Advertisement

ರಸ್ತೆಯ ಹೊಂಡ-ಗುಂಡಿಯಿಂದ ಸವಾರರಿಗೆ ಸಂಕಷ್ಟ!

08:28 PM Sep 22, 2021 | Team Udayavani |

ಮಹಾನಗರ: ಸ್ಮಾರ್ಟ್‌ ಸಿಟಿಯಾಗಿ ರೂಪುಗೊಳ್ಳುತ್ತಿರುವ ಮಂಗಳೂರು ನಗರದ ಬಹುತೇಕ ಮುಖ್ಯ ರಸ್ತೆಗಳಿಗೆ ಕಾಂಕ್ರೀಟ್‌ ಹಾಕಲಾಗಿದ್ದರೂ ಕೆಲವೊಂದು ವಾರ್ಡ್‌ಗಳಲ್ಲಿ ಒಳರಸ್ತೆಗಳು, ಡಾಮರು ರಸ್ತೆಗಳಿನ್ನೂ ಅಭಿವೃದ್ಧಿ ಕಂಡಿಲ್ಲ. ಕೆಲವೆಡೆ ರಸ್ತೆಯ ತುಂಬಾ ಗುಂಡಿ ಬಿದ್ದಿದ್ದು, ಅನುದಾನದ ಕೊರತೆಯಿಂದಾಗಿ ಆ ರಸ್ತೆಗಳಿಗೆ ಡಾಮರು ಭಾಗ್ಯ ದೊರಕಿಲ್ಲ.

Advertisement

ನಗರದಲ್ಲಿ ಕೆಲವೊಂದು ರಸ್ತೆ ಕಾಮಗಾರಿಗೆ ಈಗಾಗಲೇ ಗುದ್ದಲಿಪೂಜೆ ನೆರವೇರಿದ್ದರೂ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಕೆಲವೆಡೆ, ಗುಂಡಿ ಬಿದ್ದ ರಸ್ತೆಗೆ ಆಗಿಂದಾಗ್ಗೆ ತೇಪೆ ಹಚ್ಚುತ್ತಿದ್ದರೂ ಮತ್ತದೇ ಸಮಸ್ಯೆ ತಲೆದೋರುತ್ತಿದೆ. ಅಂತಹ ರಸ್ತೆಗಳಿಗೆ ಕಾಂಕ್ರೀಟ್‌ ಹಾಕುವ ಆವಶ್ಯಕತೆ ಇದೆ. ನಗರದಲ್ಲಿ ಈಗಾಗಲೇ ಮಳೆಯ ತೀವ್ರತೆ ಕಡಿಮೆಯಾಗಿದ್ದು, ಒಳ ರಸ್ತೆಗಳು ಎಲ್ಲೆಲ್ಲಿ ಗುಂಡಿ ಬಿದ್ದಿವೆ ಎಂದು ಗುರುತಿಸಿ, ಅವುಗಳ ದುರಸ್ತಿಗೆ ಆದ್ಯತೆ ನೀಡಬೇಕಿದೆ.

ನಗರದ ಪ್ರಮುಖ ಭಾಗವಾದ ಬಿಜೈಯಿಂದ ಕೊಟ್ಟಾರ ಸಂಪರ್ಕಿತ ಒಳರಸ್ತೆ ಕಾಪಿಕಾಡ್‌, ಕೊಟ್ಟಾರ ಕ್ರಾಸ್‌, ದಡ್ಡಲಕಾಡು ಮುಖೇನ ಕೊಟ್ಟಾರ ಬಸ್‌ ತಂಗುದಾಣ ತಲುಪುತ್ತದೆ. ಲಾಲ್‌ಬಾಗ್‌ನಿಂದ ಮುಖ್ಯ ರಸ್ತೆಯಾಗಿ ಕೊಟ್ಟಾರ ಸಂಪರ್ಕಕ್ಕೆ ಟ್ರಾಫಿಕ್‌ ಜಾಂ ಉಂಟಾದ ವೇಳೆ ಅನೇಕ ಮಂದಿ ವಾಹನ ಸವಾರರು ಈ ಒಳರಸ್ತೆಯಲ್ಲೇ ಬರುತ್ತಾರೆ. ಇನ್ನು, ರಾಷ್ಟ್ರೀಯ ಹೆದ್ದಾರಿಯಿಂದಲೂ ಈ ರಸ್ತೆಗೆ ಸಂಪರ್ಕಿಸಲು ಸಾಧ್ಯವಿದೆ. ಈ ರಸ್ತೆಯಲ್ಲಿ ದಡ್ಡಲಕಾಡು ಬಳಿಯ ಪ್ರತೀ ಬಾರಿ ಗುಂಡಿ ಬಿದ್ದು ಸಮಸ್ಯೆ ಉಂಟಾಗುತ್ತಿದೆ. ಲಕ್ಷಾಂತರ ರೂ. ಖರ್ಚು ಮಾಡಿ ಅನೇಕ ಬಾರಿ ಡಾಮರು ಹಾಕಲಾಗಿದೆ. ಆದರೆ ಡಾಮರು ಹಾಕಿದ ಕೆಲವೇ ದಿನಗಳಲ್ಲಿ ಮತ್ತೆ ಗುಂಡಿ ಬೀಳುತ್ತಿದೆ.

