Advertisement

ರಸ್ತೆ ದುರವಸ್ಥೆ: ಸಂಚಾರಕ್ಕೆ ಸಂಚಕಾರ

02:57 PM Nov 06, 2021 | Team Udayavani |

ಚಿಕ್ಕಮಗಳೂರು: ನಗರದ ಬಹುತೇಕ ರಸ್ತೆಗಳು ಹೊಂಡ-ಗುಂಡಿ ಬಿದ್ದು ದುಸ್ಥಿತಿಯಲ್ಲಿದ್ದು, ವಾಹನ ಸವಾರರು ಮತ್ತು ಪಾದಚಾರಿಗಳು ನಿತ್ಯ ಪರದಾಡುವಂತಾಗಿದೆ. ಮಳೆಗಾಲದಲ್ಲಿ ಈ ಗುಂಡಿಗಳಲ್ಲಿ ನೀರು ತುಂಬಿ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದು ಎಚ್ಚರ ತಪ್ಪಿದರೆ ಅನಾಹುತಕ್ಕೆ ಎಡೆ ಮಾಡಿಕೊಡುವಂತಾಗಿದೆ.

Advertisement

ಚಿಕ್ಕಮಗಳೂರು ನಗರ 35 ವಾರ್ಡ್‌ಗಳನ್ನು ಹೊಂದಿದ್ದು, ನಗರದ ಮುಖ್ಯ ರಸ್ತೆಗಳು ಸೇರಿದಂತೆ ಬಹುತೇಕ ರಸ್ತೆಗಳು ಮತ್ತು ಗಲ್ಲಿರಸ್ತೆಗಳು ಗುಂಡಿ ಗಟಾರಗಳಿಂದ ಕೂಡಿದ್ದು, ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಗುಂಡಿ ಗಟಾರಗಳನ್ನು ಮುಚ್ಚಲು ಸಂಬಂಧಪಟ್ಟ ಇಲಾಖೆ ಮುಂದಾಗದಿರುವುದರಿಂದ ವಾಹನ ಸವಾರರು ಪ್ರತಿ ನಿತ್ಯ ಪರದಾಡುವ ಪರಿಸ್ಥಿತಿ ಎದುರಾಗಿದೆ. ನಗರದಲ್ಲಿ ಅಮೃತ್‌ ಯೋಜನೆ ಕಾಮಗಾರಿ ನಡೆಯುತ್ತಿರುವುದರಿಂದ ರಸ್ತೆಗಳನ್ನು ಅಗೆದು ಪೈಪ್‌ಗಳನ್ನು ಅಳವಡಿಸಿದ್ದು, ರಸ್ತೆ ಅಗೆದು ಅದನ್ನು ಸರಿಯಾಗಿ ದುರಸ್ತಿ ಮಾಡದಿರುವುದರಿಂದ ರಸ್ತೆಗಳು ಗುಂಡಿಮಯವಾಗಿವೆ.

ಅಮೃತ್‌ ಯೋಜನೆ ಪೂರ್ಣಗೊಂಡ ಬಳಿಕ ರಸ್ತೆ ದುರಸ್ತಿ ಕಾರ್ಯ ಪೂರ್ಣಗೊಳಿಸುವುದಾಗಿ ಸಂಬಂಧಪಟ್ಟ ಇಲಾಖೆ ಹೇಳುತ್ತಿದೆ. ಆದರೆ, ಅಮೃತ್‌ ಯೋಜನೆ ಅಮೆಗತಿಯಲ್ಲಿ ಸಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಗುಂಡಿಮಯವಾದ ರಸ್ತೆಗಳಿಗೆ ಮುಕ್ತಿ ಯಾವಾಗ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ. ನಗರದಲ್ಲಿ ಒಳಚರಡಿ ಕಾಮಗಾರಿಯೂ ಅನೇಕ ವರ್ಷಗಳಿಂದ ಮಂದಗತಿಯಲ್ಲಿ ಸಾಗುತ್ತಿದ್ದು, ಒಳಚರಂಡಿ ಕಾಮಗಾರಿ ದುರಸ್ತಿಗಾಗಿ ಈ ಹಿಂದೆ ಸುಸಜ್ಜಿತವಾಗಿದ್ದ ರಸ್ತೆಗಳನ್ನು ಅಗೆದು ಹಾಳು ಮಾಡಲಾಗಿದ್ದು, ಅದನ್ನು ಸರಿಯಾಗಿ ಮುಚ್ಚದಿದ್ದರಿಂದ ಕೆಲವು ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು ದೊಡ್ಡ ಗುಂಡಿಗಳಾಗಿ ಮಾರ್ಪಟ್ಟಿವೆ.

