Advertisement

ರಸ್ತೆ ಅಪಘಾತ: ಸಾಮಾಜಿಕ ಹೋರಾಟಗಾರ ಸಾವು

12:10 AM Sep 24, 2022 | Team Udayavani |

ಬೈಂದೂರು: ಬೈಂದೂರು ಹಿತರಕ್ಷಣಾ ವೇದಿಕೆ ಅಧ್ಯಕ್ಷ, ಸಾಮಾಜಿಕ ಹೋರಾಟಗಾರ ಜಗದೀಶ ಪಟವಾಲ್‌ (58) ಅವರು ಯಡ್ತರೆ ಬೈಪಾಸ್‌ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಸಾಗಿಸುತ್ತಿರುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

Advertisement

ಮೃತರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.

ಜಗದೀಶ ಪಟವಾಲ್‌ ಅವರು ಪತ್ನಿಯೊಂದಿಗೆ ಬಿಜೂರಿನಿಂದ ಬೈಂದೂರಿಗೆ ಬರುತ್ತಿರುವಾಗ ಯಡ್ತರೆ ಬೈಪಾಸ್‌ ಬಳಿ ಬೈಕ್‌ ಬಲ ಭಾಗಕ್ಕೆ ತಿರುಗಿಸಿದಾಗ ಹಿಂದಿನಿಂದ ಬಂದ ಬೈಕ್‌ ಢಿಕ್ಕಿ ಹೊಡೆದಿದೆ.

ಪತ್ನಿ ಆಸ್ಪತ್ರೆಗೆ ದಾಖಲು
ಅಪಘಾತದ ರಭಸಕ್ಕೆ ಜಗದೀಶ ಪಟವಾಲ್‌ ಗಂಭೀರ ಗಾಯಗೊಂಡಿದ್ದು, ತತ್‌ಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಗಿತ್ತು. ಆದರೆ ತೀವ್ರ ಗಾಯಗೊಂಡ ಅವರು ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಅವರ ಹಿಂಬದಿಯಲ್ಲಿ ಕುಳಿತಿದ್ದ ಪತ್ನಿ ಗಾಯಗೊಂಡಿದ್ದು, ಮಣಿಪಾಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಾಮಾಜಿಕ ಕಳಕಳಿ ಹೊಂದಿದ್ದ ಜಗದೀಶ್‌ ಪಟವಾಲ್‌ ಅವರು ಬೈಂದೂರಿನ ಶ್ರೀ ಮೂಕಾಂಬಿಕಾ ರೈಲ್ವೆಯ ಹೋರಾಟ ಸಲಹಾ ಸಮಿತಿ ಸ್ಥಾಪಕ ಸದಸ್ಯ ಹಾಗೂ ಕಾರ್ಯದರ್ಶಿಯಾಗಿ ರೈಲು ನಿಲ್ದಾಣದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದರು. ಬೈಂದೂರಿನಲ್ಲಿ ನಾಗರಿಕ ಹಿತರಕ್ಷಣ ವೇದಿಕೆ ಹುಟ್ಟು ಹಾಕಿ ಬೈಂದೂರು ತಾಲೂಕು ರಚನೆ, ಮಿನಿ ವಿಧಾನಸೌಧ, ಅಗ್ನಿಶಾಮಕ ಠಾಣೆ, ನ್ಯಾಯಾಲಯ, ಪಟ್ಟಣ ಪಂಚಾಯತ್‌ ರಚನೆ ಸೇರಿದಂತೆ ಬೈಂದೂರು ಅಭಿವೃದ್ಧಿಗಾಗಿ ಸಾಕಷ್ಟು ಹೋರಾಟ ನಡೆಸಿದ್ದರು.

Advertisement

ಬೈಂದೂರು ಪೇಟೆ ಬಂದ್‌
ಜಗದೀಶ ಪಟವಾಲ್‌ ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಬುಧವಾರ ಮಧ್ಯಾಹ್ನ ಬೈಂದೂರು ಪೇಟೆಯಲ್ಲಿ ಬಹುತೇಕ ಎಲ್ಲ ಅಂಗಡಿ ಮುಂಗಟ್ಟುಗಳು ಸ್ವಯಂಪ್ರೇರಿತವಾಗಿ ಬಂದ್‌ ಮಾಡಿ ಅಗಲಿದ ನಾಯಕನಿಗೆ ಸಂತಾಪ ಸೂಚಿಸಿದರು.

ದೂರು ದಾಖಲು
ಸುರೇಶ್‌ ನಾಯ್ಕ ಅವರು ನೀಡಿದ ದೂರಿನಂತೆ ಹಿಂದಿನಿಂದ ಬಂದು ಢಿಕ್ಕಿ ಹೊಡೆದ ಬೈಕ್‌ ಸವಾರ ಮಹಮ್ಮದ್‌ ಇಬ್ರಾಹಿಂ ಅವರ ಮೇಲೆ ಅತೀ ವೇಗ ಹಾಗೂ ಅಜಾಗರೂಕತೆ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next