ಮಂಗಳೂರಿನ ಒಳ ರಸ್ತೆಗಳಲ್ಲಿ ಸದಾ ಟ್ರಾಫಿಕ್‌ನಿಂದ ಕೂಡಿರುವ ಜಿ.ಟಿ. ರಸ್ತೆ ಪೂರ್ತಿ ಹಾಳಾಗಿದ್ದು, ಗುಂಡಿ ಬಿದ್ದಿದೆ. ಇದೇ ರಸ್ತೆಯಲ್ಲಿ ಶರವು ಶ್ರೀ ಮಹಾಗಣಪತಿ ದೇವಸ್ಥಾನ, ಬ್ಯಾಂಕ್‌ಗಳು, ವಾಣಿಜ್ಯ ಮಳಿಗೆಗಳಿದ್ದು, ಈ ರಸ್ತೆ ರಥಬೀದಿಗೂ ಸಂಪರ್ಕಿಸುತ್ತದೆ. ಈ ರಸ್ತೆಯಲ್ಲಿ ಗುಂಡಿ ಬಿದ್ದು, ವಾಹನ ಸಂಚಾರ ಕಷ್ಟವಾಗುತ್ತಿದೆ. ಸದ್ಯ ರಸ್ತೆ ಕಾಮಗಾರಿಯೂ ನಡೆಯುತ್ತಿದ್ದು, ರಸ್ತೆಯ ಇಕ್ಕೆಲಗಳನ್ನು ಅಗೆಯಲಾಗಿದೆ. ಇದೇ ರಸ್ತೆ ಸಂಪರ್ಕಿತ ಜಿಎಚ್‌ಎಸ್‌ ರಸ್ತೆಯಲ್ಲಿಯೂ ತಾರಾ ಆಸ್ಪತ್ರೆವರೆಗೆ ಗುಂಡಿ ಸೃಷ್ಟಿಯಾಗಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

ಸ್ಥಳೀಯರಾದ ನಾಮದೇವ್‌ ಅವರು ಹೇಳುವ ಪ್ರಕಾರ, “ಜಿ.ಟಿ. ರಸ್ತೆ ತುಂಬಾ ಗುಂಡಿ ಬಿದ್ದಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಅನೇಕ ಬಾರಿ ಸ್ಮಾರ್ಟ್‌ ಸಿಟಿ, ಪಾಲಿಕೆಗೆ ಮನವಿ ಮಾಡಿದ್ದೇನೆ. ಆದರೆ ಈವರೆಗೆ ಸ್ಪಂದಿಸಿಲ್ಲ. ಈ ರಸ್ತೆಯಲ್ಲಿ ವಾಹನ ಸಂಚಾರವೂ ಹೆಚ್ಚಿದ್ದು, ಆದ್ಯತೆ ಮೇರೆಗೆ ಕಾಮಗಾರಿ ಕೈಗೊಳ್ಳಬೇಕು’ ಎನ್ನುತ್ತಾರೆ.

Advertisement

ಸಮರ್ಪಕ ಚರಂಡಿ ವ್ಯವಸ್ಥೆಯೂ ಇಲ್ಲ  :

ಜೋರಾಗಿ ಮಳೆ ಸುರಿದರಂತೂ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗುತ್ತದೆ. ರಸ್ತೆಯ ಗುಂಡಿ ತುಂಬಾ ನೀರು ತುಂಬಿ ವಾಹನ ಸವಾರರು ಅಪಘಾತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿದೆ. ಈ ಪ್ರದೇಶದಲ್ಲಿ ಮಳೆ ನೀರು ಹರಿಯಲು ಸಮರ್ಪಕ ಚರಂಡಿ ವ್ಯವಸ್ಥೆಯೂ ಇಲ್ಲ. ಇದೇ ಕಾರಣಕ್ಕೆ ಮಳೆ ನೀರು ರಸ್ತೆಯಲ್ಲೇ ಹರಿಯುತ್ತದೆ. ಇದೇ ಭಾಗದಲ್ಲಿ ಒಂದು ರಸ್ತೆ ಉರ್ವ ಸ್ಟೋರ್‌ಗೆ ಸಂಪರ್ಕ ಕಲ್ಪಿಸುತ್ತಿದ್ದು, ಇಲ್ಲಿ ಯಾವುದೇ ಮುನ್ನೆಚ್ಚರಿಕೆ ಫಲಕ ಇಲ್ಲದಿರುವುದು ಕೂಡ ಅಪಾಯಕ್ಕೆ ಕಾರಣವಾಗಿದೆ.

