Advertisement

ಆಟೋರಿಕ್ಷಾಕ್ಕೆ ಪಿಕಪ್‌ ಢಿಕ್ಕಿ: ರಿಕ್ಷಾ ಚಾಲಕ ಸಾವು

12:31 AM Nov 30, 2022 | Team Udayavani |

ಉಪ್ಪಿನಂಗಡಿ: ಎಟಿಎಂಗೆ ಹಣ ಸಾಗಾಟ ಮಾಡುವವಾಹನವೊಂದು ಆಟೋರಿಕ್ಷಾವೊಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ 34 ನೆಕ್ಕಿಲಾಡಿ ಗ್ರಾಮದ ಬೊಳ್ಳಾರು ಎಂಬಲ್ಲಿ ಮಂಗಳವಾರ ಸಂಜೆ ನಡೆದಿದೆ.

Advertisement

34 ನೆಕ್ಕಿಲಾಡಿಯ ಸುಭಾಶ್‌ ನಗರದ ದಿ| ಅಣ್ಣಿ ಪೂಜಾರಿ ಅವರ ಪುತ್ರ ವಾಸು ಪೂಜಾರಿ (54) ಮೃತಪಟ್ಟವರು. ಆಟೋರಿಕ್ಷಾದಲ್ಲಿ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಸಂದರ್ಭ ಬಿ.ಸಿ.ರೋಡ್‌ ಕಡೆಗೆ ಹೋಗುತ್ತಿದ್ದ ಎಟಿಎಂಗೆ ಹಣ ಸಾಗಾಟದ ವಾಹನ ಮುಖಾಮುಖೀ ಢಿಕ್ಕಿ ಹೊಡೆದಿದೆ.

ಪಿಕಪ್‌ ಚಾಲಕ ಅತೀ ವೇಗದಿಂದ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಚಾಲನೆ ಮಾಡಿರುವುದೇ ಅಪಘಾತಕ್ಕೆ ಕಾರಣವೆನ್ನಲಾಗಿದೆ. ಢಿಕ್ಕಿಯ ರಭಸಕ್ಕೆ ರಿಕ್ಷಾ ನಜ್ಜುಗುಜ್ಜಾಗಿದ್ದು ಚಾಲಕ ವಾಸು ಪೂಜಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪಿಕಪ್‌ ವಾಹನದಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಉಪ್ಪಿನಂಗಡಿ ಪೊಲೀಸರು ಹಾಗೂ ಪುತ್ತೂರು ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಡ ಕುಟುಂಬ
ಬಡ ಮಧ್ಯಮ ವರ್ಗದ ಕುಟುಂಬದ ವಾಸು ಪೂಜಾರಿ ಉಪ್ಪಿನಂಗಡಿಯ ಕೂಲ್‌ಡ್ರಿಂಕ್ಸ್‌ ಕಂಪೆನಿಯೊಂದರ ಟೆಂಪೋದಲ್ಲಿ ಚಾಲಕನಾಗಿ ದುಡಿಯುತ್ತಿದ್ದು, ಬಿಡುವಿನ ವೇಳೆ ತನ್ನದೇ ರಿಕ್ಷಾದಲ್ಲಿಯೂ ದುಡಿಯುತ್ತಿದ್ದರು.

Advertisement

ಸುಭಾಶ್‌ನಗರದಲ್ಲಿ ಐದು ಸೆಂಟ್ಸ್‌ ಜಾಗದಲ್ಲಿ ಮನೆ ಮಾಡಿಕೊಂಡಿದ್ದರು. ಅವರ ಪುತ್ರಿಗೆ ಮದುವೆಯಾಗಿದ್ದರೆ ಪುತ್ರರಲ್ಲಿ ಓರ್ವ ಶಾಲೆ ಬಿಟ್ಟಿದ್ದರೆ ಇನ್ನೋರ್ವ ಶಾಲೆಗೆ ಹೋಗುತ್ತಿದ್ದ. ಇವರ ದುಡಿಮೆಯೇ ಕುಟುಂಬಕ್ಕೆ ಆಧಾರವಾಗಿತ್ತು. ಮೃತರು ಪತ್ನಿ, ಪುತ್ರಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಅಪಾಯಕ್ಕೆ ಕಾರಣವಾಗುತ್ತಿದೆ ಹೆದ್ದಾರಿ ಕಾಮಗಾರಿ!
ಬಿ.ಸಿ.ರೋಡು- ಅಡ್ಡಹೊಳೆ ಚತುಷ್ಪಥ ಕಾಮಗಾರಿ ಈಗ ಪ್ರಗತಿಯಲ್ಲಿದ್ದು, ಅಲ್ಲಲ್ಲಿ ಬೃಹತ್‌ ಯಂತ್ರೋಪಕರಣಗಳಿಂದ ರಸ್ತೆಯ ಬದಿಗಳಲ್ಲಿ ಅಗೆಯುವುದು ನಡೆಯುತ್ತಿವೆ. ಇದರಿಂದ ರಸ್ತೆಯಿಡೀ ಧೂಳು ಆವರಿಸುವಂತಾಗಿದೆ. ಇನ್ನೊಂದೆಡೆ ಪ್ರಸ್ತುತ ರಾಷ್ಟ್ರೀಯ ಹೆದ್ದಾರಿಯೂ ಹೊಂಡ- ಗುಂಡಿಗಳಿಂದ ಕೂಡಿದೆ. ಅಲ್ಲದೇ, ಕಾಮಗಾರಿಗಾಗಿ ಅಲ್ಲಲ್ಲಿ ಹೆದ್ದಾರಿಯ ಬದಿಯನ್ನು ಅಗೆದು ಹಾಕಲಾಗಿದೆ. ಇದು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದು, ಅಪಘಾತಗಳಿಗೆ ಕಾರಣವಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next