ಇನ್ನು ಒಳಚರಂಡಿ ಪೈಪ್‌ಲೈನ್‌ ಗಳನ್ನು ಕೆಲವು ರಸ್ತೆಗಳ ಮಧ್ಯ ಭಾಗದಲ್ಲಿ ಕೊಂಡೊಯ್ಯಲಾಗಿದೆ ಹಾಗೂ ರಸ್ತೆ ಮಧ್ಯೆ ಭಾಗದಲ್ಲಿ ರಸ್ತೆ ಮಟ್ಟಕ್ಕಿಂತ ಎತ್ತರವಾಗಿ ಚೇಂಬರ್‌ಗಳ ನಿರ್ಮಾಣ ಮಾಡಿರುವುದರಿಂದ ಭಾರೀ ಮಳೆಯಾದ ಸಂದರ್ಭದಲ್ಲಿ ನೀರು ಈ ಚೇಂಬರ್‌ ಗಳ ಮೂಲಕ ಉಕ್ಕಿ ಹರಿದು ರಸ್ತೆಗಳಿಗೆ ಹಾನಿಯಾಗುತ್ತಿದೆ. ಕೇಬಲ್‌ ಅಳವಡಿಕೆಗೆ ಕೆಲವು ಕಡೆಗಳಲ್ಲಿ ರಸ್ತೆಗಳನ್ನು ಅಗೆದಿದ್ದು, ಅದನ್ನು ಸರಿಯಾಗಿ ಮುಚ್ಚದಿದ್ದರಿಂದ ಗುಂಡಿ ಗಟಾರಗಳಾಗಿ ಮಾರ್ಪಟ್ಟಿದೆ. ಅಲ್ಲಲ್ಲಿ ಕಟ್ಟಡ ಕಾಮಗಾರಿಗಳು ನಡೆಯುತ್ತಿದ್ದು ಭಾರೀ ಗಾತ್ರದ ಲಾರಿಗಳು ಸಂಚರಿಸುತ್ತಿರುವುದರಿಂದ ರಸ್ತೆಗಳು ಗುಂಡಿ ಬೀಳಲು ಕಾರಣವಾಗುತ್ತಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಕಡೂರು- ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾರ್ಯ ನಡೆಯುತ್ತಿದೆ.

ಬೈಪಾಸ್‌ ರಸ್ತೆ ದುರಸ್ತಿ ಕಾರ್ಯ ನಡೆಯುತ್ತಿದ್ದು, ರಸ್ತೆ ಕಾಮಗಾರಿಯಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಇದನ್ನು ತಪ್ಪಿಸಲು ಸವಾರರು ಅಡ್ಡರಸ್ತೆಗಳಲ್ಲಿ ಮತ್ತು ಗಲ್ಲಿ ರಸ್ತೆಗಳಲ್ಲಿ ಸಂಚರಿಸಲು ಮುಂದಾದರೆ ರಸ್ತೆಗಳಲ್ಲಿ ಗುಂಡಿ ಗಟಾರಗಳು ಸವಾರರಿಗೆ ಕಿರಿಕಿರಿಯನ್ನುಂಟು ಮಾಡುತ್ತಿವೆ. ರಸ್ತೆಗಳಲ್ಲಿ ಗುಂಡಿಗಟಾರಗಳಿಂದ ಕೂಡಿರುವುದರಿಂದ ಮಳೆಗಾಲದ ಸಂದರ್ಭದಲ್ಲಿ ಈ ಗುಂಡಿಗಳಲ್ಲಿ ನೀರು ತುಂಬಿಕೊಂಡು ವಾಹನ ಸವಾರರು ಮತ್ತು ಪಾದಚಾರಿಗಳು ಭಾರೀ ತೊಂದರೆ ಅನುಭವಿಸುವಂತಾಗಿದೆ. ಹಾಗೂ ಎಚ್ಚರ ತಪ್ಪಿದರೆ ಅನಾಹುತ ಸಂಭವಿಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

Advertisement

ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆ ರಸ್ತೆಗಳಲ್ಲಿನ ಗುಂಡಿಗಟಾರಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ ನಗರದ ಬಹುತೇಕ ರಸ್ತೆಗಳು ಸುಸ್ಥಿತಿಯಲ್ಲಿಲ್ಲ. ಗುಂಡಿಗಳಿಂದ ಕೂಡಿದ್ದು, ಇದುವರೆಗೂ ರಸ್ತೆ ರಿಪೇರಿಗೆ ತಂದ ಅನುದಾನ ಏನಾಯಿತು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

ಬಹುತೇಕ ರಸ್ತೆ ನಿರ್ಮಾಣ ಕಾಮಗಾರಿ ಕಳಪೆಯಿಂದ ಕೂಡಿದ್ದು, ಗುಂಡಿ ಗಟಾರಗಳು ಕೂಡಿರಲು ಕಾರಣವಾಗಿದೆ. ಸಂಬಂಧಪಟ್ಟ ಇಲಾಖೆ ಗುಂಡಿಮುಕ್ತ ರಸ್ತೆಗಳ ನಿರ್ಮಾಣ ಮಾಡುವ ಮೂಲಕ ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸುತ್ತೇನೆ. -ಹಿರೇಮಗಳೂರು ಪುಟ್ಟಸ್ವಾಮಿ, ನಗರಸಭೆ ಮಾಜಿ ಸದಸ್ಯ

ರಸ್ತೆ ಅಭಿವೃದ್ಧಿಗೆ 10 ಕೋಟಿ ವಿಶೇಷ ಅನುದಾನ, ನಗರೋತ್ಥಾನ ಯೋಜನೆಯಡಿ ಆರೂವರೆ ಕೋಟಿ ರೂ. ಸೇರಿದಂತೆ 21 ರಿಂದ 22ಕೋಟಿ ರೂ. ಕಾಮಗಾರಿ ಬಾಕಿ ಇದ್ದು ಮಳೆ ಕ್ಷೀಣಿಸಿದ ತಕ್ಷಣ ರಸ್ತೆ ಕಾಮಗಾರಿ ಆರಂಭಿಸಲಾಗುವುದು. -ಬಿ.ಸಿ. ಬಸವರಾಜ್‌, ನಗರಸಭೆ ಆಯುಕ್ತ

-ಸಂದೀಪ ಜಿ.ಎನ್‌. ಶೇಡ್ಗಾರ್‌

Advertisement

Udayavani is now on Telegram. Click here to join our channel and stay updated with the latest news.

Next