ದೇರೆಬೈಲ್‌ ಸಮೀಪದ ಮಾಲೆಮಾರ್‌ ಅಯ್ಯಪ್ಪ ಗುಡಿಯಿಂದ ಆಕಾಶಭವನಕ್ಕೆ ಹೋಗುವ ಮಾರ್ಗವು ಅವ್ಯವಸ್ಥೆಯಿಂದ ಕೂಡಿದ್ದು, ಇನ್ನೂ ಡಾಮರು ಮುಖ ಕಂಡಿಲ್ಲ. ಮಳೆಗಾಲದಲ್ಲಂತೂ ರಸ್ತೆ ಪೂರ್ತಿ ನೀರು ತುಂಬಿ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಸಾರ್ವಜನಿಕರು ಅನೇಕ ಬಾರಿ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ.

ಸುಲ್ತಾನ್‌ಬತ್ತೇರಿಗೆ ಗುಂಡಿಗಳ ಸ್ವಾಗತ:

ನಗರದ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಾದ ಸುಲ್ತಾನ್‌ಬತ್ತೇರಿ, ತಣ್ಣೀರುಬಾವಿ ಬೀಚ್‌ಗೆ ಹೊರ ಜಿಲ್ಲೆ, ರಾಜ್ಯಗಳಿಂದಲೂ ಪ್ರತೀ ದಿನ ನೂರಾರು ಮಂದಿ ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಅವರಿಗೆ ವಾಹನಗಳಲ್ಲಿ ತೆರಳಲು ಉರ್ವ ಮಾರುಕಟ್ಟೆಯಿಂದ ಸಮರ್ಪಕ ರಸ್ತೆ ವ್ಯವಸ್ಥೆ ಇಲ್ಲ. ಉರ್ವ ಮಾರುಕಟ್ಟೆ ಬಳಿಯಿಂದ ಸುಮಾರು 300 ಮೀ.ವರೆಗೆ ಕಾಂಕ್ರೀಟ್‌ ಹಾಕಲಾಗಿದೆ. ಬಳಿಕ ಅಲ್ಲಿಂದ ಸುಮಾರು 1 ಕಿ.ಮೀ. ಡಾಮರು ರಸ್ತೆಯಲ್ಲಿ ಸಾಗಬೇಕು. ಆದರೆ ಕಿರಿದಾದ ರಸ್ತೆ ತುಂಬಾ ಗುಂಡಿ, ಅವೈಜ್ಞಾನಿಕ ಹಂಪ್ಸ್‌ನಿಂದ ಕೂಡಿದ್ದು, ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಮಳೆಗಾಲದಲ್ಲಂತೂ ಗುಂಡಿ ತುಂಬಾ ನೀರು ನಿಂತು ದ್ವಿಚಕ್ರ ವಾಹನ ಸವಾರರು ಸ್ಕಿಡ್‌ ಆಗಿ ಬೀಳುವ ಪ್ರಮೇಯವೂ ಎದುರಾಗುತ್ತಿದೆ.

