Advertisement

ರಸ್ತೆಪೂರ್ತಿ ಹೊಂಡ; ಜನಪ್ರತಿನಿಧಿಗಳೂ ಮೌನ!

10:53 AM Oct 24, 2018 | Team Udayavani |

ಹರೇಕಳ: ಬೆಳೆದು ನಿಂತಿರುವ ರಸ್ತೆ ಬದಿಯ ಗಿಡ ಗಂಟಿಗಳು, ಇಳಿಜಾರದ ರಸ್ತೆಯಲ್ಲಿ ಬಿದ್ದಿರುವ ದೊಡ್ಡ-ದೊಡ್ಡ ಹೊಂಡಗಳು. ಇದು ಹರೇಕಳ ಗ್ರಾಮದ ಒಡ್ಡೆದಗುಳಿಯಿಂದ ಫರೀದ್‌ ನಗರವನ್ನು ಸಂಪರ್ಕಿಸುವ ರಸ್ತೆಯ ಸ್ಥಿತಿ. ಎರಡು ಗ್ರಾಮಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾಗಿರುವ ಒಡ್ಡೆದಗುಳಿ ರಸ್ತೆ ಅಭಿವೃದ್ಧಿಗಾಗಿ ಈ ಪ್ರದೇಶದ ಜನರು ಕಾಯುತ್ತಿದ್ದಾರೆ.

Advertisement

ಅಂಬ್ಲಿಮೊಗರು ಗ್ರಾಮದ ಎಲಿಯಾರ್‌ ಪದವಿನಿಂದ ರುದ್ರಭೂಮಿ ಬಳಿಯಾಗಿ ಹರೇಕಳ ಸಂಪರ್ಕಿಸುವ ಒಡ್ಡೆದಗುಳಿ ರಸ್ತೆ ಹರೇಕಳ ಗ್ರಾಮದ ಕಿಸಾನ್‌ ನಗರ, ಕಲ್ಲಾಯಿ, ಸೇರಿದಂತೆ ವಿವಿಧ ಪ್ರದೇಶಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆ. ಅತ್ಯಂತ ಇಳಿಜಾರು ಮತ್ತು ಕಿರಿದಾದ ಈ ರಸ್ತೆ ಅಭಿವೃದ್ಧಿಗೆ ಹಲವು ವರ್ಷಗಳಿಂದ ಈ ಪ್ರದೇಶದ ಜನರು ಹರೇಕಳ ಗ್ರಾಮ ಪಂಚಾಯತ್‌ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳಿಗೆ ಅರ್ಜಿ ಸಲ್ಲಿಸುತ್ತಾ ಬಂದಿದ್ದಾರೆ. ಆದರೆ ಈವರೆಗೆ ಸ್ಪಂದಿಸಿಲ್ಲ ಎನ್ನುವುದು ಸ್ಥಳೀಯರ ಆರೋಪ.

ಹೇಗಿದೆ ರಸ್ತೆ
ಸುಮಾರು 200ಕ್ಕೂ ಹೆಚ್ಚು ಮನೆಗಳನ್ನು ಸಂಪರ್ಕಿಸುವ ಈ ರಸ್ತೆಯ ಎಲಿಯಾರ್‌ ಪದವಿನ ರುದ್ರಭೂಮಿ ಬಳಿಯಿರುವ ಉಮ್ಮರಬ್ಬ ಮನೆಯ ಬಳಿ ಸಂಪೂರ್ಣ ಇಳಿಜಾರಾಗಿದ್ದು ಕಲ್ಲಾಯಿವರಗೆ ಹೊಂಡಗಳು ಬಿದ್ದಿದೆ. ಜನಸಾಮಾನ್ಯರು ನಡೆದಾಡುವ ಫುಟ್‌ಪಾತ್‌ ಸಂಪೂರ್ಣ ಗಿಡಗಂಟಿಗಳಿಂದ ತುಂಬಿವೆ. ಕಲ್ಲಾಯಿ ಬಳಿ ರೋಜಿ ಡಿ’ಸೋಜಾ ಅವರ ಮನೆ ಬಳಿಯ ರಸ್ತೆಯಿಂದ ಗೋಳಿದಪಡ್ಪು ಮಹಮ್ಮದ್‌ ಕುಂಞಿ ಅವರ ಮನೆ ಬಳಿಯಿರುವ ರಸ್ತೆಯವರೆಗೆ ಖಾಸಗಿ ಜಾಗದ ಮಾಲಕರು ರಸ್ತೆ ಬದಿಗೆ ಬೇಲಿ ಹಾಕಿದರೂ ಪಂಚಾಯತ್‌ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸ್ಥಳೀಯರು ಅಪಾದಿಸಿದ್ದಾರೆ.

