿನಿಂದ ಕಲ್ಲುಗಳನ್ನು ತುಂಬಿಸಿಕೊಂಡು ಬರುತ್ತಾರೆ. ಬೇಸ್ ಕೋರ್ಸ್ ಆದ ಮೇಲೆ ಜಲ್ಲಿಕಲ್ಲು ಹಾಕಿ ಆ ನಂತರ ಟಾಪ್ ಲೇಯರ್ ಹಾಕುತ್ತಾರೆ. ಈ ಮೂರು ಲೇಯರ್ ಗಳು ಚೆನ್ನಾಗಿದ್ದರೆ ರಸ್ತೆಗಳು ಚೆನ್ನಾಗಿರುತ್ತವೆ. ಆದರೆ ಯಾರೋ ಗಣ್ಯವ್ಯಕ್ತಿಗಳು ಬರುತ್ತಾರೆ ಎಂದೋ ದಿಢೀರ್ ಆಗಿ ಒಂದೇ ಪದರಿನ ಮೇಲಷ್ಟೇ ಟಾರ್ ಹಾಕಿ ಬಣ್ಣ ಬಳಿದರೆ ರಸ್ತೆ ಕುಸಿದು ಬೀಳುತ್ತವೆ ಎಂದು ರಸ್ತೆ ಮತ್ತು ಮೂಲಸೌಕರ್ಯ ತಜ್ಞ ಪ್ರೊ. ಶ್ರೀಹರಿ ಹೇಳುತ್ತಾರೆ.
ಬಿಟುಮಿನಸ್ (Bituminous) ಅಥವಾ (ಬ್ಲಾಕ್ ಟಾಪ್)ಪ್ಯೂರ್ ಆಗಿರುವುದು ಸುಲಭವಾಗಿ ಸಿಗುವುದಿಲ್ಲ. ಗಲ್ಫ್ ರಾಷ್ಟ್ರಗಳಲ್ಲಿ ಶುದ್ಧವಾದ ಬಿಟುಮಿನಸ್ ಹೇರಳವಾಗಿ ದೊರಕುತ್ತದೆ. ಆದರೆ ಅದರ ಬಳಕೆ ದುಬಾರಿಯಾಗಿದೆ. ರಸ್ತೆಯ ಲೇಯರ್‌ಗಳು ಒಂದಕ್ಕೊಂದು ಬಾಂಡ್‌ಆಗಿ ಹಿಡಿದಿಟ್ಟುಕೊಳ್ಳಬೇಕಾದರೆ ಹೆಚ್ಚಿನ ಪ್ರಮಾಣದಲ್ಲಿ ಬಿಟುಮಿನಸ್ ಹಾಕಬೇಕು. ಸುಮಾರು 10 ವರ್ಷಗಳಷ್ಟು ಬಾಳಿಕೆ ಬೇಕಾದರೆ ಶೇ 5.5ರಷ್ಟು ಮೆಟರಿಯಲ್‌ನಲ್ಲಿ ಬಿಟುಮಿನಸ್ ಇರಬೇಕು. ಆದರೆ ನಮ್ಮೆಲ್ಲಿ ಕೇವಲ ಶೇ.2.2ರಷ್ಟು ಹಾಕುವ ಸಾಧ್ಯತೆ ಕೂಡ ಇರುತ್ತದೆ. ಇದು ಕಳಪೆ ಕಾಮಗಾರಿಗೆ ಕಾರಣವಾಗುತ್ತದೆ ಎಂದು ಹೇಳುತ್ತಾರೆ.
ಕೆಲವು ಕಡೆ ರಸ್ತೆ ಕುಸಿತವಾಗಿರುವುದು, ರಂಧ್ರ ಬಿದ್ದಿರುವಂತಹ ಘಟನೆಗಳು ನಡೆದಿರುವುದು ಬೆಳಕಿಗೆ ಬಂದಿದೆ. ಜಲಮಂಡಳಿಯ ಪೈಪ್‌ಲೈನ್ ನಿಂದ ನೀರು ಹರಿದ ಹಿನ್ನೆಲೆಯಲ್ಲಿ ಕೆಲವು ಘಟನೆಗಳು ಆಗಿವೆ. ರಂಧ್ರಬಿದ್ದಿರುವ ಕಡೆಗಳಲ್ಲಿ ಪಾಲಿಕೆ ಸಿಬ್ಬಂದಿ ಭೇಟಿ ನೀಡಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
-ಹೆಸರು ಹೇಳಲು ಇಚ್ಛಿಸದ ಪಾಲಿಕೆಯ ಹಿರಿಯ ಎಂಜಿನಿಯರ್
-ದೇವೇಶ ಸೂರಗುಪ್ಪ