ಸಾಮಾಜಿಕ ಹೋರಾಟಗಾರ ಜಿ.ಕೆ. ಭಟ್‌ “ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ, “ಮಂಗಳೂರಿನ ಪ್ರಮುಖ ರಸ್ತೆಗಳಲ್ಲಿರುವ ಗುಂಡಿಗಳು ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಮಾರ್ಗನ್ಸ್‌ ಗೇಟ್‌, ಮಂಗಳಾದೇವಿ ಸ್ಮಾರ್ಟ್‌ಸಿಟಿ ಕಾಮಗಾರಿಗೆಂದು ರಸ್ತೆ ಅಗೆಯಲಾಗಿದೆ. ಸಕೀìಟ್‌ ಹೌಸ್‌ ರಸ್ತೆಯೂ ಹಾಳಾಗಿದೆ. ನಗರದಲ್ಲಿ ಕಾಂಕ್ರೀಟ್‌ ರಸ್ತೆ ಕಾಮಗಾರಿ ವೇಳೆಯೂ ಗುಣಮಟ್ಟ ನಿರ್ವಹಣೆಯೂ ಸಮರ್ಪಕವಾಗಿ ನಡೆಯುತ್ತಿಲ್ಲ. ಇನ್ನು ಹೊಸ ಕಾಂಕ್ರೀಟ್‌ ರಸ್ತೆ ಅಗೆದು ಅಲ್ಲಿ ಮತ್ತೆ ಮುಚ್ಚುವ ವೇಳೆ ಅಸಮರ್ಪಕ ಕಾಮಗಾರಿಯಿಂದಾಗಿ ಮತ್ತೆ ರಸ್ತೆ ಗುಂಡಿ ಬೀಳುತ್ತಿದೆ ಸ್ಥಳೀಯಾಡಳಿತ ಕೂಡಲೇ ಈ ಬಗ್ಗೆ ಗಮನ ಹರಿಸಬೇಕಿದೆ’ ಎನ್ನುತ್ತಾರೆ.

ಅಳಪೆಯಲ್ಲೂ ರಸ್ತೆ ಕಳಪೆ:

ಪಡೀಲ್‌ನಿಂದ ಪಂಪ್‌ವೆಲ್‌ ಸಂಪರ್ಕಿತ ರಸ್ತೆಯಲ್ಲಿ ದಿನನಿತ್ಯಲಘು-ಘನ ವಾಹನಗಳು ಸಂಚರಿಸುತ್ತದೆ. ಅಳಪೆ ಬಳಿ ರಸ್ತೆ ಮಧ್ಯ ಭಾಗ ದೊಡ್ಡದಾದ ಗುಂಡಿಬಿದ್ದು, ವಾಹನಗಳ ಟಯರ್‌ ಗುಂಡಿಗೆ ಸಿಲುಕಿ ಅಪಘಾತ ಉಂಟಾಗುವ ಸಾಧ್ಯತೆಯಿದೆ. ಈ ಡಾಮರು ರಸ್ತೆಗೆ ತೇಪ ಹಾಕಿದ ಕೆಲವೇ ದಿನಗಳಲ್ಲಿ ಮತ್ತೆ ಗುಂಡಿ ಬೀಳುತ್ತಿದೆ. ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಕೂಡಲೇ ಗಮನಹರಿಸಬೇಕು ಎನ್ನುವುದು ಸ್ಥಳೀಯರ ಅಭಿಪ್ರಾಯ.

ಮಂಗಳೂರಿನ ಕೆಲವೊಂದು ಕಡೆಗಳಲ್ಲಿನ ಮುಖ್ಯ ರಸ್ತೆ, ಒಳ ರಸ್ತೆ ಗುಂಡಿ ಬಿದ್ದಿದ್ದು, ಸದ್ಯದಲ್ಲಿಯೇ ಡಾಮರು ಹಾಕುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಈ ಕುರಿತಂತೆ ಸಂಬಂಧಪಟ್ಟ ಎಂಜಿನಿಯರ್‌ ಅವರಿಗೆ ಸೂಚನೆ ನೀಡುತ್ತೇನೆ. ಕೊರೊನಾ ಕಾರಣದಿಂದಾಗಿ ಪಾಲಿಕೆ ಆದಾಯಕ್ಕೆ ಹೊಡೆತ ಬಿದ್ದಿದ್ದು, ವಿಶೇಷ ಅನುದಾದ ಮುಖೇನ ಡಾಮರು ಹಾಕುವ ಕೆಲಸ ಕೈಗೊಳ್ಳುತ್ತೇವೆ. ಕೆಲವು ದಿನಗಳ ಹಿಂದೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿಯೂ ಈ ವಿಚಾರ ಪ್ರಸ್ತಾವಕ್ಕೆ ಬಂದಿದ್ದು, ಪ್ರಾಕೃತಿಕ ವಿಕೋಪ ನಿಧಿ ಹಣ ನಗರ ಪ್ರದೇಶಕ್ಕೆ ಬಿಡುಗಡೆಯಾಗುತ್ತಿಲ್ಲ. ಈ ಕುರಿತಂತೆ ಡಿಸಿಯವರ ಜತೆ ಚರ್ಚೆ ನಡೆಸಲಾಗಿದ್ದು, ರಾಜ್ಯ ಸರಕಾರಕ್ಕೂ ಮನವಿ ಸಲ್ಲಿಸಲಾಗುವುದು.ಪ್ರೇಮಾನಂದ ಶೆಟ್ಟಿ, ಮನಪಾ ಮೇಯರ್‌

-ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next