ಮೆಸ್ಕಾಂ ಇಲಾಖೆ ಎಚ್ಚೆತ್ತಿಲ್ಲ
ರುದ್ರಭೂಮಿಯಿಂದ ಕಲ್ಲಾಯಿ ವರೆಗಿನ ಬೀದಿ ದೀಪಗಳು ಸಂಪೂರ್ಣ ಹಾಳಾಗಿವೆ. ಜನರು ಕತ್ತಲೆಯಲ್ಲೇ ಗಿಡಗಂಟಿಗಳ ನಡುವೆ ನಡೆಯುವ ಸ್ಥಿತಿ ನಿರ್ಮಾಣವಾಗಿದೆ. ವಿದ್ಯುತ್‌ ಕಂಬಕ್ಕೆ ತಾಗಿರುವ ಮರದ ರೆಂಬೆಗಳು ತೆಗೆಯಲು ಹಲವಾರು ತಿಂಗಳಿನಿಂದ ಮೆಸ್ಕಾಂ ಇಲಾಖೆಗೆ ಮನವಿ ಮಾಡಿದರೂ ಮೆಸ್ಕಾಂ ಇಲಾಖೆ ಎಚ್ಚೆತ್ತುಕೊಳ್ಳದೆ ನಿರ್ಲಕ್ಷ್ಯ ವಹಿಸಿದೆ.

ಸಚಿವರ ಸ್ಪಂದನೆಯ ನಿರೀಕ್ಷೆ
ಮಾಜಿ ಶಾಸಕ ಯು.ಟಿ.ಫರೀದ್‌ ನಗರವನ್ನು ಸಂಪರ್ಕಿಸುವ ಈ ರಸ್ತೆ ಅಭಿವೃದ್ಧಿಗೆ ಸಚಿವ ಖಾದರ್‌ ಅವರಲ್ಲಿ ಮನವಿ ಮಾಡಿದ್ದು, ಸ್ಪಂದನೆಗಾಗಿ ಕಾಯುತ್ತಿದ್ದಾರೆ. 

Advertisement

ಪಂಚಾಯತ್‌ ಮೌನ 
ಹಲವು ಬಾರಿ ರಸ್ತೆ ಹೊಂಡ ಮತ್ತು ಗಿಡಗಂಟಿಗಳ ತೆರವಿಗೆ ಪಂಚಾಯತ್‌ಗೆ ಮನವಿ ಮಾಡಿದ್ದೇವೆ. ಆದರೆ ಪಂಚಾಯತ್‌ ಸ್ಪಂದಿಸಿಲ್ಲ. ಇಳಿಜಾರಿನಲ್ಲಿ ಅಪಘಾತವಾಗಿ ಅನೇಕ ವಾಹನ ಚಾಲಕರು ಗಾಯಗೊಂಡಿದ್ದಾರೆ. ರೆಂಬೆಗಳು ವಿದ್ಯುತ್‌ ಕಂಬದ ಮೇಲೆ ಬೀಳುವ ಸ್ಥಿತಿ ಇದ್ದಾಗ ನಾನೇ ಸ್ವತಃ ಹಣ ಖರ್ಚು ಮಾಡಿ ರೆಂಬೆಗಳನ್ನು ಕಡಿಸಿದ್ದೇನೆ.
– ಉಮ್ಮರಬ್ಬ, ಸ್ಥಳೀಯ

ಕ್ರಮ ಅಗತ್ಯ
ಹಲವು ವರ್ಷಗಳಿಂದ ರಸ್ತೆ ಸಮಸ್ಯೆಯ ಬಗ್ಗೆ ಜನಪ್ರತಿನಿಧಿಗಳ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ. ವಿದ್ಯಾರ್ಥಿಗಳು ಸೇರಿದಂತೆ ಸ್ಥಳೀಯರು ಈ ರಸ್ತೆಯಲ್ಲಿ ಸಂಚರಿಸುವಾಗ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಶೀಘ್ರವೇ ಜನಪ್ರತಿನಿಧಿಗಳು ಮತ್ತು ಸ್ಥಳಿಯಾಡಳಿತ ಸಂಸ್ಥೆ ಕ್ರಮ ಕೈಗೊಳ್ಳಬೇಕಾಗಿದೆ.
ಜನಾರ್ದನ ಆಚಾರ್ಯ,
  ಸ್ಥಳೀಯ ನಿವಾಸಿ

ಶೀಘ್ರ ಕ್ರಮ
ಒಡ್ಡೆದಗುಳಿ ರಸ್ತೆ ಅಭಿವೃದ್ಧಿ ವಿಚಾರದಲ್ಲಿ ಸ್ಥಳೀಯ ಸದಸ್ಯರ ಮಾಹಿತಿ ಪಡೆದು ಮುಂದಿನ ಸಭೆಯಲ್ಲಿ ಚರ್ಚೆ ನಡೆಸುತ್ತೇನೆ. ಈಗಾಗಲೇ ರಸ್ತೆ ಬದಿಯ ಗಿಡಗಂಟಿಗಳನ್ನು ತೆರವು ನಡೆಸುವ ಕಾರ್ಯಕ್ಕೆ ಆದೇಶ ನೀಡಿದ್ದು, ಬೀದಿ ದೀಪಗಳನ್ನು ಸರಿಪಡಿಸಲು ಕ್ರಮಕೈಗೊಳ್ಳಲಾಗುವುದು.
 - ಅಬೂಬಕ್ಕಾರ್‌ ಪಿ.ಕೆ., ಪಂಚಾಯತ್‌ ಮೌನ ಪಿಡಿಒ

ವಸಂತ್‌ ಎನ್‌. ಕೊಣಾಜೆ 

Advertisement

Udayavani is now on Telegram. Click here to join our channel and stay updated with the latest news.

Next